ದಾವಣಗೆರೆ : ರಸ್ತೆ ಅಪಘಾತ, ಕೆಜೆಪಿ ಮುಖಂಡ ಸಾವು

ಗುರುವಾರ ಮುಂಜಾನೆ ಸ್ಕಾರ್ಪಿಯೋ ಕಾರಿನಲ್ಲಿ ಕೆಜೆಪಿ ಬೆಂಗಳೂರು ನಗರ ಘಟಕದ ಅಧ್ಯಕ್ಷ ಈಶ್ವರ್ ಮತ್ತು ಇತರ ಐವರು ಹುಬ್ಬಳ್ಳಿಗೆ ತೆರಳುತ್ತಿದ್ದರು. ಹರಿಹರದ ರಾಜನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎದುರಿನಿಂದ ಬಂದ ಮಿನಿ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ.
ಕಾರಿನ ಮುಂಭಾದಲ್ಲಿ ಕುಳಿತಿದ್ದ ಈಶ್ವರ್ (42) ಮಿನಿ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇತರ ಐವರು ಘಟನೆಯಿಂದಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ಮಿನಿ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದಿಂದ ಗಾಯಗೊಂಡಿದ್ದ ವೀರಭದ್ರ, ಪರಮೇಶ್ವರ್, ರೇಣುಕಾರಾಧ್ಯ, ಅರುಣ್‌ಕುಮಾರ್ ಮತ್ತು ಚೇತನ್ ಎಂಬುವವರನ್ನು, ದಾವಣಗೆರೆಯ ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕಾರ್ಯಾಧ್ಯಕ್ಷೆ ಶೋಭಾ ಕರಂದ್ಲಾಜೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಹರಿಹರ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾರ ಹುಬ್ಬಳ್ಳಿಯಲ್ಲಿ ಕೆಜೆಪಿ ಪಕ್ಷದ ಸಮಾವೇಶ ನಡೆಯಲಿದೆ. ಇದಕ್ಕಾಗಿ ಬೆಂಗಳೂರಿನಿಂದ ಈಶ್ವರ್ ಮತ್ತು ಇತರ ಕಾರ್ಯಕರ್ತರು ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.











Click it and Unblock the Notifications