ಮೈಕ್ರೋಫೈನಾನ್ಸ್ ಕಾಟದಿಂದ ಸಾಲಗಾರಿಗೆ ರಿಲೀಫ್ ಸಿಗುತ್ತಾ? ಸುಗ್ರಿವಾಜ್ಞೆಯಲ್ಲಿ ಏನಿದೆ?
ಬೆಂಗಳೂರು, ಫೆಬ್ರವರಿ 13: ಮೈಕ್ರೋಫೈನಾನ್ಸ್ ಎಂದ ತಕ್ಷಣ ಸಾಲ ಪಡೆದವರು ಥರಗುಟ್ಟುವ ಚಳಿಯಲ್ಲಿಯೂ ಬೆವರುವಂತಾಗಿದೆ. ಹೀಗಿರುವಾಗಲೇ ಸರ್ಕಾರ ಸುಗ್ರಿವಾಜ್ಞೆ ಮೂಲಕ ತಂದಿರುವ ಕಾಯಿದೆ ಸಾಲಗಾರರಲ್ಲಿ ಆಶಾಭಾವನೆ ಮೂಡಿಸಿದಂತೆ ಗೋಚರಿಸಿದೆ. ಆದರೆ ಈಗಾಗಲೇ ಮೈಕ್ರೋಫೈನಾನ್ಸ್ ನ ಸುಳಿಗೆ ಸಿಕ್ಕ ಅದೆಷ್ಟೋ ಮನೆಯ ದೀಪ ಆರಿದೆ. ಮಾನಸಿಕ ಹಿಂಸೆ ತಾಳಲಾರದವರು ಊರು ಬಿಟ್ಟು ತಲೆಮರೆಸಿಕೊಂಡಿದ್ದಾರೆ. ಇನ್ನು ಕೆಲವರು, ಭಯ, ಮಾನಸಿಕ ಹಿಂಸೆ ಸಹಿಸಿಕೊಂಡೇ ಜೀವನ ಸಾಗಿಸುವಂತಾಗಿದೆ. ಹಾಗಾದರೆ ಸಂತ್ರಸ್ತರಿಗೆ ಈಗಲೇ ಪರಿಹಾರ ಸಿಕ್ಕಿ ಬಿಡುತ್ತಾ..?
ಇಷ್ಟಕ್ಕೂ ಮೈಕ್ರೋ ಫೈನಾನ್ಸ್ ನವರಿಗೆ ಬಡವರೇ ಟಾರ್ಗೆಟ್ ಆಗಿದ್ದು, ಬಡವರಿಗೆ ಸಾಲ ನೀಡಿದರೆ ಅಸಲು ಜತೆಗೆ ಎರಡು ಪಟ್ಟು ಬಡ್ಡಿ ವಸೂಲಿ ಮಾಡಿದರೂ ಅವರ ಪರವಾಗಿ ಹೋರಾಟ ಮಾಡುವವರು ಯಾರು ಇಲ್ಲ ಎಂಬ ನಂಬಿಕೆ. ಹೀಗಾಗಿಯೇ ಸಾಲ ನೀಡಿ ವಸೂಲಿ ಮಾಡುತ್ತಾ ಅವರ ಬದುಕನ್ನು ಮೂರಾಬಟ್ಟೆಯಾಗಿಸುತ್ತಾ ಬರಲಾಗುತ್ತಿದೆ. ಮೈಕ್ರೋಫೈನಾನ್ಸ್ ನವರು ಸಾಲ ನೀಡುತ್ತಿರುವುದು ಇವತ್ತು ನಿನ್ನೆಯಲ್ಲ. ಬಹಳಷ್ಟು ವರ್ಷಗಳಿಂದ ಇಂತಹದೊಂದು ದಂಧೆ ನಡೆಯುತ್ತಲೇ ಇದೆ. ಆದರೆ ಅದು ಅತಿರೇಕಕ್ಕೆ ಹೋಗಿರಲಿಲ್ಲ ಹೀಗಾಗಿ ಇಲ್ಲಿನ ಕರಾಳತೆ ಹೊರ ಬಂದಿರಲಿಲ್ಲ.

ಯಾವಾಗ ಸಾಲಗಾರರ ಮನೆ ಬಾಗಿಲಿಗೆ ಬಂದು ವಸೂಲಿ ಆರಂಭಿಸಿದ ಏಜೆಂಟರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲು ಆರಂಭಿಸಿದರೋ ಕೆಲವರು ಚಿನ್ನ, ಆಸ್ತಿ ಅಡವಿಟ್ಟು ಸಾಲಕಟ್ಟಿ ಕೈತೊಳೆದುಕೊಂಡರೆ ಮತ್ತೆ ಕೆಲವರು ಅಸಲು ಇರಲಿ ಬಡ್ಡಿಯೂ ಕಟ್ಟಲಾಗದ ಪರಿಸ್ಥಿತಿಗೆ ಹೋಗಿ ಕೊನೆಗೆ ಅನ್ಯಮಾರ್ಗವಿಲ್ಲದೆ ಸಾವಿಗೆ ಶರಣಾಗ ಬೇಕಾಯಿತು.
ಇನ್ನೊಂದೆಡೆ ರಾತ್ರಿ ಬೆಳಗಾಗುವುದರಲ್ಲಿ ಜನ ಊರನ್ನೇ ತೊರೆಯುವಂತಾಯಿತು. ಚಾಮರಾಜನಗರದಲ್ಲಿ ಹೆತ್ತವರು ಮೈಕ್ರೋಫೈನಾನ್ಸ್ ಕಾಟಕ್ಕೆ ಹೆದರಿ ಊರು ಬಿಟ್ಟ ವಿಚಾರವನ್ನು ಬಾಲಕಿ ತೆರೆದಿಡುವ ಮೂಲಕ ಪ್ರಕರಣ ತೀವ್ರತೆ ಪಡೆದುಕೊಂಡಿತು. ಇದಾದ ನಂತರ ಮೈಕ್ರೋಫೈನಾನ್ಸ್ ನ ಕಿರುಕುಳದ ಪ್ರಕರಣ ಒಂದರ ಮೇಲೊಂದರಂತೆ ಹೊರಬರತೊಡಗಿತ್ತು.

ಮೈಕ್ರೋಫೈನಾನ್ಸ್ ಗೆ ಮೂಗುದಾರ ಹಾಕಲು ಸಿದ್ಧತೆ
ಈ ವೇಳೆ ಎಚ್ಚೆತ್ತುಕೊಂಡ ಸಾಲ ನೀಡಿದ ಏಜೆಂಟರು ಇದು ತಾರಕಕ್ಕೇರುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಿ ಬರಬಹುದೆಂದು ಆಲೋಚಿಸಿ ತಮ್ಮ ವ್ಯಾಪ್ತಿಯಲ್ಲಿರುವ ಸಾಲಗಾರರ ಮನೆ ಬಾಗಿಲು ತಟ್ಟಿ ಬಡ್ಡಿ ಅಸಲು ವಸೂಲಿಗೆ ಮುಂದಾದರು. ರಾತ್ರಿ ಹಗಲು ಎನ್ನದೆ ಸಾಲಗಾರರ ಮನೆ ಬಾಗಿಲಲ್ಲಿ ಕುಳಿತು ಬಿಟ್ಟರು. ಇವರ ಕಿರುಕುಳ ಸಹಿಸಲಾಗದೆ ಅಸಹಾಯಕ ಹೆಣ್ಣುಮಕ್ಕಳು ಸಾವಿಗೆ ಶರಣಾಗಿ ಬಿಟ್ಟರು. ಯಾವಾಗ ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ನವರ ಗೂಂಡಾಗಿರಿ, ಸಾಲಗಾರರ ಆತ್ಮಹತ್ಯೆ ಹೆಚ್ಚಾಗುತ್ತಿದ್ದಂತೆಯೇ ಸರ್ಕಾರದ ಮೇಲೆ ಒತ್ತಡಗಳು ಬರಲಾರಂಭಿಸಿತು.
ಕೂಡಲೇ ಎಚ್ಚೆತ್ತುಕೊಂಡ ಸರ್ಕಾರ ಮೈಕ್ರೋಫೈನಾನ್ಸ್ ಗೆ ಮೂಗುದಾರ ಹಾಕುವ ಸಲುವಾಗಿ ಕಾಯ್ದೆ ಮಾಡಿ ಸುಗ್ರಿವಾಜ್ಞೆ ಹೊರಡಿಸುವ ಸಲುವಾಗಿ ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ಕಳುಹಿಸಿ ಕೊಟ್ಟಿತು. ಆದರೆ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರು ಕಾಯಿದೆಯಲ್ಲಿ ಕೆಲವೊಂದು ಕಾನೂನು ತೊಡಕುಗಳಿದ್ದು ಅದನ್ನು ಸರಿಪಡಿಸುವಂತೆ ಸೂಚಿಸಿ ವಾಪಸ್ ಕಳುಹಿಸಿ ಕೊಟ್ಟರು. ಅದರಂತೆ ಮತ್ತೆ ಕಳುಹಿಸಲಾಗಿದ್ದು, ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಈ ನಡುವೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು ಒಂದಷ್ಟು ಸೂಚನೆಗಳನ್ನು ನೀಡಿ ಜಿಲ್ಲಾಡಳಿತಕ್ಕೆ ಕಳುಹಿಸಿದ್ದು ಅದರ ಪಾಲನೆ ಮಾಡುವಂತೆ ಸೂಚಿಸಿದ್ದರು.

ಸರ್ಕಾರ ಹೊರಡಿಸಿರುವ ಸುಗ್ರಿವಾಜ್ಞೆಯಲ್ಲಿ ಏನಿದೆ?
ಇದರ ನಡುವೆಯೂ ಆತ್ಮಹತ್ಯೆಗಳಾಗಿವೆ ಎನ್ನುವುದಾದರೆ ಮೈಕ್ರೋಫೈನಾನ್ಸ್ ರವರ ಕಿರುಕುಳ ಹೇಗಿರಬಹುದು ಎಂಬುದನ್ನು ನಾವು ಮನಗಾಣಬೇಕಾಗುತ್ತದೆ. ಇದೀಗ ಸುಗ್ರಿವಾಜ್ಞೆ ಸರ್ಕಾರದ ಕೈಸೇರಿದೆ. ಇಲ್ಲಿ ರಾಜ್ಯಪಾಲರು ಮುಂದಿನ ಅಧಿವೇಶನದಲ್ಲಿ ಕಾಯ್ದೆಯ ಸಾಧಕ ಮತ್ತು ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡುವಂತೆ ಸೂಚಿಸಿದ್ದಾರೆ. ಹಾಗಾದರೆ ಮೈಕ್ರೋಫೈನಾನ್ಸ್ ನವರಿಗೆ ಅಂಕುಶ ಬೀಳುತ್ತಾ? ಈ ಕೂಡಲೇ ಸಾಲಗಾರರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಿ ಬಿಡುತ್ತಾರಾ? ಸಾಲ ತೆಗೆದುಕೊಂಡವರು ಕಂತಿನ ಹಣವನ್ನು ಕಟ್ಟುತ್ತಾ ಬಂದಿದ್ದು ಅದನ್ನು ಮುಂದುವರೆಸಬೇಕಾ? ಅಸಲಿಗಿಂತಲೂ ಹೆಚ್ಚಿನ ಹಣವನ್ನು ಪಾವತಿಸಿದವರ ಕಥೆ ಏನು? ಹೀಗೊಂದು ಪ್ರಶ್ನೆಗಳು ಉದ್ಭವಿಸಿದೆ.
ಸುಗ್ರಿವಾಜ್ಞೆಯಲ್ಲಿ ಪ್ರಮುಖವಾಗಿ ಏನಿದೆ ಎಂಬುದನ್ನು ನೋಡಿದ್ದೇ ಆದರೆ ಸಾಲಗಾರರಿಗೆ ಮಾನಸಿಕ ಹಿಂಸೆ ಕಿರುಕುಳ ಸೇರಿದಂತೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದೇ ಆದಲ್ಲಿ ಹತ್ತು ವರ್ಷಗಳ ಅವಧಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಐದು ಲಕ್ಷ ರೂ.ದಂಡವನ್ನು ಹಾಕಬಹುದಾಗಿದೆ. ಅಷ್ಟೇ ಅಲ್ಲದೆ ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಮುಖ್ಯವಾಗಿ ಸಾಲಗಾರರನನ್ನು ರಕ್ಷಿಸುವ ಸಲುವಾಗಿ ಕಾಯ್ದೆ ಮಾಡಲಾಗಿದ್ದು ಅದರಂತೆ ಮೈಕ್ರೋಫೈನಾನ್ಸ್ ಸಂಸ್ಥೆಗಳು ಅಥವಾ ಹಣ ಸಾಲ ನೀಡುವ ಏಜೆನ್ಸಿಗಳು ಅಥವಾ ಸಂಸ್ಥೆಗಳಿಂದ ಬಡ್ಡಿದರಗಳು ಮತ್ತು ಬಲವಂತದ ವಸೂಲಾತಿ ವಿಧಾನಗಳ ಅನಗತ್ಯ ತೊಂದರೆಯಿಂದ ಸಾಲಗಾರರನ್ನು ರಕ್ಷಿಸುವ ಮತ್ತು ನಿವಾರಿಸುವ ಗುರಿಯನ್ನು ಹೊಂದಿದೆ.
ಮೈಕ್ರೋಫೈನಾನ್ಸ್ ಗೆ ನೀಡಿದ ಸೂಚನೆಗಳೇನು?
ಇದೀಗ ಸುಗ್ರಿವಾಜ್ಞೆಯಲ್ಲಿ ಇರುವಂತೆ ಸಾಲಗಾರರು ಅಥವಾ ಅವರ ಕುಟುಂಬ ಸದಸ್ಯರ ಮೇಲೆ ಬಲವಂತದ ಕ್ರಮಗಳನ್ನು ಹೇರುವುದು, ಅಡ್ಡಿಪಡಿಸುವುದು, ಹಿಂಸೆ ನೀಡುವುದು, ಅವಮಾನಿಸುವುದು, ಬೆದರಿಸುವುದು ಅಥವಾ ಸಾಲಗಾರರು, ಅವರ ಕುಟುಂಬ ಸದಸ್ಯರನ್ನು ನಿರಂತರವಾಗಿ ಹಿಂಬಾಲಿಸುವುದು ಅಥವಾ ಅವರ ಒಡೆತನದ ಅಥವಾ ಬಳಸಿದ ಯಾವುದೇ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಹೇಳಿದೆ. ಇದರ ಜತೆಗೆ ಸಾಲಗಾರರು ವಾಸಿಸುವ ಮನೆ ಅಥವಾ ಇತರ ಸ್ಥಳಗಳಿಗೆ ಆಗಾಗ್ಗೆ ಹೋಗುವುದು, ಹಣವನ್ನು ವಸೂಲಿ ಮಾಡಲು ಹೊರಗುತ್ತಿಗೆ ನೀಡುವುದು ಮತ್ತು ಸಾಲಗಾರರಿಂದ ಯಾವುದೇ ದಾಖಲೆಯನ್ನು ಬಲವಂತವಾಗಿ ತೆಗೆದುಕೊಳ್ಳದಂತೆಯೂ, ಇದನ್ನು ಉಲ್ಲಂಘಿಸಿದಲ್ಲಿ ದಂಡ ಹಾಕುವ ಎಚ್ಚರಿಕೆ ನೀಡಿದೆ.
ಇನ್ನು ನಾಯಿಕೊಡೆಗಳಂತೆ ಹುಟ್ಟಿಕೊಂಡು ಬಡವರಿಗೆ ಹಣ ನೀಡಿ ಅವರ ರಕ್ತ ಹೀರುತ್ತಿರುವ ಮೈಕ್ರೋಫೈನಾನ್ಸ್ ಕಂಪನಿಗಳ ಮೇಲೆಯೂ ನಿರ್ಬಂಧ ಹೇರಲಾಗಿದೆ. ಇನ್ನೊಂದು ತಿಂಗಳ ಅವಧಿಯೊಳಗೆ ಎಲ್ಲ ಮೈಕ್ರೋಫೈನಾನ್ಸ್ ಗಳು ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಅವರು ಕಾರ್ಯನಿರ್ವಹಿಸುತ್ತಿರುವ ಗ್ರಾಮ, ಪಟ್ಟಣ ಮತ್ತು ಜಿಲ್ಲೆಯನ್ನು ಸಹ ನಿರ್ದಿಷ್ಟಪಡಿಸಬೇಕು. ಸಂಸ್ಥೆಗಳು ಬಡ್ಡಿದರ, ಸರಿಯಾದ ಪರಿಶ್ರಮ ಮತ್ತು ವಸೂಲಾತಿ ವ್ಯವಸ್ಥೆ, ಹಣ ಸಾಲ ನೀಡುವ ಚಟುವಟಿಕೆಯನ್ನು ನಡೆಸಲು ಅಧಿಕಾರ ಹೊಂದಿರುವ ವ್ಯಕ್ತಿಗಳ ಪಟ್ಟಿಯನ್ನು ಸಹ ನಮೂದಿಸಬೇಕು.
ಸಾಲಗಾರರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್
ಈ ಸುಗ್ರೀವಾಜ್ಞೆ ಜಾರಿಗೆ ಬಂದ ನಂತರ ಕಾರ್ಯನಿರ್ವಹಿಸುತ್ತಿರುವ ಅಥವಾ ಹಣ ಸಾಲ ನೀಡುವ ವ್ಯವಹಾರವನ್ನು ಪ್ರಾರಂಭಿಸಲು ಉದ್ದೇಶಿಸಿರುವ ಯಾವುದೇ ಕಿರುಬಂಡವಾಳ ಸಂಸ್ಥೆಗಳು ಅಥವಾ ಹಣ ಸಾಲ ನೀಡುವ ಸಂಸ್ಥೆಗಳು ಅಥವಾ ಸಂಸ್ಥೆಗಳು ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಮಾಡದೇ ಯಾವುದೇ ಸಾಲಗಳನ್ನು ನೀಡಬಾರದು. ಯಾವುದೇ ಸಾಲಗಳನ್ನು ವಸೂಲಿ ಮಾಡದಂತೆಯೂ, ಸುಗ್ರೀವಾಜ್ಞೆ ಜಾರಿಗೆ ಬರುವ ದಿನಾಂಕದ ಮೊದಲು ಸಾಲಗಾರರಿಂದ ಪಡೆದ ಯಾವುದೇ ಭದ್ರತಾ ಪತ್ರಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಸೂಚಿಸಲಾಗಿದೆ.
ಇಷ್ಟರ ಮೇಲೆಯೂ ಮೈಕ್ರೋಫೈನಾನ್ಸ್ ಕಾನೂನು ಉಲ್ಲಂಘನೆ ಮಾಡಿದ್ದರೆ, ವಿಧಿಸಲಾದ ಬಡ್ಡಿದರಗಳಲ್ಲಿ ಪಾರದರ್ಶಕತೆ ಇಲ್ಲದೆ ಹೋದರೆ, ಸಾಲಗಾರರಿಂದ ಹಣವನ್ನು ವಸೂಲಿ ಬಲವಂತದ ಕ್ರಮಗಳನ್ನು ಕೈಗೊಂಡಿದ್ದರೆ, ನೋಂದಣಿ ಪ್ರಾಧಿಕಾರವು ಸ್ವಯಂಪ್ರೇರಿತವಾಗಿ ಅಥವಾ ದೂರನ್ನು ಸ್ವೀಕರಿಸಿದ ನಂತರ ನೋಂದಣಿಯನ್ನು ರದ್ದುಗೊಳಿಸುವ ಅಥವಾ ಅಮಾನತುಗೊಳಿಸುವ ಹಕ್ಕನ್ನು ಹೊಂದಿದೆ. ಸುಗ್ರಿವಾಜ್ಞೆಯಲ್ಲಿರುವ ಅಂಶಗಳನ್ನು ಗಮನಿಸಿದರೆ ಸಾಲಗಾರರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಂತೆ ಕಾಣಿಸುತ್ತಿದೆ. ಆದರೆ ಈಗಾಗಲೇ ಪ್ರಾಣಕಳೆದುಕೊಂಡವರಿಗೆ ಕಥೆ ಏನು? ಅವರ ವಿಚಾರದಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
-
Bagalkot: ಬಾಗಲಕೋಟೆಯಲ್ಲಿ ಕಮಲದ ವಿಜಯೋತ್ಸವ ನಿಶ್ಚಿತ: ಪ್ರಹ್ಲಾದ್ ಜೋಶಿ ವಿಶ್ವಾಸ -
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
Baglkot By Poll:9 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸಾಧನೆ ಶೂನ್ಯ: ಗ್ಯಾರಂಟಿ ಯೋಜನೆಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ -
ಕೇರಳದಲ್ಲಿ ಬದಲಾವಣೆಯ ಪರ್ವ ಆರಂಭ: ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ಕೈಹಿಡಿಯಲಿದ್ದಾರೆ-ಡಿ.ಕೆ.ಶಿವಕುಮಾರ್ ಭವಿಷ್ಯ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications