ನ.15ಕ್ಕೆ KAS ಪ್ರಿಲಿಮ್ಸ್ ಪರೀಕ್ಷೆ?: 319 ಹುದ್ದೆಗೆ 1.47 ಲಕ್ಷ ಅರ್ಜಿ, ಅಕ್ರಮ ತಡೆಗೆ KPSC ಕಠಿಣ ಕ್ರಮ
ಕರ್ನಾಟಕ ಲೋಕಸೇವಾ ಆಯೋಗ (KPSC) ತನ್ನ ಆಡಳಿತಾತ್ಮಕ ಸವಾಲುಗಳು ಹಾಗೂ ವಿವಾದಗಳ ನಡುವೆಯೂ 2026-27ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಗ್ರೂಪ್ 'ಎ' ಮತ್ತು 'ಬಿ' ವೃಂದದ 319 ಹುದ್ದೆಗಳ ಭರ್ತಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ವೇಳಾಪಟ್ಟಿಯಂತೆ ನವೆಂಬರ್ 15ರಂದು ಕೆಎಎಸ್ ಪ್ರಿಲಿಮ್ಸ್ ಪರೀಕ್ಷೆ ನಡೆಸಲು ಆಯೋಗ ಸಿದ್ಧತೆ ಆರಂಭಿಸಿದೆ.
ಈ ಬಾರಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಕಟ್ಟುನಿಟ್ಟಿನ ಶಿಸ್ತಿನೊಂದಿಗೆ ಪರೀಕ್ಷೆ ನಡೆಸಲು ಆಯೋಗ ತೀರ್ಮಾನಿಸಿದೆ.

319 ಹುದ್ದೆಗಳಿಗೆ ಭಾರಿ ಪೈಪೋಟಿ: 1.47 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ
ರಾಜ್ಯದಲ್ಲಿ ಒಟ್ಟು 319 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಇದರಲ್ಲಿ ಉಳಿಕೆ ಮೂಲ ವೃಂದದ 297 ಹಾಗೂ ಕಲ್ಯಾಣ ಕರ್ನಾಟಕ ವೃಂದದ 22 ಹುದ್ದೆಗಳು ಸೇರಿವೆ. ಗ್ರೂಪ್ ' ಎ ' ಹಂತದ 117 ಮತ್ತು ಗ್ರೂಪ್ 'ಬಿ' ಹಂತದ 202 ಹುದ್ದೆಗಳಿಗಾಗಿ ಬರೋಬ್ಬರಿ 1.47 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅಂದರೆ ಪ್ರತಿ ಒಂದು ಹುದ್ದೆಗೆ ಸರಾಸರಿ 461 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಆರಂಭದಲ್ಲಿ ಪೋರ್ಟಲ್‌ನಲ್ಲಿ 2.70 ಲಕ್ಷಕ್ಕೂ ಹೆಚ್ಚು ನೋಂದಣಿಗಳು ಆಗಿದ್ದರೂ, ಅಂತಿಮವಾಗಿ 1.47 ಲಕ್ಷ ಮಂದಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ನಿಗದಿಪಡಿಸಿದಂತೆ ನವೆಂಬರ್ 15 ರಂದೇ ಪರೀಕ್ಷೆ ನಡೆಸಲು ಸಕಲ ಪೂರ್ವಸಿದ್ಧತೆಗಳು ನಡೆಯುತ್ತಿವೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್. ರೇಷ್ಮಾ ಸ್ಪಷ್ಟಪಡಿಸಿದ್ದಾರೆ.
ಅಕ್ರಮಗಳಿಗೆ ಬ್ರೇಕ್ ಹಾಕಲು ಒಎಂಆರ್ ಶೀಟ್ ಆಧಾರಿತ ಪರೀಕ್ಷಾ ಸುಧಾರಣೆಗಳು
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿಬಂದ ಸಾಲು ಸಾಲು ಲೋಪದೋಷಗಳಿಂದ ಪಾಠ ಕಲಿತಿರುವ ಆಯೋಗ, ಪರೀಕ್ಷಾ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರಲು ಮೂರು ಪ್ರಮುಖ ಸುಧಾರಣೆಗಳನ್ನ ಜಾರಿಗೆ ತರುತ್ತಿದೆ.
ಒಎಂಆರ್ ಶೀಟ್ ತಿರುಚುವಿಕೆ ತಡೆಯಲು ಮೂರು ಪ್ರತಿಗಳ ವ್ಯವಸ್ಥೆ ಮಾಡಲಾಗುತ್ತಿದ್ದು, ಪರೀಕ್ಷೆ ಮುಗಿದ 24 ಗಂಟೆಗಳ ಒಳಗೆ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳು ಮತ್ತು ಕೀಲಿ ಉತ್ತರಗಳನ್ನ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲು ನಿರ್ಧರಿಸಲಾಗಿದೆ. ಇದರಿಂದ ಅಭ್ಯರ್ಥಿಗಳಲ್ಲಿ ಆಯೋಗದ ಕಾರ್ಯವೈಖರಿ ಬಗ್ಗೆ ವಿಶ್ವಾಸ ಮೂಡಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸುವ ಗುರಿ
ವರ್ಷಗಟ್ಟಲೆ ವಿಳಂಬವಾಗುತ್ತಿದ್ದ ನೇಮಕಾತಿ ಪ್ರಕ್ರಿಯೆಗೆ ಅಂತ್ಯ ಹಾಡಲು ಆಯೋಗ ಪಣ ತೊಟ್ಟಿದೆ. ಪರೀಕ್ಷೆ , ಮೌಲ್ಯಮಾಪನ ಮತ್ತು ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗಳನ್ನ ಚುರುಕುಗೊಳಿಸಿ ಗರಿಷ್ಠ 11 ತಿಂಗಳ ಅವಧಿಯಲ್ಲೇ ಇಡೀ ಪ್ರಕ್ರಿಯೆ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ. ಇದಲ್ಲದೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಕೇಂದ್ರಗಳಿಗೆ ಒದಗಿಸುವ ಮಾದರಿಯಲ್ಲೇ ಪರೀಕ್ಷಾ ಕೇಂದ್ರಗಳಿಗೂ ಹೈಟೆಕ್ ಭದ್ರತಾ ವ್ಯವಸ್ಥೆ ಹಾಗೂ ಕಟ್ಟುನಿಟ್ಟಿನ ಕಣ್ಗಾವಲು ಅಳವಡಿಸಲು ಚಿಂತನೆ ನಡೆಸಲಾಗಿದೆ.
ಹೈಕೋರ್ಟ್ ಅಂಗಳದಲ್ಲಿ ಹಿಂದಿನ 384 ಹುದ್ದೆಗಳ ಅಂತಿಮ ಆಯ್ಕೆಪಟ್ಟಿ
ಒಂದೆಡೆ ಹೊಸ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿದ್ದರೂ, 2024-25ನೇ ಸಾಲಿನ 384 ಕೆಎಎಸ್ ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ ಬಿಡುಗಡೆ ವಿಚಾರ ಇನ್ನೂ ಹೈಕೋರ್ಟ್ ಅಂಗಳದಲ್ಲಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಅಂತಿಮ ಪಟ್ಟಿ ಪ್ರಕಟಿಸಬಾರದು ಎಂಬ ವಿಭಾಗೀಯ ಪೀಠದ ಆದೇಶದಿಂದಾಗಿ ಆಯೋಗ ಕಾದುನೋಡುವ ತಂತ್ರ ಅನುಸರಿಸಿದೆ. ಈ ಕಾನೂನು ತೊಡಕುಗಳನ್ನು ಬೇಗ ಬಗೆಹರಿಸಿ, ಹೊಸ ಪರೀಕ್ಷೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಪಾರದರ್ಶಕವಾಗಿ ನಡೆಸುವುದು ಕೆಪಿಎಸ್‌ಸಿಯ ಪ್ರಸ್ತುತ ಆದ್ಯತೆಯಾಗಿದೆ.


Click it and Unblock the Notifications
