ಕಸ್ತೂರಿ ರಂಗನ್ ವರದಿ ಗಂಭೀರ ಚರ್ಚೆಗೆ ವೇದಿಕೆ: ಒಂದು ದಿನದ ವಿಶೇಷ ಅಧಿವೇಶನಕ್ಕೆ ಕರೆ
ಬೆಂಗಳೂರು: ಡಾ. ಕೆ. ಕಸ್ತೂರಿರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆ ಕುರಿತು ಚರ್ಚಿಸಿ, ಪಕ್ಷಾತೀತವಾಗಿ ತೀರ್ಮಾನ ಕೈಗೊಳ್ಳಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಬಗ್ಗೆ ಪಕ್ಷದ ಶಾಸಕರು ಹಾಗೂ ಹಿಂದಿನ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ಬಳಿಕ ಡಿ ಕೆ ಶಿವಕುಮಾರ್ ಮಾತನಾಡಿ,
ಡಾ. ಕೆ. ಕಸ್ತೂರಿರಂಗನ್ ವರದಿ ಆಧರಿಸಿ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ಅಂತಿಮಗೊಳಿಸಬಾರದು.

ಆರು ರಾಜ್ಯಗಳ 56,000 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಲು ಕೇಂದ್ರ ಪ್ರಸ್ತಾಪಿಸಿದೆ. ಕರ್ನಾಟಕದ 20,668 ಚ.ಕಿ.ಮೀ. ಪ್ರದೇಶ, 10 ಜಿಲ್ಲೆಗಳ (ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಉಡುಪಿ) 33 ತಾಲ್ಲೂಕುಗಳು ಹಾಗೂ 1,449 ಗ್ರಾಮಗಳು ESA ವ್ಯಾಪ್ತಿಗೆ ಸೇರುತ್ತವೆ. ಕೃಷಿಕರ ಜೀವನೋಪಾಯ ಹಾಗೂ ಭವಿಷ್ಯದ ಅಭಿವೃದ್ಧಿಗೆ ತೊಂದರೆಯಾಗಲಿದೆ ಎಂದರು.
ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ತಿರಸ್ಕರಿಸಿ, ಕೇಂದ್ರ ಸರ್ಕಾರವು 31 ಜುಲೈ 2024ರ ಕರಡು ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಲು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಒಮ್ಮತದ ನಿರ್ಧಾರ ಕೈಗೊಂಡಿತ್ತು. ಆದಾಗ್ಯೂ ಕೇಂದ್ರ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರ ಇದನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ಜನರ ಅಭಿಪ್ರಾಯವನ್ನೂ ಪಡೆಯಲಾಗುವುದು. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರದ ವತಿಯಿಂದ ಜನಜಾಗೃತಿ ಮೂಡಿಸಲಾಗುವುದು. ರಾಜ್ಯದ ನಿಲುವಿವನ್ನು ಕೇಂದ್ರ ಸರ್ಕಾರ ಗೌರವಿಸಬೇಕು. ಈ ವಿಚಾರವಾಗಿ ಕಾನೂನು ಚೌಕಟ್ಟಿನಲ್ಲಿ ಚರ್ಚಿಸಲಾಗುವುದು. ಕರ್ನಾಟಕಕ್ಕೆ ಒಂದು ನಿಯಮ ಹಾಗೂ ಬೇರೆಡೆ ಇನ್ನೊಂದು ನಿಯಮವನ್ನು ಕೇಂದ್ರ ಕೈಗೊಂಡಿದೆ ಎಂದರು.
ಬರಗಾಲ ಪರಿಸ್ಥಿತಿ ನಿರ್ವಹಣೆಯಲ್ಲಿ ಶಾಸಕರ ಪಾತ್ರದ ಬಗ್ಗೆ ಅವರಿಗೆ ಸಭೆಯಲ್ಲಿ ವಿವರಿಸಲಾಗಿದೆ. 100 ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಶೀಘ್ರವೇ ಉಪಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ. ಭವಿಷ್ಯದಲ್ಲಿ ಮತ್ತಷ್ಟು ತಾಲ್ಲೂಕುಗಳನ್ನು ಬರಗಾಲ ಪೀಡಿತ ಘೋಷಣೆ ಮಾಡುವ ಬಗ್ಗೆ ಸರ್ಕಾರ ನಿರ್ಣಯ ಮಾಡಲಿದ್ದು, ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ ನಿಯೋಗದೊಂದಿಗೆ ತೆರಳಿ ಮನವಿ ಮಾಡಲಿದ್ದೇನೆ ಎಂದರು.
ಶಾಸಕರು ಹೊಸ ಸರ್ಕಾರದ ಚಿಂತನೆ ಯೋಜನೆಗಳ ಬಗ್ಗೆ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ಸಚಿವ ತಿಂಗಳ ಮೊದಲ ಹಾಗೂ ಮೂರನೇ ಶನಿವಾರದಂದು ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಸಭೆ ನಡೆಸಲು ಸೂಚಿಸಲಾಗಿದೆ. ನಂತರ ಹೋಬಳಿ ಮಟ್ಟದಲ್ಲಿ ಈ ರೀತಿ ರಾಜ್ಯದ ಎಲ್ಲಾ 224 ಕ್ಷೇತ್ರಕ್ಕೆ ಸಚಿವರು ಭೇಟಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಆಯಾ ಶಾಸಕರು ಪಂಚಾಯತಿ ಮಟ್ಟದಲ್ಲಿಯೂ ಜನರ ಸಮಸ್ಯೆಗಳನ್ನು ಆಲಿಸಿ, ಜನರ ಭಾವನೆಗಳನ್ನು ಅರಿತು, ಸರ್ಕಾರಕ್ಕೆ ತಿಳಿಸಲು ಅನುಕೂಲವಾಗುವಂತೆ ಪ್ರಜಾಸೇವೆ ಇಲಾಖೆಯನ್ನು ರಚಿಸಲಾಗಿದೆ. ಈ ಬಗ್ಗೆ ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದೆ
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಜನರು ಮಟಪಟ್ಟಿಯಿಂದ ಕೈಬಿಡಲಾಗಿದೆ. ಖಾಯಂ ನಿವಾಸ ಪತ್ರ , ಜಾತಿ ಪ್ರಮಾಣ ಪತ್ರ ಸರ್ಕಾರ ಒದಗಿಸಲಾಗುತ್ತಿದೆ. ಬೂತ್ ಮಟ್ಟದಲ್ಲಿ ಸಭೆ ನಡೆಸಿ ಮತಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯುಕ್ತರನ್ನು ಕೋರಲಾಗಿದೆ. ಜನರಿಗೆ ಮತದ ಶಕ್ತಿ ಹಾಗೂ ಮತದ ಹಕ್ಕಿನ ಬಗ್ಗೆ ಶಾಸಕರು ಅರಿವು ಮೂಡಿಸಬೇಕು. ಅರ್ಹ ಮತದಾರರಿಗೆ ಅನ್ಯಾಯವಾಗಬಾರದು. ಜನರಿಗೆ ಮತದಾನದ ಹಕ್ಕು ಕೊಡಿಸಲು ಶ್ರಮಿಸಬೇಕೆಂದು ಶಾಸಕರಿಗೆ ಮಾರ್ಗದರ್ಶನ ನೀಡಲಾಗಿದೆ ಎಂದರು.
ಯುವಕರಿಗೆ ಹೊಸ ಪೀಳಿಗೆಯ ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಪಂಚಾಯತಿ ಮಟ್ಟದಲ್ಲಿ ಕ್ರೀಡೆ, ಯೋಗ , ಪರಿಸರ ಗಿಡ ಬೋಧನೆ, ಸಮುದಾಯ ಸೇವೆ, ನಾಯಕತ್ವ, ವಿಪತ್ತು ನಿರ್ವಹಣೆ ವಿಷಯಗಳ ಬಗ್ಗೆ ಸೂಕ್ತ ಅರಿವು, ಡ್ರಗ್ಸ್ ಮುಕ್ತ ರಾಗಲು, ದೇಶದ ಸಮಗ್ರತೆ, ಸಂವಿಧಾನದ ಬಗ್ಎ್ ಅರಿವು ಮೂಡಿಸುಲು ಜಾತಿ ಧರ್ಮಗಳನ್ನು ಬದಿಗೊತ್ತಿ ಭಾಗವಹಿಸಲು ಮಾರ್ಗದರ್ಶನ ನೀಡಬೇಕು. ಪ್ರತಿ ಸಂಘಕ್ಕೆ 10 ಲಕ್ಷ ರೂ. ಗಳನ್ನು ನಿಡಲಾಗುವುದು. ಪ್ರತಿ ಸಂಘಕ್ಕೆ ವಾರ್ಡ್ ನ ಸರ್ಕಾರಿ ನೌಕರರನ್ನು ಮಾರ್ಗದರ್ಶಕರಾಗಿ ನೇಮಿಸಲಾಗುವುದು.
ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಬೇಕು. ಪಂಚಾಯತಿಗಳಲ್ಲಿ 200 ಜನ ಸದಸ್ಯರಾಗಬೇಕು. ನೋ ಟು ಡ್ರಗ್ಸ್ , ಎಸ್ ಟು ಸ್ಪೋರ್ಟ್ಸ್ , ಆನ್ ಲೈನ್ ನಲ್ಲಿ ಈಗಾಗಲೇ 7 ಲಕ್ಷ ಜನ ಸದಸ್ಯತ್ವ ಪಡೆದಿದ್ದಾರೆ. ಸರ್ಕಾರದ ಶಾಲೆ, ಸಮುದಾಯಭವನ ದಲ್ಲಿ ನಿಯಮಿತವಾಗಿ ಸಭೆ ನಡೆಸಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.


Click it and Unblock the Notifications
