ಕೊಡಗಿನ ಸಾಹಿತ್ಯ ಸಮ್ಮೇಳನಕ್ಕೆ 2 ಕೋಟಿ ರು
ಬೆಂಗಳೂರು, ಅ.10: ಕಿತ್ತಲೆ ನಾಡು, ಕಾಫಿ ಬೀಡು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಘಮ ಪಸರಿಸಲಿದೆ. ಇದರಿಂದ 3ನೆಯ ಬಾರಿಗೆ ಕನ್ನಡದ ಸೇವೆ ಸಲ್ಲಿಸಲು ಕೊಡಗಿಗೆ ಅವಕಾಶ ಲಭಿಸಿದೆ. ಸಾಹಿತ್ಯ ಸಮ್ಮೇಳನದ ಸಿದ್ಧತೆ ಬಗ್ಗೆ ಸಾಹಿತ್ಯ ಪರಿಷತ್ ಸುದ್ದಿಗೋಷ್ಠಿ ನಡೆಸಿದರು.
ಕೊಡಗಿನಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಹಾಗೂ ಕೊಡಗು ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕೊಡಗು ಕಸಾಪ ಸಿ.ಪಿ.ರಮೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು. 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಂಎಂ ಕಲಬುರ್ಗಿ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜನವರಿ 7, 8 ಮತ್ತು 9 ರಂದು ಕೆ.ಎನ್.ಕಾರ್ಯಪ್ಪ ಕ್ರೀಡಾಂಗಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಇದಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಮ್ಮೇಳನದ ವಿವಿಧ ಕಾರ್ಯಗಳಿಗೆ 28 ಸಮಿತಿಗಳನ್ನು ರಚಿಸಲಾಗಿದೆ. ಇದಕ್ಕೆ ಸದಸ್ಯರು, ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂದರು.

ಈ ಬಾರಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಸುಮಾರು ಎರಡೂವರೆ ಕೋಟಿ ರೂ. ಖರ್ಚಾಗಬಹುದೆಂದು ಅಂದಾಜಿಸಲಾಗಿದ್ದು, ಇದಕ್ಕೆ ಒಂದು ಕೋಟಿ ರೂ. ಮೀಸಲಿಟ್ಟಿದ್ದು, ಉಳಿದ ಒಂದೂವರೆ ಕೋಟಿ ರೂ.ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೆಚ್ಚುವರಿಯಾಗಿ ನೀಡಬೇಕೆಂದು ಮನವಿ ಮಾಡಿದರು.
ಸಮ್ಮೇಳನಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಸೇರಿದಂತೆ ಹಲವಾರು ಸಾಹಿತಿಗಳಿಗೆ ಆಹ್ವಾನಿಸಲಾಗುವುದು. ಸಮ್ಮೇಳನಕ್ಕೆ ಬರುವ ಗಣ್ಯರಿಗೆ ತೊಂದರೆಯಾಗದಂತೆ ತಂಗಲು ಹೊಟೇಲ್, ಲಾಡ್ಜ್, ಪ್ರವಾಸಿಮಂದಿರ, ಶಾಲಾ ಕಾಲೇಜುಗಳನ್ನು ಬಳಸಿಕೊಳ್ಳಲಾಗುವುದು. ಇದಕ್ಕೆ ಜಿಲ್ಲಾ ಹೊಟೇಲ್ ಮಾಲೀಕರ ಸಂಘ ಎರಡು ರೂಮುಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ ಎಂದರು.
ಗಣ್ಯರಿಗೆ ಬಸ್ ನಿಲ್ದಾಣದಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ ಕರೆದೊಯ್ಯಲು ವಿಶೇಷ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಕೊಡಗಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಕೈಪಿಡಿಯನ್ನೂ ಸಹ ಸಿದ್ಧಪಡಿಸಲಾಗಿದೆ. ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವವರು ಡಿ.15ರೊಳಗೆ ಶುಲ್ಕ ಕಟ್ಟಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.
ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಉತ್ತಮ ಊಟದ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಸೇರಿದಂತೆ ಎಲ್ಲ ಶೈಲಿಯ ಊಟದ ಹೆಚ್ಚಿನ ಕೌಂಟರ್ ಗಳನ್ನು ಸ್ಥಾಪಿಸಲಾಗುವುದು ಸಮ್ಮೇಳನವನ್ನು ಯಾವುದೇ ಅಡಚಣೆ ಇಲ್ಲದೆ ನಡೆಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.












Click it and Unblock the Notifications