ಕರ್ನಾಟಕದಿಂದ ಈ ಮಹಿಳೆಯರು ಮಾತ್ರ ಸಂಸತ್‌ಗೆ ಆಯ್ಕೆ: ಯಾರು, ಯಾವ ಪಕ್ಷ?
ಬೆಂಗಳೂರು, ಜೂನ್ 05: ಕರ್ನಾಟಕ ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 2024ರಲ್ಲಿ ಮೂವರು ಮಹಿಳಾ ಮಣಿಗಳು ಸಂಸತ್‌ಗೆ ಆಯ್ಕೆ ಆಗಿದ್ದಾರೆ. ಒಟ್ಟು 28 ಮಂದಿ ಪೈಕಿ ಮೂವರು ರಾಜ್ಯದ ಮಹಿಳೆಯರನ್ನು ಪ್ರತಿನಿಧಿಸಿದ್ದಾರೆ. ಬಾಕಿ 25 ಕ್ಷೇತ್ರಗಳಲ್ಲಿ ಪುರುಷ ಅಭ್ಯರ್ಥಿಗಳು ಗೆದ್ದಿದ್ದಾರೆ. ಯಾರು ಯಾವ ಕ್ಷೇತ್ರ? ಯಾವ ಪಕ್ಷಗಳು?, ರಾಜಕೀಯ ಬೆಳವಣಿಗೆ ಬಗ್ಗೆ ಇಲ್ಲಿ ತಿಳಿಯಿರಿ.
ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆಗೆ ಚುನಾವಣೆ ಮತದಾನ ನಡೆಯಿತು. ಪ್ರಕಟಗೊಂಡ ಫಲಿತಾಂಶದಲ್ಲಿ ಬಿಜೆಪಿ 17 ಕ್ಷೇತ್ರಗಳು, ಕಾಂಗ್ರೆಸ್ 9 ಹಾಗೂ ಜೆಡಿಸ್ ಪಕ್ಷ ಮೂರು ಸೀಟುಗಳನ್ನು ಗೆದ್ದಿದೆ. ಇದರಲ್ಲಿ ಬಿಜೆಪಿಯಿಂದ ಒಬ್ಬ ಮಹಿಳೆ ಹಾಗೂ ಕಾಂಗ್ರೆಸ್‌ನಿಂದ ಇಬ್ಬರು ಮಹಿಳೆಯರು ಬಹುಮತಗಳಿಂದ ಗೆದ್ದು ಸಂಸತ್‌ಗೆ ಆಯ್ಕೆ ಆಗಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಮತ್ತು ಮೊದಲ ಭಾರಿಗೆ ಪ್ರಿಯಾಂಕಾ ಜಾರಕಿಹೊಳಿ ಇವರಿಬ್ಬರು ಸಂಸತ್‌ಗೆ ಆಯ್ಕೆಯಾದ ಮಹಿಳೆಯರಾಗಿದ್ದಾರೆ. ಬಿಜೆಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರು ಅವರು ಸಹ ಮಹಿಳೆಯರ ಗೆದ್ದ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಕೊಂಡಿದ್ದಾರೆ.
ಎಷ್ಟು ಮತಗಳ ಅಂತರದಿಂದ ಗೆದ್ದಿದ್ದಾರೆ
ಚಿಕ್ಕೋಡಿಯಲ್ಲಿ ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿರುವ ಪ್ರಿಯಾಂಕಾ ಜಾರಕಿಹೊಳಿ ಅವರು ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಸೋಲಿಸಿದರು. ಈ ಮೂಲಕ ಮೊದಲ ಪ್ರಯತ್ನದಲ್ಲೇ ಅವರು ಸಂಸತ್‌ಗೆ ಚುನಾಯಿತರಾದರು. ಇಲ್ಲಿ ಪ್ರಿಯಾಂಕಾ ಅವರು ಬರೋಬ್ಬರಿ 90 ಸಾವಿರ ಮತಗಳ ಅಂತರದಿಂದ ಜಯಬೇರಿ ಬಾರಿಸಿದ್ದಾರೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಪ್ರಭಾ ಮಲ್ಲಿಕಾರ್ಜುನ್ ಅವರು ಬಿಜೆಪಿ ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ ಅವರ ವಿರುದ್ಧ 26ಸಾವಿರ ಮತಗಳ ಅಂತರದಿಂದ ಬಿಜೆಪಿ ಮಣಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯ ಮೊದಲ ಸ್ಪರ್ಧೆಯಲ್ಲಿಯೇ ಜನಾಶೀರ್ವಾದ ಪಡೆದಿದ್ದಾರೆ.
ಸ್ವಂತ ಕ್ಷೇತ್ರ ಬಿಟ್ಟರೂ ಕರಂದ್ಲಾಜೆಗೆ ಭರ್ಜರಿ ಗೆಲುವು
ಇನ್ನೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಬದಲಾದ ಸನ್ನಿವೇಶದಲ್ಲಿ ಈ ಬಾರಿ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದರು.
ಇವರು ಕಾಂಗ್ರೆಸ್ ಅಭ್ಯರ್ಥಿ ಪ್ರೊಫೇಸರ್ ಎಂ.ವಿ.ರಾಜೀವ್ ಗೌಡ ಅವರನ್ನು ಬರೋಬ್ಬರಿ 2.59 ಲಕ್ಷ ಮತಗಳಿಂದ ಮಣಿಸಿದ್ದಾರೆ. ಕ್ಷೇತ್ರದಲ್ಲಿ ಭರ್ಜರಿ ಮತಗಳ ಮೂಲಕ ಮತ್ತೊಮ್ಮೆ ಜಯಬೇರಿ ಭಾರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ನ ನಿರೀಕ್ಷೆಗಳನ್ನು ಅವರು ತಲೆಕೆಳಗಾಗಿ ಮಾಡಿದ್ದಾರೆ.
ರಾಜ್ಯ ಒಟ್ಟು 28 ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಈ ಬಾರಿ ಮೂವರು ಮಹಿಳಾ ಮಣಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಗೆದ್ದ ಈ ಮೂವರು ಮಹಿಳೆಯರಿಗೆ ಪಕ್ಷ, ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಭರ್ಜರಿ ಸ್ವಾಗತ, ಸನ್ಮಾನ ಸಿಕ್ಕಿದೆ.












Click it and Unblock the Notifications