ಕೇರಳ ಸರ್ಕಾರ ಮಾಡುತ್ತಿರುವುದು ಸಿದ್ದರಾಮಯ್ಯ ಮಾಡಬೇಕಾದ ಕೆಲಸ: ಚೇತನ್ ಅಹಿಂಸಾ
ಕೇರಳದ ಕಮ್ಯುನಿಸ್ಟ್ ಸರ್ಕಾರವು ಇದೀಗ ಕರ್ನಾಟಕದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕೇರಳದ ಎಲ್ಲಾ ಸರ್ಕಾರಿ ಮಾಧ್ಯಮ ಶಾಲೆಗಳಲ್ಲೂ ಪ್ರಥಮ ಭಾಷೆಯನ್ನಾಗಿ ಮಲಯಾಳಂ ಭಾಷೆಯನ್ನು ಕಲಿಸುವ ಮಸೂದೆಯನ್ನು ಮಂಡನೆ ಮಾಡುವ ನಿರ್ಧಾರವು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಭಾಷೆ ವಿಚಾರದಲ್ಲಿ, ಹಿಂದಿ ಹೇರಿಕೆ ತಪ್ಪಿಸುವ ನಿಟ್ಟಿನಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಲಿ ಎನ್ನುವ ಆಗ್ರಹವು ಹೆಚ್ಚಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನವರೆ - ಕೇರಳ ಸರ್ಕಾರ ಮಾಡುತ್ತಿರುವುದೇ ನೀವು ಮಾಡಬೇಕಾದ ಕೆಲಸ ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೋಗಿಲು ಬೂಲ್ಡೋಜರ್ ಪ್ರಕರಣದಲ್ಲಿ ಕೇರಳ ಸರ್ಕಾರದಿಂದ ನ್ಯಾಯವಾದ ಟೀಕೆ ಒಳಗಾದಮೇಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಮಾಡಿರುವ ಕೇರಳದ ಮೇಲೆ ತಪ್ಪು ಹುಡುಕುತಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನವರೆ - ಕೇರಳ ಸರ್ಕಾರ ಮಾಡುತ್ತಿರುವುದೇ ನೀವು ಮಾಡಬೇಕಾದ ಕೆಲಸ ಎಂದು ಚೇತನ್ ಅಹಿಂಸಾ ಅವರು ಹೇಳಿದ್ದಾರೆ.

ಮುಂದುವರಿದು ಕರ್ನಾಟಕದ ಶಾಲು ಹಾಕುವುದು ಅಥವಾ ಭುವನೇಶ್ವರಿ ಪ್ರತಿಮೆ ನಿರ್ಮಿಸುವುದರಿಂದ ಕನ್ನಡ ರಕ್ಷಣೆ ಆಗುವುದಿಲ್ಲ. ಮೊದಲು ಹಿಂದಿಯನ್ನು ಹೊರಹಾಕಿ - ಅದೇ ನಿಜವಾದ ಕನ್ನಡ ಪರ ಹೋರಾಟ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ನಡೆ ದ್ವಂದ್ವ ಮತ್ತು ಬೂಟಾಟಿಕೆಯ ಧೋರಣೆ. ತಮ್ಮ 'ಬುಲ್ಡೋಜರ್ ರಾಜಕೀಯ' ಸಿಎಂ ಪಿಣರಾಯಿ ವಿಜಯನ್ ಪ್ರಶ್ನಿಸಿದ ಕಾರಣಕ್ಕೆ, ಪ್ರತೀಕಾರದಿಂದಲೇ ಅವರು ಕೇರಳವು ದೇಶದ ಭಾಷಾ ಹಾಗೂ ಫೆಡರಲ್ ಮೌಲ್ಯಗಳನ್ನು ಕಾಪಾಡುವುದನ್ನು ವಿರೋಧಿಸುತ್ತಿದ್ದಾರೆ. ಹಾಗಾದರೆ ತಮಿಳುನಾಡಿನ ಭಾಷಾ ನೀತಿಗಳ ವಿರುದ್ಧ ಕೂಡ ಪ್ರತಿಭಟನೆ ಮಾಡಿ, ಸಿಎಂ ಸಿದ್ದರಾಮಯ್ಯ ನವರೇ. ಸಿಎಂ ಸಿದ್ದು ಅವರಿಗೆ ಕರ್ನಾಟಕ ಧ್ವಜದ ಶಾಲು ಧರಿಸುವ ನೈತಿಕ ಹಕ್ಕೇ ಇಲ್ಲ ಎಂದೂ ಅವರಿ ಟೀಕೆ ಮಾಡಿದ್ದಾರೆ.
ಸಿ.ಎಂ ಸಿದ್ದರಾಮಯ್ಯ ಹೇಳಿದ್ದೇನು ?
ಕೇರಳ ವಿಧಾನಸಭೆಯಲ್ಲಿ ಮಂಡನೆಯಾಗಿರುವ ಮಲೆಯಾಳಿ ಭಾಷಾ ಮಸೂದೆಯಿಂದ ಗಡಿಭಾಗದ ಜಿಲ್ಲೆಗಳಲ್ಲಿ, ವಿಶೇಷವಾಗಿ ಕಾಸರಗೋಡಿನಲ್ಲಿ ನೆಲೆಸಿರುವ ಕನ್ನಡಿಗರ ಮೇಲಾಗುವ ದುಷ್ಪರಿಣಾಮಗಳ ಕುರಿತು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು, ಮಸೂದೆಯ ಪುನರ್ ಪರಿಶೀಲನೆಗೆ ಒತ್ತಾಯಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮನವಿ
ಇನ್ನು ಕೇರಳದ ಮಲಯಾಳಿ ಭಾಷಾ ಮಸೂದೆಯಿಂದ ಕಾಸರಗೋಡನ್ನು ಹೊರಗಿಡುವಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಒತ್ತಾಯಿಸುವುದರ ಜೊತೆಗೆ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿಯೋಗ ಕೊಂಡೊಯ್ಯುವಂತೆ ಕೋರಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಹಾಗೂ ಕಾಸರಗೋಡು ಕನ್ನಡಿಗರು ಇಂದು ಮಂಗಳೂರಿನಲ್ಲಿ ನನಗೆ ಮನವಿ ಸಲ್ಲಿಸಿದ್ದಾರೆ ಎಂದೂ ಸಿ.ಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.












Click it and Unblock the Notifications