ಕಾಂಗ್ರೆಸ್ ಹಿರಿಯ ನಾಯಕರ ಸಭೆ; ಹೈಕಮಾಂಡ್‌ಗೆ ವರದಿ!
ಬೆಂಗಳೂರು, ಜನವರಿ 07 : ಶನಿವಾರ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯ ಕುರಿತು ಹೈಕಮಾಂಡ್‌ಗೆ ವರದಿ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಆಯ್ಕೆ, ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿತ್ತು.
ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕೇಂದ್ರ ನಾಯಕರಿಗೆ ಸಭೆಯ ಬಗ್ಗೆ ವರದಿಯನ್ನು ನೀಡಿದ್ದಾರೆ. ಪರಮೇಶ್ವರ ನಿವಾಸದಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ 40 ಕ್ಕೂ ಹೆಚ್ಚು ನಾಯಕರು ಪಾಲ್ಗೊಂಡಿದ್ದರು.
ಸಭೆ ನಡೆಸಿದ ದಿನವೇ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್‌ಗೆ ಪರಮೇಶ್ವರ ದೂರವಾಣಿ ಕರೆ ಮಾಡಿದ್ದರು. ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಮಾಹಿತಿಯನ್ನು ನೀಡಿದ್ದರು. ಈಗ ಅಧಿಕೃತ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.
15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿಧಾನಸಭೆಯ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೆಪಿಸಿಸಿ ಸಾರಥ್ಯ ಯಾರಿಗೆ? ಎಂಬ ಚರ್ಚೆ ಈಗ ಆರಂಭವಾಗಿದೆ.

ವರದಿಯಲ್ಲಿ ಏನಿದೆ?
ಇಬ್ಬರು ನಾಯಕರ ರಾಜೀನಾಮೆ ಬಗ್ಗೆ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ರಾಜ್ಯ ನಾಯಕರು ಬದ್ಧರಾಗಿರುತ್ತಾರೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ರಾಜ್ಯ ನಾಯಕರು ಯಾವುದೇ ಶಿಫಾರಸು ಮಾಡುವುದಿಲ್ಲ ಎಂದು ಪರಮೇಶ್ವರ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬೇಗ ತೀರ್ಮಾನ ತೆಗೆದುಕೊಳ್ಳಬೇಕು
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಮುಖಂಡರು ನೀಡಿರುವ ರಾಜೀನಾಮೆ ಬಗ್ಗೆ ಬೇಗ ತೀರ್ಮಾನ ಕೈಗೊಳ್ಳಬೇಕು ಎಂಬುದು ರಾಜ್ಯ ನಾಯಕರ ಅಭಿಪ್ರಾಯವಾಗಿದೆ. ರಾಜೀನಾಮೆಯನ್ನು ಒಪ್ಪಿಕೊಳ್ಳುವುದು ಅಥವ ತಿರಸ್ಕರಿಸುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ನಿಮ್ಮಲ್ಲಿ ಒಗ್ಗಟ್ಟು ಇರಲಿ
ಕರ್ನಾಟಕ ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕರ ನಡುವೆ ಅಸಮಾಧಾನವಿದೆ. ಕೆಲವು ನಾಯಕರು ದೆಹಲಿಗೆ ಹೋಗಿ ದೂರುಗಳನ್ನು ಸಲ್ಲಿಸಿ ಬಂದಿದ್ದರು. ಆದ್ದರಿಂದ, ಹೈಕಮಾಂಡ್ ಮೊದಲು ನೀವು ಒಗ್ಗಟ್ಟಾಗಿ ಸಭೆ ನಡೆಸಿ ವರದಿ ಕೊಡಿ ಬಳಿಕ ಮುಂದಿನ ಕ್ರಮ ಎಂಬ ಸಂದೇಶ ನೀಡಿತ್ತು. ಅದಕ್ಕಾಗಿ ಪರಮೇಶ್ವರ ನಿವಾಸದಲ್ಲಿ ಸಭೆ ನಡೆಸಲಾಗಿತ್ತು.

ಸೋನಿಯಾ ಗಾಂಧಿ ಅಂತಿಮ ತೀರ್ಮಾನ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ. ಕೆ. ಶಿವಕುಮಾರ್, ಕೆ. ಎಚ್. ಮುನಿಯಪ್ಪ, ಬಿ. ಕೆ. ಹರಿಪ್ರಸಾದ್, ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ ಮತ್ತು ಎಂ. ಬಿ. ಪಾಟೀಲ್ ಹೆಸರು ಕೇಳಿ ಬರುತ್ತಿದೆ. ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತೀರ್ಮಾನ ಕೈಗೊಳ್ಳಲಿದ್ದಾರೆ.












Click it and Unblock the Notifications