Anna Bhagya scheme: ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ: ಸಂಪೂರ್ಣ ಮಾಹಿತಿ ನೀಡಿದ ಕೆ.ಹೆಚ್.ಮುನಿಯಪ್ಪ
ಬೆಂಗಳೂರು, ಫೆಬ್ರವರಿ 19: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಮಹತ್ವದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲು ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ್ದು, ನಂತರದ ದಿನಗಳಲ್ಲಿ ಅಕ್ಕಿಯ ಲಭ್ಯವಾಗದ ಕಾರಣ ನಮ್ಮ ಸರ್ಕಾರ ಸಾರ್ವಜನಿಕರಿಗೆ ಕೊಟ್ಟ ಮಾತಿನಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾನ್ಯ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿಯ ಜೊತೆಗೆ ಉಳಿದ 5 ಕೆಜಿ ಅಕ್ಕಿಗೆ ರೂ. 170/- ರೂಗಳಂತೆ ನೇರ ನಗದು ವರ್ಗಾವಣೆ ಮಾಡುತ್ತಿದೆ ಎಂದು ಕೆ ಹೆಚ್ ಮುನಿಯಪ್ಪ ಹೇಳಿದರು.
ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನಲೆಯಲ್ಲಿ ಜೂನ್-2025ರವರೆಗೆ OMSS(D)ರಡಿ ಪ್ರತಿ ಕೆ.ಜಿ.ಗೆ ರೂ. 22.50/- ದರದಲ್ಲಿ ಸರಬರಾಜು ಮಾಡಲು ಒಪ್ಪಿಗೆ ನೀಡಿರುತ್ತದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ವಿತರಿಸಲು ಉದ್ದೇಶಿಸಿರುವ 05 ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರದ OMSS (D) ಯೋಜನೆಯಡಿ ಖರೀದಿಸುವ ಫೆಬ್ರವರಿ-2025ರ ಮಾಹೆಯಿಂದ ವಿತರಿಸಲು ತೀರ್ಮಾನಿಸಲಾಗಿದೆ.

ಅನ್ನಭಾಗ್ಯ ಯೋಜನೆ
ಕೇಂದ್ರ ಸರ್ಕಾರ ನೀಡುವ NFSA ಹಾಗೂ ರಾಜ್ಯದ ಹೆಚ್ಚುವರಿ ಕಾರ್ಡ್ಗಳು ಸೇರಿದಂತೆ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. (ಕೇಂದ್ರ ಸರ್ಕಾರ 5 ಕೆ.ಜಿ. ಅಕ್ಕಿ + ರಾಜ್ಯ ಸರ್ಕಾರ 5 ಕೆ.ಜಿ. ಅಕ್ಕಿ ಬದಲಾಗಿ DBT)
2023-24ನೇ ಸಾಲಿನಲ್ಲಿ OMSS(D) ಯಡಿ ನಿಗದಿಪಡಿಸಿದ ದರ ರೂ. 34.60/-ರ ದರದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಬೇಕಾಗುವ ಅಕ್ಕಿ 2.29 ಲಕ್ಷ ಮೆ.ಟನ್ ವಾರ್ಷಿಕ 27.48 ಲಕ್ಷ ಮೆ.ಟನ್ ಸರಬರಾಜು ಮಾಡಲು ಕೋರಿದಾಗ ಕೇಂದ್ರ ಸರ್ಕಾರ ಅಕ್ಕಿ ದಾಸ್ತಾನು ಇದ್ದರೂ ಸಹ ನಾವು ಕೇಳಿದಾಗ ಕೊಡಲಿಲ್ಲ.
ಕೇಂದ್ರ ಸರ್ಕಾರವು FCI ನಿಂದ ರಾಜ್ಯಕ್ಕೆ OMSS(D) ಅಕ್ಕಿ ನೀಡಲು ನಿರಾಕರಿಸಿದ ಕಾರಣ ರಾಜ್ಯದಲ್ಲಿರುವ AAY ಮತ್ತು PHH ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ. ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ ರೂ. 34.00 ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜುಲೈ-2023 ಮಾಹೆಯಿಂದ ಡಿ.ಬಿ.ಟಿ. ಮೂಲಕ ಹಣವನ್ನು ವರ್ಗಾವಣೆ ಮಾಡಲು ಆದೇಶಿಸಲಾಗಿದೆ. ಅದರಂತೆ, ಜುಲೈ-2023 ಮಾಹೆಯಿಂದ ಇಲ್ಲಿಯವರೆಗೆ ಒಂದು ಕೆ.ಜಿ. ಅಕ್ಕಿಗೆ ರೂ. 34.00 ರಂತೆ 5 ಕೆ.ಜಿ. ಅಕ್ಕಿಗೆ ಪ್ರತಿ ಸದಸ್ಯರಿಗೆ ರೂ. 170/-ರಂತೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಅನ್ನಭಾಗ್ಯ ಯೋಜನೆ ನಗದು ವರ್ಗಾವಣೆ (DBT)
ಅಕ್ಟೋಬರ್-2024ರ ಮಾಹೆಯಲ್ಲಿ 1,16,39,179 ಕಾರ್ಡ್ಗಳ 4,12,16,838 ಫಲಾನುಭವಿಗಳಿಗೆ ರೂ. 676.79 ಕೋಟಿ DBT ಮಾಡಲಾಗಿದೆ. DBT ಪ್ರಾರಂಭವಾದ ಜುಲೈ-2023 ರಿಂದ ಅಕ್ಟೋಬರ್-2024ರವರೆಗೆ ರೂ. 10452.00 ಕೋಟಿ DBT ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ನವೆಂಬರ್, ಡಿಸೆಂಬರ್ ಮತ್ತು ಜನವರಿ ಮಾಹೆಯ DBT ಪ್ರಕ್ರಿಯೆ ಪ್ರಗತಿಯಲ್ಲಿದೆ.
ಕೇಂದ್ರ ಸರ್ಕಾರದ OMSS(D) ಯೋಜನೆ
1. 26-01-2023 ರಂತೆ OMSS(D) ಪ್ರತಿ ಕೆ.ಜಿ. ಅಕ್ಕಿಗೆ ರೂ. 34/- ನಿಗದಿಪಡಿಸಿರುತ್ತದೆ.
2. ಕೇಂದ್ರ ಸರ್ಕಾರದ ಆದೇಶದ ದಿನಾಂಕ: 09-07-2024ರ OMSS(D) ದರವನ್ನು ಪ್ರತಿ ಕೆ.ಜಿ. ಅಕ್ಕಿಗೆ ರೂ. 28/- ನಿಗದಿಪಡಿಸಿರುತ್ತದೆ.
3. ಕೇಂದ್ರ ಸರ್ಕಾರದ ಆದೇಶದ ದಿನಾಂಕ: 17-01-2025ರಂತೆ ಪ್ರತಿ ಕೆ.ಜಿ. ಅಕ್ಕಿಗೆ ರೂ. 22.50/- ನಿಗದಿಪಡಿಸಿರುತ್ತದೆ.
ಕೇಂದ್ರ ಸರ್ಕಾರ ದಿನಾಂಕ: 09-07-2024ರಂದು ಹೊರಡಿಸಿರುವ ಆದೇಶದಲ್ಲಿ OMSS(D)ಯಡಿ 2024-25ನೇ ಸಾಲಿಗೆ ದಿನಾಂಕ: 01-08-2024ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಕ್ಕೆ ಪ್ರತಿ ಕೆ.ಜಿ.ಗೆ ರೂ. 28.00/-ರ ದರದಲ್ಲಿ ಅಕ್ಕಿ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರ ದಿಂದ ಅಕ್ಕಿ ಲಭ್ಯವಿರುವ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು ಒ ಎಮ್ ಎಸ್ ಎಸ್ (OMSS)ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾದಿಂದ ಖರೀದಿಸಿ ಫೆಬ್ರವರಿ ಮಾಹೆಯಿಂದ ಅನ್ನಭಾಗ್ಯ ಯೋಜನೆ ಯಡಿ ಅಕ್ಕಿಯನ್ನು ವಿತರಿಸಲು ತೀರ್ಮಾನಿಸಿದೆ.
ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ
ಭಾರತ ಸರ್ಕಾರ 2013ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಮೊಟ್ಟಮೊದಲು ಜಾರಿಗೆ ತಂದ ರಾಜ್ಯ ಕರ್ನಾಟಕ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯರವರು ಮೊದಲ ಅವಧಿ ಮತ್ತು ಎರಡನೇ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಗೆ ಅತ್ಯಂತ ಪ್ರಾಮುಖ್ಯತೆ ಕೊಡುವ ಮೂಲಕ ಕರ್ನಾಟಕ ರಾಜ್ಯ ಹಸಿವುಮುಕ್ತ ಕರ್ನಾಟಕವಾಗಿಸಿರುವುದು ನಮ್ಮ ಸರ್ಕಾರದ ಹೆಮ್ಮೆಯ ವಿಷಯವಾಗಿದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ, ಜೋಳ ಮತ್ತು ಭತ್ತ ಖರೀದಿಸಲು ಖರೀದಿ 366 ಕೇಂದ್ರಗಳನ್ನು ತೆರೆಯಲಾಗಿದೆ.. ದಿನಾಂಕ: 01-12-2024 ರಿಂದ ರೈತರು ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನಾಂಕ: 31-03-2025 ಆಗಿರುತ್ತದೆ. ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಕರ್ನಾಟಕರಾಜ್ಯಕೃಷಿಮಾರಾಟಮಂಡಳಿ ಹಾಗೂ ಕರ್ನಾಟಕರಾಜ್ಯಸಹಕಾರ ಮಾರಾಟಮಹಾಮಂಡಳ ಖರೀದಿ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುತ್ತಿವೆ.
ಕೇಂದ್ರ ಸರ್ಕಾರ ರಾಗಿಗೆ ಕನಿಷ್ಠ ಬೆಂಬಲ ಬೆಲೆ ರೂ. 4,290/- ನಿಗದಿಪಡಿಸಿದೆ. ಮತ್ತು ಖರೀದಿ ಗುರಿಯನ್ನು 4.40 LMT ನಿಗದಿಪಡಿಸಿದೆ. ಈಗಾಗಲೇ 3.6 LMT Quantity ರಾಗಿ ನೀಡಲು 2,54,528 ರೈತರು ನೋಂದಾಯಿಸಿಕೊಂಡಿರುತ್ತಾರೆ ಪ್ರತಿ ಎಕರೆಗೆ 10 ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ. ಕೇಂದ್ರ ಸರ್ಕಾರ ಸಾಮಾನ್ಯ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ರೂ. 2,300/- "ಎ"ಗ್ರೇಡ್ ಭತ್ತಕ್ಕೆ ರೂ. 2,320 ನಿಗದಿಪಡಿಸಿದೆ. ಖರೀದಿ ಗುರಿಯನ್ನು 7.5 LMT ನಿಗದಿಪಡಿಸಿದೆ. ಈಗಾಗಲೇ 0.110 LMT ಭತ್ತ ನೀಡಲು 3,388 ರೈತರು ನೋಂದಾಯಿಸಿಕೊಂಡಿರುತ್ತಾರೆ ಪ್ರತಿ ಎಕರೆಗೆ 20 ಕ್ವಿಂಟಾಲ್ನಂತೆ ಪ್ರತಿ ರೈತರಿಂದ 50 ಕ್ವಿಂಟಲ್ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ.
ಕೇಂದ್ರ ಸರ್ಕಾರ ಹೈಬ್ರೀಡ್ ಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ರೂ. 3,371/- ಮಾಲ್ಡಂಡಿ ಜೋಳಕ್ಕೆ ರೂ. 3,421 ನಿಗದಿಪಡಿಸಿದೆ. ಖರೀದಿ ಗುರಿಯನ್ನು 1.00 LMT ನಿಗದಿಪಡಿಸಿದೆ. ಈಗಾಗಲೇ 0.709 LMT ಜೋಳ ನೀಡಲು 17,527 ರೈತರು ನೋಂದಾಯಿಸಿಕೊಂಡಿರುತ್ತಾರೆ ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಪ್ರತಿ ರೈತರಿಂದ 150 ಕ್ವಿಂಟಲ್ನಂತೆ ಖರೀದಿಸಲು ಕ್ರಮವಹಿಸಲಾಗುತ್ತಿದೆ.
ಆಹಾರ ಇಲಾಖೆಯ ಸಮಗ್ರ ಸುಧಾರಣೆ
ಇಲಾಖೆಯ ಸಮಗ್ರ ಸುಧಾರಣೆ ಸಂಬಂಧಿಸಿದಂತೆ ಹಾಗೂ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ MSP ಖರೀದಿ ಪ್ರಕ್ರಿಯೆಯಲ್ಲಿ ಪಾದರ್ಶಕವಾದ ಅನುಷ್ಠಾನ ತರಲು ತಿಳಿಸಿರುತ್ತೇನೆ. ಯೋಜನೆಗಳ ಅನುಷ್ಠಾನದಲ್ಲಿ ಲೋಪ ಕಂಡು ಬಂದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು.
ಆಹಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಯ್ದೆಗಳಾದ ಅಗತ್ಯ ವಸ್ತುಗಳು ಕಾಯ್ದೆ-1955, ಕಾಳಸಂತೆ ನಿಯಂತ್ರಣ ಕಾಯ್ದೆ-1980, ಆಹಾರ ಭದ್ರತಾ ಕಾಯ್ದೆ-2013 ಹಾಗೂ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆ-2019ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.












Click it and Unblock the Notifications