ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ: ರಾಯಚೂರು ಹಾಗೂ ಕೊಪ್ಪಳ ಕೇಂದ್ರಗಳ ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 2ರಂದು ರಾಜ್ಯದಾದ್ಯಂತ ಲಿಖಿತ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯನ್ನ ಬರೆಯಲು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳನ್ನ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು , ಮುಂಜಾಗ್ರತಾ ಕ್ರಮವಾಗಿ ಮತ್ತೊಮ್ಮೆ ತಮ್ಮ ಪ್ರವೇಶ ಪತ್ರ ಅಂದರೆ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಕೆಇಎ) ಮನವಿ ಮಾಡಿದೆ.
ರಾಯಚೂರು ಮತ್ತು ಕೊಪ್ಪಳ ಕೇಂದ್ರಗಳ ಗೊಂದಲ ನಿವಾರಣೆಗೆ ಕ್ರಮ
ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಲಿಖಿತ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಕುರಿತು ಯಾವುದೇ ಗೊಂದಲ ಅಥವಾ ತಾಂತ್ರಿಕ ತೊಂದರೆಗಳು ಉಂಟಾಗಬಾರದು ಎಂಬ ಉದ್ದೇಶದಿಂದ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನ ಪರೀಕ್ಷಾ ಕೇಂದ್ರಗಳನ್ನಾಗಿ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ, ಎರಡನೇ ಬಾರಿ ತಮ್ಮ ಪರಿಷ್ಕೃತ ಹಾಲ್ ಟಿಕೆಟ್ ಅನ್ನು ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಐಎಎಸ್ ಹೆಚ್ . ಪ್ರಸನ್ನ ತಿಳಿಸಿದ್ದಾರೆ.

ಅಭ್ಯರ್ಥಿಗಳ ಮೊಬೈಲ್ಗೆ ಎಸ್ಎಂಎಸ್
ಪರೀಕ್ಷಾ ಕೇಂದ್ರಗಳಲ್ಲಿ ಬದಲಾವಣೆ ಹಾಗೂ ಪರಿಷ್ಕೃತ ಪ್ರವೇಶ ಪತ್ರವನ್ನ ಡೌನ್ಲೋಡ್ ಮಾಡಿಕೊಳ್ಳುವ ಕುರಿತು ಪ್ರಾಧಿಕಾರವು ಈಗಾಗಲೇ ಸಂಬಂಧಪಟ್ಟ ಅಭ್ಯರ್ಥಿಗಳಿಗೆ ಮೊಬೈಲ್ ಸಂದೇಶ ಮೂಲಕವೂ ಮಾಹಿತಿಯನ್ನು ರವಾನಿಸಿದೆ. ಆದಾಗ್ಯೂ, ಕೊನೆಯ ಕ್ಷಣದ ಗೊಂದಲಗಳನ್ನು ತಪ್ಪಿಸುವ ಸಲುವಾಗಿ , ಪರೀಕ್ಷೆಗೆ ಹಾಜರಾಗುವ ಮುನ್ನ ಅಭ್ಯರ್ಥಿಗಳು ಮತ್ತೊಮ್ಮೆ ತಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರದ ಹೆಸರು ಮತ್ತು ವಿಳಾಸವನ್ನು ಖಚಿತಪಡಿಸಿಕೊಳ್ಳಬೇಕು.
ಆಗಸ್ಟ್ 2 ರಂದು ಲಿಖಿತ ಪರೀಕ್ಷೆ
ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗಾಗಿ ನಡೆಯುತ್ತಿರುವ ಈ ಪರೀಕ್ಷೆಯು ಆಗಸ್ಟ್ 2ರಂದು ನಿಗದಿಯಾಗಿದೆ. ಉಳಿಕೆ ಮೂಲ ವೃಂದದ (RPC) ಅಭ್ಯರ್ಥಿಗಳಿಗೆ ಬೆಳಗ್ಗೆ 10:30 ರಿಂದ 12:00 ಗಂಟೆಯವರೆಗೆ ಹಾಗೂ ಕಲ್ಯಾಣ ಕರ್ನಾಟಕ ( KK) ವೃಂದದ ಅಭ್ಯರ್ಥಿಗಳಿಗೆ ಮಧ್ಯಾಹ್ನ 2:30 ರಿಂದ 4:00 ಗಂಟೆಯವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜೊತೆಗೆ ಸರಕಾರದಿಂದ ಮಾನ್ಯತೆ ಪಡೆದ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ಅಂದರೆ ಆಧಾರ್ ಕಾರ್ಡ್ , ಪ್ಯಾನ್ ಕಾರ್ಡ್ , ಮತದಾರರ ಗುರುತಿನ ಚೀಟಿ ಇತ್ಯಾದಿ ಯಾವುದಾದರೂ ಒಂದು ದಾಖಲೆಗಳನ್ನಾ ಕಡ್ಡಾಯವಾಗಿ ತರಬೇಕು.
#CivilPoliceRecruitment: ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಕೇಂದ್ರಗಳನ್ನು ಪರೀಕ್ಷೆ ಬರೆಯಲು ಆಯ್ಕೆ ಮಾಡಿಕೊಂಡಿದ್ದ ಅಭ್ಯರ್ಥಿಗಳು ಪುನಃ ತಮ್ಮ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಕೋರಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) July 31, 2026
ಆಗಸ್ಟ್ 2ರಂದು ಲಿಖಿತ ಪರೀಕ್ಷೆ ನಡೆಯಲಿದೆ.
ಎರಡನೇ ಬಾರಿ…
ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ
1. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಆದ cetonline.karnataka.gov.in ಭೇಟಿ ನೀಡಿ.
2. ಮುಖಪುಟದಲ್ಲಿ ಕಾಣುತ್ತಿರುವ ' ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪ್ರವೇಶ ಪತ್ರ 2026' ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ನಿಮ್ಮ ಅರ್ಜಿ ಸಂಖ್ಯೆ ಮತ್ತು ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನ ನಮೂದಿಸಿ ಲಾಗಿನ್ ಆಗಿ.
4. ಕೊನೆಗೆ ಪರದೆಯ ಮೇಲೆ ಕಾಣಿಸುವ ಪ್ರವೇಶ ಪತ್ರವನ್ನ ಒಮ್ಮೆ ಸರಿಯಾಗಿ ಪರಿಶೀಲಿಸಿ, ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹಾಜರಾಗಿ , ಪ್ರಾಧಿಕಾರದ ಎಲ್ಲಾ ನಿಯಮಗಳನ್ನು ಪಾಲಿಸುವಂತೆ ಅಭ್ಯರ್ಥಿಗಳಿಗೆ ತಿಳಿಸಲಾಗಿದೆ.


Click it and Unblock the Notifications
