KPSC: ಬೆಳಿಗ್ಗೆ ಪರೀಕ್ಷೆ, ಮಧ್ಯರಾತ್ರಿ 12 ಗಂಟೆಗೆ ಹಾಲ್ ಟಿಕೆಟ್ ವಿತರಣೆ ಆರೋಪ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪೂರ್ವಭಾವಿ ಪರೀಕ್ಷೆಯಲ್ಲಿ ಎಡವಟ್ಟುಗಳು ನಡೆಯುತ್ತಲೇ ಇವೆ ಎಂಬ ಆರೋಪ ಮತ್ತೆ ಕೇಳಿಬಂದಿದೆ. ಇದೀಗ ಪರೀಕ್ಷೆ ಹಿಂದಿನ ದಿನ ಮಧ್ಯರಾತ್ರಿವರೆಗೆ ಅರ್ಜಿ ತುಂಬಿ ಹಾಲ್ ಟಿಕೆಟ್ ಪಡೆಯುವಂತೆ ಗೊಂದಲ ಸೃಷ್ಟಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಮಹಿಳಾ ಅಭ್ಯರ್ಥಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿಡುತ್ತಾ ವಿಡಿಯೋ ಹಂಚಿಕೊಂಡಿರುವುದನ್ನು ವಿಜಯೇಂದ್ರ ಉಲ್ಲೇಖಿಸಿದ್ದಾರೆ.
ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು. ಆದರೆ ಮಧ್ಯರಾತ್ರಿ ಅರ್ಜಿ ತುಂಬಿ ಪ್ರವೇಶಾತಿ (ಹಾಲ್ ಟಿಕೆಟ್) ಪಡೆಯುವಂತೆ ಗೊಂದಲ ಸೃಷ್ಟಿಸಿರುವ ಕೆಪಿಎಸ್‌ಸಿ ಕಾರ್ಯವೈಖರಿ ಪರೀಕ್ಷಾರ್ಥಿಗಳಿಗೆ ಅನಗತ್ಯ ಕಿರುಕುಳ ನೀಡುವ ದುರುದ್ದೇಶ ಪ್ರತಿಬಿಂಬಿಸಿದೆ. ಉದ್ಯೋಗಾಂಕ್ಷಿ ಅಭ್ಯರ್ಥಿಗಳ ಭವಿಷ್ಯದ ಜೊತೆ ಕೆಪಿಎಸ್‌ಸಿ ಚೆಲ್ಲಾಟವಾಡುತ್ತಿದ್ದರೆ ರಾಜ್ಯ ಸರ್ಕಾರ ಕಣ್ಣುಮುಚ್ಚಿಕೊಂಡು ನೋಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೇ 2ರ ಮಧ್ಯರಾತ್ರಿ 12 ಗಂಟೆಯವರೆಗೆ ಕೆಪಿಎಸ್‌ಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ, ಮಧ್ಯರಾತ್ರಿ ಹಾಲ್ ಟಿಕೆಟ್ ಪಡೆದು ಹೋಗಿ ಮರುದಿನ ಬೆಳಗ್ಗೆಯೇ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯುವಂತೆ ಮಾಡಿರುವ ಗೊಂದಲದ ವ್ಯವಸ್ಥೆಯಿಂದ ಹಿಂಸೆ ಅನುಭವಿಸುತ್ತಿರುವ ಪರೀಕ್ಷಾರ್ಥಿಗಳು ಹಾಗೂ ಅವರ ಕುಟುಂಬದವರ ಶಾಪ ರಾಜ್ಯ ಸರ್ಕಾರಕ್ಕೆ ತಟ್ಟದೇ ಬಿಡದು ಎಂದು ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭಾ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಮಾತು ಕೊಟ್ಟು, ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಆದರೆ ಬಿಜೆಪಿ ನೊಂದವರ ದನಿಯಾಗಿ ನಿಲ್ಲಲಿದೆ.

ಎತ್ತ ಸಾಗುತ್ತಿದೆ ಕರ್ನಾಟಕ, ತಾಲಿಬಾನ್ ಆಡಳಿತ ಕೂಡಾ ಇಷ್ಟು ಕೆಟ್ಟು ಹೋಗಿಲ್ಲ ಎಂದು ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದೆ. ಮಧ್ಯರಾತ್ರಿ ಸುರಿಯುತ್ತಿರುವ ಮಳೆ, ವಿಪರೀತ ಚಳಿ, ಹಸಿದ ಹೊಟ್ಟೆ, ಒಬ್ಬಾಕೆಯ ಕಂಕುಳಲ್ಲಿ ಪುಟ್ಟ ಕಂದಮ್ಮ, ಕೈಯಲ್ಲಿ ಶೈಕ್ಷಣಿಕ ದಾಖಲೆಗಳು.. ಈ ದೃಶ್ಯಗಳು ಊರಿಗೆ ಹೊರಟವರೋ, ಪ್ರವಾಸಕ್ಕೆ ಹೊರಟವರು ಎದುರಿಸುತ್ತಿರುವ ಸನ್ನಿವೇಶಗಳಲ್ಲ, ಇದೆಲ್ಲವೂ ಭಾವೀ ಸರ್ಕಾರಿ ಅಧಿಕಾರಿಗಳಾಗಬೇಕಿರುವ ಅಭ್ಯರ್ಥಿಗಳು ನಾಲಾಯಕ್ ಕಾಂಗ್ರೆಸ್ ಸರ್ಕಾರದಿಂದ ಎದುರಿಸುತ್ತಿರುವ ಸಮಸ್ಯೆಗಳು ಎಂದು ದೂರಿದೆ.
ಕೆಪಿಎಸ್‌ಸಿ ಕರ್ಮಕಾಂಡಗಳಿಗೆ ನ್ಯಾಯಾಲಯದಿಂದ ಉಗಿಸಿಕೊಂಡಿದ್ದ ಸರ್ಕಾರ, ಅಂತಿಮವಾಗಿ ಮೇ 3ರಂದು ಪರೀಕ್ಷೆ ನಡೆಸುವುದಾಗಿ ಒಪ್ಪಿಕೊಂಡಿತ್ತು. ಆದರೆ ಪರೀಕ್ಷೆಯ ಹಿಂದಿನ ದಿನ ಮಧ್ಯರಾತ್ರಿ 12 ಗಂಟೆಗೆ ಹಾಲ್ ಟಿಕೆಟ್ ನೀಡುತ್ತೇವೆ ಎನ್ನುವ ಮೂಲಕ ಅಭ್ಯರ್ಥಿಗಳನ್ನು ಅತಂತ್ರರನ್ನಾಗಿಸಿದೆ. ನಡುರಾತ್ರಿ ಅರ್ಜಿ ಸಲ್ಲಿಸಿ, ಹಾಲ್ ಟಿಕೆಟ್ ಪಡೆದು ಮರುದಿನ ಪರೀಕ್ಷೆಗೆ ಹಾಜರಾಗಬೇಕು ಎಂದರೆ ಹೇಗೆ ಸಾಧ್ಯ? ಎಂದು ಕೇಳಿದೆ.

ದೂರದ ಊರುಗಳ ಅಭ್ಯರ್ಥಿಗಳು ಏನು ಮಾಡಬೇಕು? 12 ಗಂಟೆ ರಾತ್ರಿಗೆ ಹೆಣ್ಣು ಮಕ್ಕಳು, ಮಹಿಳೆಯರು ಬರಲು ಸಾಧ್ಯವೇ? ನಡುರಾತ್ರಿ ಬರುವ ಹೆಣ್ಣು ಮಕ್ಕಳಿಗೆ ಸರ್ಕಾರ ಎಸ್ಕಾರ್ಟ್ ವ್ಯವಸ್ಥೆ ಮಾಡುತ್ತದೆಯೇ? ಹೀಗೆ ಪ್ರಶ್ನೆಗಳ ಸುರಿಮಳೆಗಳನ್ನು ಅಭ್ಯರ್ಥಿಯೋರ್ವರು ಸಿಎಂ ಸಿದ್ದರಾಮಯ್ಯ ಅವರ ಮುಖಕ್ಕೆ ಎಸೆದಿದ್ದಾರೆ, ಏನು ಉತ್ತರ ಹೇಳುತ್ತಾರೆ ತುಘಲಕ್ ದರ್ಬಾರಿನ ರಾಯಭಾರಿಗಳು? ನೆಟ್ಟಗೆ ಒಂದು ಪರೀಕ್ಷೆ ನಡೆಸಲು ಕೈಲಾಗದವರಿಗೆ ಆಡಳಿತ ನಡೆಸಲು ಯಾವ ಅರ್ಹತೆಯಿದೆ? ಎಂದು ದೂರಿದೆ.
ಅಭ್ಯರ್ಥಿಗಳ ಮೇಲೆ ಸೇಡು: ಅಶೋಕ್
ಕೆಪಿಎಸ್‌ಸಿ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದ ಅಭ್ಯರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೂರಿದ್ದಾರೆ. ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಮೇ 3ರಿಂದ ಆರಂಭವಾಗುವ ಮುಖ್ಯ ಪರೀಕ್ಷೆ ತೆಗೆದುಕೊಳ್ಳುವ ಅನುಮತಿ ಪಡೆದಿದ್ದರು. ಆದರೆ ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕಾಂಗ್ರೆಸ್ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಂದು ಕಡೆ ಧಾರಾಕಾರ ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕು ಎನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ. ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ? ಎಂದು ಕಾಂಗ್ರೆಸ್ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರು ಮಕ್ಕಳು ಮುಂದೆ ಬರಬಾರದಾ? ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ. ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರಲ್ಲ ಎಂದು ಎಚ್ಚರಿಸಿದ್ದಾರೆ.
ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ
ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಅಭ್ಯರ್ಥಿಗಳು ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರಿಗೆ ಪತ್ರ ಬರೆದಿದ್ದಾರೆ. ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರ ಹಾಗೂ ಉತ್ತರಗಳಲ್ಲಿ ಲೋಪದ ಕಾರಣಕ್ಕೆ ಮರುಪರೀಕ್ಷೆ ನಡೆಸುವಂತೆ ಕೋರಿ ಹೈಕೋರ್ಟ್ 185 ಮಾತ್ರವಷ್ಟೇ ಅರ್ಜಿ ಸಲ್ಲಿಸಿದ್ದರು. ಇವರಿಗೆ ಮಾತ್ರವೇ ಮುಖ್ಯ ಪರೀಕ್ಷೆ ಬರೆಯಲು ಹೈಕೋರ್ಟ್ ಅವಕಾಶ ನೀಡಿದೆ. ಆರ್ಥಿಕ ಸಮಸ್ಯೆಯಿಂದ ಎಲ್ಲರೂ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಪರೀಕ್ಷೆ ಬರೆಯುವ ಅವಕಾಶ ಕೈತಪ್ಪಿದೆ ಎಂದು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications