Karnataka Weather Today: ಬಿಸಿಲಿನ ಝಳಕ್ಕೆ ಬ್ರೇಕ್, ರಾಜ್ಯದ ಹಲವೆಡೆ ಇಂದು ಭಾರಿ ಮಳೆ ಸಾಧ್ಯತೆ
ಕಳೆದ ಕೆಲವು ವಾರಗಳಿಂದ ಬಿಸಿಲಿನ ತಾಪಕ್ಕೆ ಬೆಂದಿದ್ದ ಕನ್ನಡಿಗರಿಗೆ ಹವಾಮಾನ ಇಲಾಖೆ ಕೊನೆಗೂ ಒಂದು ತಂಪಾದ ಸುದ್ದಿ ನೀಡಿದೆ. ಇಂದು, ಅಂದರೆ ಸೆಪ್ಟೆಂಬರ್ 28, 2026 ರಂದು ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.
ಸೆಪ್ಟೆಂಬರ್ ಮೊದಲಾರ್ಧದಲ್ಲಿ ಒಣ ಹವೆ ಹಾಗೂ ಅಸಹನೀಯ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ, ತಿಂಗಳ ಕೊನೆಯ ವಾರದಲ್ಲಿ ಮಳೆರಾಯ ಕೊಂಚ ತಂಪೆರೆಯುತ್ತಿದ್ದಾನೆ. ಮುಖ್ಯವಾಗಿ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಹವಾಮಾನ ಇಲಾಖೆಯು ಅಧಿಕೃತವಾಗಿ ಇದನ್ನು 'ಹಿಟ್ ವೇವ್' ಎಂದು ಘೋಷಿಸದಿದ್ದರೂ, ಬಿಸಿಲಿನ ತೀಕ್ಷ್ಣತೆ ಮಾತ್ರ ಜನಸಾಮಾನ್ಯರನ್ನ ಅಕ್ಷರಶಃ ಹೈರಾಣಾಗಿಸಿತ್ತು. ಆದರೆ, ಇದೀಗ ಹವಾಮಾನದಲ್ಲಿ ಸಕಾರಾತ್ಮಕ ಬದಲಾವಣೆಯಾಗಿದೆ.
ರಾಜ್ಯದ ಹಲವೆಡೆ, ವಿಶೇಷವಾಗಿ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಕಳೆದ ಮೂರು ವಾರಗಳಿಂದ ಮಳೆಯನ್ನೇ ಕಾಣದೆ ಸೊರಗಿದ್ದ ನೂರಕ್ಕೂ ಹೆಚ್ಚು ತಾಲೂಕುಗಳಿಗೆ ಈ ಮಳೆ ದೊಡ್ಡ ರಿಲೀಫ್ ನೀಡಲಿದೆ.
ದಕ್ಷಿಣ ಒಳನಾಡು:
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮಳೆಯ ಅಬ್ಬರ ಕೊಂಚ ಹೆಚ್ಚಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ ಅಧಿಕೃತ ಮುನ್ಸೂಚನೆಯ ಪ್ರಕಾರ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಹಾಗೆಯೇ, ಈ ಭಾಗದಲ್ಲಿ ಮಳೆಯ ಜೊತೆಗೆ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆ ಇದೆ.
ಉತ್ತರ ಒಳನಾಡಿನ ಹವಾಮಾನ ಹೇಗಿರಲಿದೆ?
ಉತ್ತರ ಒಳನಾಡಿನ ಹವಾಮಾನದಲ್ಲಿಯೂ ಕೆಲವೊಂದು ಬದಲಾವಣೆಗಳಾಗಿದ್ದು, ಅಲ್ಲಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ ಇದೆ. ಪ್ರಮುಖವಾಗಿ ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚು ಕಾಣಿಸಿಕೊಳ್ಳಲಿದ್ದು, 30 ರಿಂದ 40 ಕಿ.ಮೀ ವೇಗದಲ್ಲಿ ವೇಗವಾಗಿ ಗಾಳಿ ಬೀಸಲಿದೆ.
ಇದರ ಜೊತೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಳಿದಂತೆ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಬಹುತೇಕ ಒಣ ಹವೆ ಮುಂದುವರಿಯಲಿದೆ.
ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ
ಉದ್ಯಾನನಗರಿ ಬೆಂಗಳೂರಿನಲ್ಲಿ ತಾಪಮಾನ ಸುಮಾರು 34 ಡಿಗ್ರಿ ಸೆಲ್ಸಿಯಸ್ ಸಮೀಪಿಸಿ, 75 ವರ್ಷಗಳ ಹಿಂದಿನ ಸೆಪ್ಟೆಂಬರ್ ತಿಂಗಳ ಗರಿಷ್ಠ ಉಷ್ಣಾಂಶದ ದಾಖಲೆಯನ್ನು ಸರಿಗಟ್ಟುವ ಹಂತಕ್ಕೆ ತಲುಪಿತ್ತು. ಹವಾಮಾನ ಇಲಾಖೆಯ ಪ್ರಕಾರ, ತೇವಭರಿತ ನೈಋತ್ಯ ಮಾರುತಗಳ ಬದಲಾಗಿ, ತೇವಾಂಶವಿಲ್ಲದ ಒಣ ವಾಯುವ್ಯ ಗಾಳಿ ಬೀಸಿದ್ದೇ ಈ ಅಸಾಮಾನ್ಯ ಬಿಸಿಲಿಗೆ ಪ್ರಮುಖ ಕಾರಣವಾಗಿತ್ತು.
ಬೆಂಗಳೂರು ನಗರದ ಇಂದಿನ (ಸೆಪ್ಟೆಂಬರ್ 28) ಹವಾಮಾನದ ಬಗ್ಗೆ ಗಮನ ಹರಿಸುವುದಾದರೆ, ಬೆಳಗಿನ ಜಾವ ಆಕಾಶ ಶುಭ್ರವಾಗಿರಲಿದ್ದು, ಹಿತಕರವಾದ ವಾತಾವರಣ ಇರಲಿದೆ. ಆದರೆ ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಮಧ್ಯಾಹ್ನ 2 ಗಂಟೆಯ ಆಸುಪಾಸಿನಲ್ಲಿ ನಗರದ ಹಲವೆಡೆ ಸಾಧಾರಣದಿಂದ ತುಂತುರು ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಇಂದಿನ ಗರಿಷ್ಠ ತಾಪಮಾನ 30°C ಮತ್ತು ಕನಿಷ್ಠ ತಾಪಮಾನ 20°C ಇರಲಿದೆ ಎಂದು ಅಂದಾಜಿಸಲಾಗಿದೆ. ಗಾಳಿಯ ವೇಗ ಗಂಟೆಗೆ 10 ಕಿ.ಮೀ ಇರಲಿದ್ದು, ಮಧ್ಯಾಹ್ನದ ಬಳಿಕ ವಾತಾವರಣ ತಂಪಾಗಲಿದೆ. ಹೀಗಾಗಿ, ಇಂದು ಮಧ್ಯಾಹ್ನ ಹೊರಗೆ ತೆರಳುವವರು ಮುಂಜಾಗ್ರತೆಯಾಗಿ ಛತ್ರಿ ಅಥವಾ ರೈನ್ ಕೋಟ್ ಜೊತೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ.
ಮುಂದಿನ ಎರಡು ದಿನಗಳ ಕಾಲ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಉತ್ತಮ ಮಳೆಯಾದರೆ, ಮುಂಬರುವ ಅಕ್ಟೋಬರ್ ತಿಂಗಳ ಆರಂಭವು ರಾಜ್ಯದ ಜನತೆಗೆ ಮತ್ತಷ್ಟು ತಂಪಾದ ಮತ್ತು ಆಹ್ಲಾದಕರ ವಾತಾವರಣವನ್ನು ಒದಗಿಸಲಿದೆ.


Click it and Unblock the Notifications
