Karnataka Weather: ಇಂದು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ, ಎಲ್ಲೆಲ್ಲಿ ಅಲರ್ಟ್?
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದು (ಸೆಪ್ಟೆಂಬರ್ 16) ಗುಡುಗು, ಮಿಂಚು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನ ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಕಳೆದ ಎರಡು ದಿನಗಳಿಂದ ರಾಜ್ಯದ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಇಂದೂ ಕೂಡ ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಮಳೆಯೊಂದಿಗೆ ವೇಗವಾಗಿ ಗಾಳಿ ಬೀಸುವ ಕಾರಣ ಸಾರ್ವಜನಿಕರು ಮತ್ತು ವಾಹನ ಸವಾರರು ಎಚ್ಚರದಿಂದಿರಲು ಸೂಚಿಸಲಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಸೆಪ್ಟೆಂಬರ್ 16ರಂದು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಕೊಡಗು, ರಾಮನಗರ, ಚಾಮರಾಜನಗರ, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆ ಇದ್ದು, ಹವಾಮಾನ ಇಲಾಖೆಯು ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಮರಗಳ ಕೆಳಗೆ ನಿಲ್ಲದಂತೆ ಹಾಗೂ ವಿದ್ಯುತ್ ಕಂಬಗಳಿಂದ ದೂರ ಇರುವಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.
ಸೆಪ್ಟೆಂಬರ್ 17ರ ಬಳಿಕ ಈ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ನಿರೀಕ್ಷೆಯಿದೆ, ಆದರೂ ಸೆಪ್ಟೆಂಬರ್ 19ರವರೆಗೆ ಸಣ್ಣ ಪ್ರಮಾಣದ ಮಳೆ ಮುಂದುವರಿಯಲಿದೆ.
ಬೆಂಗಳೂರು ಹವಾಮಾನ ವರದಿ: ಸಂಜೆ ಅಥವಾ ರಾತ್ರಿ ಮಳೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳಾಗಿದ್ದು, ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣವಿದ್ದರೆ, ಸಂಜೆ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಇಂದು ನಗರದ ಗರಿಷ್ಠ ತಾಪಮಾನ 31 ರಿಂದ 32 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದ್ದು, ಕನಿಷ್ಠ ತಾಪಮಾನ 21 ರಿಂದ 22 ಡಿಗ್ರಿ ಸೆಲ್ಸಿಯಸ್ ನಷ್ಟಿರುವ ನಿರೀಕ್ಷೆಯಿದೆ.
ನಿನ್ನೆ ಕೂಡ ನಗರದ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಇಂದೂ ಸಹ ಸಂಜೆಯ ಬಳಿಕ ಬಿರುಗಾಳಿ ಮತ್ತು ಸಿಡಿಲಿನ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿಗಳು ತಿಳಿಸಿವೆ.
ಉತ್ತರ ಒಳನಾಡು ಮತ್ತು ಕರಾವಳಿ ಹವಾಮಾನ
ದಕ್ಷಿಣ ಒಳನಾಡಿಗೆ ಹೋಲಿಸಿದರೆ, ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ನೈಋತ್ಯ ಮುಂಗಾರು ಸಾಕಷ್ಟು ದುರ್ಬಲವಾಗಿದೆ. ಈ ಪ್ರದೇಶಗಳಲ್ಲಿ ಬಹುತೇಕ ಒಣಹವೆ ಮುಂದುವರಿಯಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಾತ್ರ ಹಗುರ ಮಳೆಯಾಗುವ ಸಾಧ್ಯತೆಯಿದೆ. ಭಾರಿ ಮಳೆಯ ಯಾವುದೇ ಮುನ್ಸೂಚನೆ ಕರಾವಳಿ ಭಾಗದಲ್ಲಿ ಇಲ್ಲ.
ಹಾಗೆಯೇ, ಉತ್ತರ ಒಳನಾಡಿನ ಬೀದರ್, ರಾಯಚೂರು, ವಿಜಯಪುರ, ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟು ಕಡೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ. ಸೆಪ್ಟೆಂಬರ್ 19ರ ಆಸುಪಾಸಿನಲ್ಲಿ ವಿಜಯಪುರ ಭಾಗದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಮುನ್ಸೂಚನೆ: ಮಳೆಯಾಗಲು ಪ್ರಮುಖ ಕಾರಣವೇನು?
ನೈಋತ್ಯ ಮಧ್ಯಪ್ರದೇಶದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ವಾತಾವರಣದಲ್ಲಿ ಈ ಹಠಾತ್ ಬದಲಾವಣೆ ಕಂಡುಬಂದಿದೆ. ಇದರ ಜೊತೆಗೆ ಸಮುದ್ರ ಮಟ್ಟದಿಂದ ಸುಮಾರು 7.6 ಕಿ.ಮೀ ಎತ್ತರದಲ್ಲಿ ಸುಳಿಗಾಳಿ ಉಂಟಾಗಿದ್ದು, ಇದರಿಂದ ಹೊರಹೊಮ್ಮಿದ ಮುಂಗಾರು ಟ್ರಫ್ ಮಹಾರಾಷ್ಟ್ರದ ಮರಾಠಾವಾಡ, ಕರ್ನಾಟಕದ ಉತ್ತರ ಒಳನಾಡು, ಆಂಧ್ರಪ್ರದೇಶದ ರಾಯಲಸೀಮೆ ಮತ್ತು ತಮಿಳುನಾಡಿನ ಮೂಲಕ ಮನ್ನಾರ್ ಕೊಲ್ಲಿಯವರೆಗೆ ವಿಸ್ತರಿಸಿದೆ.
ರೈತರು ಹಾಗೂ ಸಾರ್ವಜನಿಕರು ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ದೈನಂದಿನ ಕಾರ್ಯಗಳನ್ನು ಯೋಜಿಸಿಕೊಳ್ಳುವುದು ಸೂಕ್ತ. ವಿಶೇಷವಾಗಿ ದಕ್ಷಿಣ ಒಳನಾಡಿನ ಕೃಷಿಕರು ಕೊಯ್ಲು ಮಾಡಿದ ಬೆಳೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿಡಲು ಸೂಚಿಸಲಾಗಿದೆ.
ಮುಂದಿನ 48 ಗಂಟೆಗಳ ಕಾಲ ಇದೇ ಹವಾಮಾನ ಪರಿಸ್ಥಿತಿ ಮುಂದುವರಿಯಲಿದ್ದು, ಜನರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ತುಂಬ ಮುಖ್ಯ.


Click it and Unblock the Notifications
