ಹೆಚ್ಚಿದ ಒತ್ತಡ: ರೈತರಿಗೆ 6 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಸಲು ಹೆಸ್ಕಾಂ ನಿರ್ಧಾರ
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಹೆಸ್ಕಾಂ) ವ್ಯಾಪ್ತಿಯಲ್ಲಿ ಬರುವ ರೈತರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದೆ. ಈ ಭಾಗದ ರೈತರಿಗೆ ಇನ್ನುಮುಂದೆ ಪ್ರತಿದಿನ ಆರು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆಯಾಗಲಿದೆ. ಹೆಸ್ಕಾಂನ ಈ ನಿರ್ಧಾರದಿಂದ ಈ ಭಾಗದ ಬರಪೀಡಿತ ಜಿಲ್ಲೆಗಳ ರೈತರಲ್ಲಿ ಸ್ವಲ್ಪ ನೆಮ್ಮದಿ ಮೂಡಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬಹುತೇಕ ಜಲಮೂಲಗಳಲ್ಲಿ ವಿದ್ಯುತ್ ಉತ್ಪಾದನೆಗೆ ಸಾಕಾಗುವಷ್ಟು ನೀರು ಇಲ್ಲದೇ ಪವನ, ಸೌರ, ಉಷ್ಣ ವಿದ್ಯುತ್ ಉತ್ಪಾದನೆಗೂ ತೊಂದರೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಸಿದಿದ್ದು, ವಿದ್ಯುತ್ ಕಡಿತವು ಈ ಪ್ರದೇಶದಲ್ಲಿ ಮಾಮೂಲಿಯಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ನಿರ್ದೇಶನದ ಮೇರೆಗೆ ರೈತರಿಗೆ ಆರು ಗಂಟೆ ತ್ರಿಫೇಸ್ ವಿದ್ಯುತ್ ನೀಡಲು ಹೆಸ್ಕಾಂ ನಿರ್ಧರಿಸಿದ್ದು, ಇದುವರೆಗೆ ಕೇವಲ ನಾಲ್ಕು ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿತ್ತು.
ಇತ್ತೀಚೆಗಷ್ಟೇ ನಡೆದ ಸಭೆಯಲ್ಲಿ ಸಿಎಂ ಹಾಗೂ ಇಂಧನ ಸಚಿವರು ರಾಜ್ಯದ ರೈತರಿಗೆ ಐದು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸುವಂತೆ ಎಲ್ಲ ಎಸ್ಕಾಂಗಳಿಗೆ ಸೂಚಿಸಿದ್ದರು. ಆದರೆ ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ರೈತರಿಗೆ ಐದರಿಂದ ಆರು ಗಂಟೆ ವಿದ್ಯುತ್ ಪೂರೈಸಲು ಹೆಸ್ಕಾಂ ನಿರ್ಧರಿಸಿದೆ.
ಕೈಕೊಟ್ಟ ಮಳೆ, ಅಂತರ್ಜಲವೇ ಆಸರೆ
ಕಬ್ಬು, ಭತ್ತ, ತೋಟಗಾರಿಕೆ ಬೆಳೆಗಳು ಬಹುತೇಕ ಕಟಾವಿಗೆ ಸಿದ್ಧವಾಗಿದ್ದ ರೈತರಿಗೆ ಈ ಬೆಳವಣಿಗೆಯ ಹಂತದಲ್ಲಿ ನೀರಿನ ಅಗತ್ಯವಿರಲಿಲ್ಲ. ಆದರೆ, ವಿದ್ಯುತ್ ಕಡಿತ ಅವರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಹಗಲು ವೇಳೆ 8 ತಾಸು 3ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಹಲವು ರೈತರು ಧಾರವಾಡ, ವಿಜಯಪುರ ಹಾಗೂ ಇತರ ಜಿಲ್ಲೆಗಳಲ್ಲಿ ಹೆಸ್ಕಾಂ ಕಚೇರಿಗಳಿಗೆ ಪ್ರತಿಭಟನೆ ನಡೆಸಿದ್ದರು.
ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಂ.ರೋಷನ್ ಮಾತನಾಡಿ, ರೈತರ ನೀರಾವರಿ ಪಂಪ್ ಸೆಟ್‌ಗಳಿಗೆ 2.8 ಕೋಟಿ ಯೂನಿಟ್ ಸೇರಿದಂತೆ ಪ್ರತಿದಿನ ಆರು ಕೋಟಿ ಯೂನಿಟ್ ವಿದ್ಯುತ್ ಅಗತ್ಯವಿದೆ. ಈಗ ದಿನಕ್ಕೆ 5.6 ಕೋಟಿ ಯೂನಿಟ್ ವಿದ್ಯುತ್ ಪೂರೈಕೆಯಾಗುತ್ತಿದ್ದು, ರೈತರಿಗೆ ಸುಮಾರು ಐದು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸಿಎಂ ಹಾಗೂ ಇಂಧನ ಸಚಿವರ ನಿರ್ದೇಶನದ ಮೇರೆಗೆ ಹೆಸ್ಕಾಂ ರೈತರಿಗೆ ಆರು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಸಲಿದೆ ಎಂದು ಹೇಳಿರುವುದಾಗಿ ಡಿಹೆಚ್ ವರದಿ ಮಾಡಿದೆ.
ಕಬ್ಬು, ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ಆರು ಗಂಟೆ ವಿದ್ಯುತ್ ಪೂರೈಕೆಯಾಗಲಿದೆ. ಈಗಾಗಲೇ ಆಯಾ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಸ್ಥಳೀಯರು ಮತ್ತು ರೈತರೊಂದಿಗೆ ಸಭೆ ನಡೆಸಿದ್ದು, ಆರು ಗಂಟೆಗಳ ಕಾಲ ವಿದ್ಯುತ್ ಪೂರೈಸುತ್ತಾರೆ ಎಂದು ಹೇಳಿದರು.
ಕಬ್ಬು ಕಟಾವಿಗೆ ಸಿದ್ಧವಾಗಿರುವುದರಿಂದ ನೀರಾವರಿಗೆ ಹೆಚ್ಚಿನ ವಿದ್ಯುತ್ ಪೂರೈಕೆಯ ಅಗತ್ಯವಿರುವುದಿಲ್ಲ ಮತ್ತು ಬಳಕೆ ಕಡಿಮೆಯಾಗುತ್ತದೆ. ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾದ ನಂತರ, ಅವು ವಿದ್ಯುತ್ ಉತ್ಪಾದಿಸುತ್ತವೆ ಮತ್ತು ಇದು ವಿದ್ಯುತ್ ಪೂರೈಕೆಗೆ ಸಹಾಯ ಮಾಡುತ್ತದೆ. ಸದ್ಯಕ್ಕೆ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ಸರ್ಕಾರ ವಿದ್ಯುತ್ ಖರೀದಿಸುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ.
10 ಗಂಟೆ ವಿದ್ಯುತ್ ಪೂರೈಸಲು ಆಗ್ರಹ
ರೈತರಿಗೆ 10 ಗಂಟೆ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ರತ್ನ ಭಾರತ ರೈತ ಸಮಾಜದ ಸದಸ್ಯರು ನಗರದ ನವನಗರದ ಹೆಸ್ಕಾಂ ಕೇಂದ್ರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಹೆಸ್ಕಾಂ ರೈತರಿಗೆ ರಾತ್ರಿ ವೇಳೆ ಕೇವಲ ಐದು ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತಿದೆ ಎಂದು ಆರೋಪಿಸಿದರು. ಬರ ಪರಿಸ್ಥಿತಿ ಇರುವುದರಿಂದ ರೈತರಿಗೆ ಬೆಳೆ ಬೆಳೆಯಲು ಹೆಸ್ಕಾಂ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದರು.












Click it and Unblock the Notifications