ಕೊಡಗು: ನೆರೆ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠದ ಪ್ರಥಮ ಕಂತು
ಬೆಂಗಳೂರು, ಆಗಸ್ಟ್ 23: ನಾಡಿನ ಜನ - ಜಾನುವಾರುಗಳಿಗೆ ತೊಂದರೆಯಾದಾಗ ಅದಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅದರಲ್ಲೂ ಸಂಘ - ಸಂಸ್ಥೆಗಳು, ಮಠ - ಮಾನ್ಯಗಳು ಇದನ್ನು ತಮ್ಮ ಜವಾಬ್ದಾರಿಯಾಗಿ ಪರಿಗಣಿಸಿ ಸಹಾಯ ಹಸ್ತ ನೀಡಬೇಕು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು.
ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ, ಕೊಡಗು ಮತ್ತು ಸಂಪಾಜೆಯ ಪರಿಸರದ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ದಿನೋಪಯೋಗಿ ವಸ್ತುಗಳ ವಿತರಣೆಯ ಸಹಾಯ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಪ್ರಕೃತಿ ವಿಕೋಪದಿಂದಾಗಿ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಶ್ರೀಮಠದಿಂದ ಅಕ್ಕಿ - ಬೆಳೆಗಳನ್ನು 5ಕೆಜಿಯ ಪೊಟ್ಟಣ ಮಾಡಿದ್ದು, ಅವುಗಳ ಜೊತೆ ಇತರ ನಿತ್ಯೋಪಯೋಗಿ ವಸ್ತುಗಳನ್ನು ಜನರ ಮನೆಗಳಿಗೆ ವಿತರಿಸಲಾಗುವುದು ಎಂದರು.
ಪ್ರಥಮ ಕಂತಿನಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಕಳುಹಿಸಿಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಒದಗಿಸಲು ಚಿಂತಿಸಲಾಗುವುದು. ದಕ್ಷಿಣ ಕನ್ನಡ - ಕೊಡಗು - ಕಾಸರಗೋಡು ಭಾಗದ ಶ್ರೀಮಠದ ಶಿಷ್ಯರು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಶ್ರಮಿಸುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು.

ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಈ ಸಂದರ್ಭದಲ್ಲಿ ಹಾಜರಿದ್ದು, ಉತ್ತಮ ಕಾರ್ಯಕ್ಕೆ ತಮ್ಮ ಬೆಂಬಲ ಸೂಚಿಸಿದರು. ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು, ಗೋಸ್ವರ್ಗ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ರಮೇಶ್ ಕೊರಮಂಗಲ, ಕಾರ್ಯದರ್ಶಿ ವಾದಿರಾಜ ಸಾಮಗ, ಯು ಎಸ್ ಜಿ ಭಟ್, ಶ್ರೀಮತ್ಸ ಮೂಡಗೋಡು, ಕೃಷ್ಣಮೂರ್ತಿ ಮುಗಲೋಡಿ ಮುಂತಾದವರು ಉಪಸ್ಥಿತರಿದ್ದರು.
ಪ್ರಥಮ ಕಂತಿನ ಸಹಾಯ : ಅಕ್ಕಿ (5kg ಯ 2000 ಚೀಲಗಳು) ಬೇಳೆ, ಸೋಪು, ಬ್ರಷ್, ಫಿನಾಯಿಲ್ ಹಾಗೂ ಇನ್ನಿತರ ದಿನೋಪಯೋಗಿ ವಸ್ತುಗಳು.












Click it and Unblock the Notifications