KEA ಗುಡ್ ನ್ಯೂಸ್: BWSSB ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ
ಬೆಂಗಳೂರು, ನವೆಂಬರ್ 17: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹಿಂದಿನ ನೇಮಕಾತಿ ಅಧಿಸೂಚನೆಗಳ ಪ್ರಕಾರ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಜೊತೆಗೆ KSET 2025 ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲು ಪ್ರಾಧಿಕಾರದಿಂದ ಇದೇ ನವೆಂಬರ್ 15ಕ್ಕೆ ಅರ್ಜಿ ಸಲ್ಲಿಕೆಗೆ ಅಧಿಸೂಚನೆ ಹೊರಡಿಸಿತ್ತು. ಕರ್ನಾಟಕದ ವಿವಿಧ ಸರ್ಕಾರಿ ಇಲಾಖೆ/ಸಂಸ್ಥೆನಿಗಮದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿಗಳನ್ನು ಆಹ್ವಾನಿಸಿ ಅಕ್ಟೋಬರ್ 08 ಮತ್ತು ಅಕ್ಟೋಬರ್ 31 ರಂದು ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಅಧಿಸೂಚನೆಗಳನ್ನು ಹೊರಡಿಸಿತ್ತು.

ದಿನಾಂಕ 31.10.2025 ರಂದು ಪ್ರತ್ಯೇಕ ಪ್ರಕಟಣೆ ಹೊರಡಿಸಿ ಅರ್ಜಿ ಸಲ್ಲಿಸಲು ಕ್ರಮವಾಗಿ ದಿನಾಂಕವನ್ನು 14.11.2025ರ ವರೆಗೆ ಹಾಗೂ ದಿನಾಂಕ 15.11.2025 ರವರೆಗೆ ಶುಲ್ಕ ಪಾವತಿಸುಲು ಅವಕಾಶ ನೀಡಲಾಗಿತ್ತು.
ಇದೀಗ ಬಿಡಬ್ಲುಎಸ್‌ಎಸ್‌ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ನವೆಂಬರ್ 25ರವರೆಗೆ ವಿಸ್ತರಣೆ ಮಾಡಲಾಗಿದೆ. ಆನ್‌ಲೈನ್ ಮೂಲಕ ಶುಲ್ಕ ಪಾವತಿಗೆ ನವೆಂಬರ್ 26ರವರೆಗೆ ಅವಕಾಶ ನೀಡಲಾಗಿದೆ.
KSET 2025: ತಾತ್ಕಾಲಿಕ ಫಲಿತಾಶ ಪ್ರಕಟ
ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನವೆಂಬರ್ 2ರಂದು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (KSET 2025) ನಡೆಸಲಾಗಿತ್ತು. ಅಂತಿಮ ಕೀ ಉತ್ತರಗಳ ಜತೆಗೆ ತಾತ್ಕಾಲಿಕ ಫಲಿತಾಂಶವನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಕೇವಲ 13 ದಿನಗಳಲ್ಲಿ ಕೀ ಉತ್ತರಗಳ ಜತೆಗೆ ಫಲಿತಾಂಶ ಪ್ರಕಟಿಸಿರುವುದು ಇದೇ ಮೊದಲು. ನಿಗದಿತ ಲಿಂಕ್ ಮೇಲೆ ಕ್ಲಿಕ್ ಮಾಡಿ, ಫಲಿತಾಂಶ ಪಡೆಯಬಹುದು. ಆಕ್ಷೇಪಣೆಗಳು ಇದ್ದಲ್ಲಿ ನ.17ರಂದು ಮಧ್ಯಾಹ್ನ 12ಗಂಟೆಯೊಳಗೆ ಪೂರಕ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಪ್ರಾಧಿಕಾರ ಹೇಳಿದೆ.












Click it and Unblock the Notifications