KEA Exam Results: ತೋಟಗಾರಿಕೆ ಇಲಾಖೆ ನೇಮಕಾತಿ ಅಂತಿಮ ಅಂಕಪಟ್ಟಿ ಪ್ರಕಟ, ಅಭ್ಯರ್ಥಿಗಳು ಗಮನಿಸಿ
ಬೆಂಗಳೂರು: ತೋಟಗಾರಿಕೆ ಇಲಾಖೆಯ ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗಳಿಗೆ ನಡೆಸಲಾದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ವಿವರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಗುರುವಾರ ಬೆಳಗ್ಗೆ ಇಲಾಖೆಯ ಪರೀಕ್ಷಾ ಫಲಿತಾಂಶವನ್ನು ಬಿಡುಗಡೆ ಮಾಡಲಾಗದೆ. ಈ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

ತಾತ್ಕಾಲಿಕ ಅಂಕಪಟ್ಟಿಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಈ ಫಲಿತಾಂಶ ಪ್ರಕಟಿಸಲಾಗಿದೆ. ಕನಿಷ್ಠ 35 ಅಂಕ ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದವರನ್ನು ಪರಿಗಣಿಸಿ ಅಂತಿಮ ಅಂಕ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದರು.
ತೋಟಗಾರಿಕೆ ಇಲಾಖೆಯ ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕರು ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕಳೆದ ತಿಂಗಳು ಸೆಪ್ಟಂಬರ್ ಅಂತ್ಯದಲ್ಲಿ ಮೂರು ದಿನ ನಡೆಸಿತ್ತು.
ಪರಿಷ್ಕೃತ ಕೀ ಉತ್ತರ
ಬಳಿಕ ಕೀ ಉತ್ತರಗಳನ್ನು ಬಿಡುಗಡೆಗೊಳಿಸಲಾಗಿತ್ತು. ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ತೋಟಗಾರಿಕೆ ಇಲಾಖೆಯ ಉಳಿಕೆ ಮೂಲ ವೃಂದದ ನೇಮಕಾತಿ ಸಂಬಂಧ ವಿದ್ಯಾರ್ಥಿಗಳು/ಅಭ್ಯರ್ಥಿಗಳಿಂದ ಸಲ್ಲಿಕೆಯಾದ ಕೀ ಉತ್ತರ ಸಂಬಂಧಿ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿ ಮೂಲಕ ಪರಿಶೀಲಿಸಲಾಯಿತು. ಬಳಿಕ ಪರಿಷ್ಕೃತ ಕೀ ಉತ್ತರಗಳನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಅಕ್ಟೋಬರ್ 07 ರಂದು ಪ್ರಕಟಿಸಲಾಗಿತ್ತು ಎಂದರು.
ಆಕ್ಷೇಪಣೆ ಸ್ವೀಕರಿಸಿ ಅಂತಿಮ ಫಲಿತಾಂಶ ಬಿಡುಗಡೆ
ಪರಿಷ್ಕೃತ ಕೀ ಉತ್ತರಗಳನ್ವಯ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ತಾತ್ಕಾಲಿಕ ಫಲಿತಾಂಶ ಅಕ್ಟೋಬರ್ 07 ರಂದು ಪ್ರಕಟಿಸಿ ಅಕ್ಟೋಬರ್ 09ರಂದು ಬೆಳಗ್ಗೆ 11ಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.
ತಾತ್ಕಾಲಿಕ ಫಲಿತಾಂಶಕ್ಕೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ವೃಂದವಾರು ತಾತ್ಕಾಲಿಕ ಅಂಕಪಟ್ಟಿಯನ್ನು ಅಕ್ಟೋಬರ್ 14ರಂದು ಪ್ರಕಟಿಸಲಾಗಿದೆ. ಅಧಿಸೂಚನೆಯಲ್ಲಿ ತಿಳಿಸಿರುವಂತೆ ಕನಿಷ್ಠ ಶೇ. 35 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಿ ಅಂತಿಮ ಅಂಕಪಟ್ಟಿ ಅ.15ರಂದು ಪ್ರಕಟಿಸಿ ತೋಟಗಾರಿಕೆ ಇಲಾಖೆಗೆ ಸದರಿ ಅಂತಿಮ ಅಂಕಪಟ್ಟಿ ಹಸ್ತಾಂತರಿಸಲಾಗುವುದು. ನೇಮಕಾತಿ ಪ್ರಾಧಿಕಾರದಿಂದ ನಿಯಮಾನುಸಾರ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮ ವಹಿಸಲಾಗುವುದು ಎಂದು ಕೆಇಎ ತಿಳಿಸಿದ್ದಾರೆ.


Click it and Unblock the Notifications
