ರಾಜ್ಯಕ್ಕೆ ಹಿಂಗಾರು ಆಗಮನ: 11 ಜಿಲ್ಲೆಗಳಲ್ಲಿ ಭಾರಿ ಮಳೆ, ಕರಾವಳಿಗೆ ಯೆಲ್ಲೋ ಅಲರ್ಟ್
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ನೈಋತ್ಯ ಮುಂಗಾರು ನಿರ್ಗಮಿಸಿ ಹಿಂಗಾರು (ಈಶಾನ್ಯ ಮುಂಗಾರು) ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದ ಹಲವು ಭಾಗಗಳಲ್ಲಿ ಮತ್ತೆ ಮಳೆಯ ವಾತಾವರಣ ಸೃಷ್ಟಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮಾಹಿತಿಯ ಪ್ರಕಾರ, ಇಂದಿನಿಂದ (ಅಕ್ಟೋಬರ್ 13) ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶ ಸೇರಿದಂತೆ ಒಟ್ಟು 11 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಕರಾವಳಿಗೆ 'ಯೆಲ್ಲೋ ಅಲರ್ಟ್'
ಪ್ರಮುಖವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ ಹೆಚ್ಚಿರುವ ಸಾಧ್ಯತೆ ಇರುವುದರಿಂದ, ಹವಾಮಾನ ಇಲಾಖೆಯು ಈ ಮೂರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.
ಕಳೆದೆರಡು ದಿನಗಳಿಂದ ರಾಜ್ಯದ ಕೆಲವೆಡೆ, ವಿಶೇಷವಾಗಿ ಉತ್ತರ ಕರ್ನಾಟಕದ ವಿಜಯನಗರದಂತಹ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದು ಬಿಸಿಲಿನ ತಾಪಮಾನ ತೀವ್ರವಾಗಿತ್ತು. ಮಳೆಗಾಲದಲ್ಲೇ ಬೇಸಿಗೆಯ ಬಿಸಿಲಿನ ಅನುಭವ ಪಡೆಯುತ್ತಿದ್ದ ಜನತೆಗೆ, ಮುಂಬರುವ ಈ ಮಳೆ ತುಸು ನೆಮ್ಮದಿ ನೀಡುವ ಸಾಧ್ಯತೆಯಿದೆ.
ಆದರೆ, ಕರಾವಳಿ ಭಾಗದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ವಹಿಸುವುದು ಒಳಿತು.
ಬೆಂಗಳೂರಿನಲ್ಲಿ ಸಾಧಾರಣ ಮಳೆ
ರಾಜ್ಯ ರಾಜಧಾನಿ ಬೆಂಗಳೂರಿನ ಹವಾಮಾನದಲ್ಲಿಯೂ ಗಣನೀಯ ಬದಲಾವಣೆ ಕಂಡುಬರಲಿದೆ. ಬೆಂಗಳೂರು ನಗರದಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ.
ಉತ್ತರ ಒಳನಾಡಿನಲ್ಲಿ ಹೇಗಿರಲಿದೆ ಹವಾಮಾನ?
ಇನ್ನುಳಿದಂತೆ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಸದ್ಯ ಒಣಹವೆ ಮುಂದುವರಿಯುವ ಸಾಧ್ಯತೆ ಇದ್ದು, ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಬಹುದು.
ಆದರೆ, ಅಕ್ಟೋಬರ್ 15ರ ನಂತರ ಉತ್ತರ ಒಳನಾಡಿನ ಭಾಗಗಳಿಗೂ ಹಿಂಗಾರು ಮಾರುತಗಳ ಪ್ರಭಾವ ತಟ್ಟಲಿದ್ದು, ಅಲ್ಲೂ ಗುಡುಗು ಮಿಂಚು ಸಹಿತ ವರ್ಷಧಾರೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜ್ಯದ ವಿವಿಧ ನಗರಗಳ ಇಂದಿನ ತಾಪಮಾನದ (ಗರಿಷ್ಠ-ಕನಿಷ್ಠ ಡಿಗ್ರಿ ಸೆಲ್ಸಿಯಸ್) ವಿವರ ಈ ಕೆಳಗಿನಂತಿದೆ:
ಮಂಗಳೂರಿನಲ್ಲಿ 34-25 ಡಿ.ಸೆ
ಮೈಸೂರಿನಲ್ಲಿ 33-22 ಡಿ.ಸೆ
ಶಿವಮೊಗ್ಗದಲ್ಲಿ 33-20 ಡಿ.ಸೆ
ಬೆಳಗಾವಿಯಲ್ಲಿ 32-19 ಡಿ.ಸೆ
ಮಂಡ್ಯದಲ್ಲಿ 33-22 ಡಿ.ಸೆ
ಮಡಿಕೇರಿಯಲ್ಲಿ 30-19 ಡಿ.ಸೆ
ಹುಬ್ಬಳ್ಳಿಯಲ್ಲಿ 33-21 ಡಿ.ಸೆ
ರಾಯಚೂರು, ವಿಜಯಪುರ ಹಾಗೂ ಕಾರವಾರದಲ್ಲಿ 34 ಡಿಗ್ರಿ ಸೆಲ್ಸಿಯಸ್ ಆಸುಪಾಸಿನ ಗರಿಷ್ಠ ಉಷ್ಣಾಂಶ ಇರಲಿದೆ.
ರಾಜ್ಯಕ್ಕೆ ಹಿಂಗಾರು ಪ್ರವೇಶ: ಕೃಷಿ ಚಟುವಟಿಕೆಗಳಿಗೆ ವರದಾನ
ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯವಾಗಿ ರಾಜ್ಯದಿಂದ ನೈಋತ್ಯ ಮುಂಗಾರು ಸಂಪೂರ್ಣವಾಗಿ ನಿರ್ಗಮಿಸಿ, ಹಿಂಗಾರು ಮಾರುತಗಳು ಪ್ರವೇಶಿಸುತ್ತವೆ. ಪ್ರಸಕ್ತ ವರ್ಷ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗದಿದ್ದರೂ, ಇತ್ತೀಚೆಗೆ ವಿರಾಮ ನೀಡಿದ್ದ ಮಳೆ ಈಗ ಹಿಂಗಾರಿನ ಆಗಮನದೊಂದಿಗೆ ಮತ್ತೆ ಚುರುಕಾಗುತ್ತಿದೆ.
ಅಕ್ಟೋಬರ್ 15 ಮತ್ತು 16ರ ಸುಮಾರಿಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮಳೆಯ ಪ್ರಮಾಣ ಹೆಚ್ಚಾಗಲಿದ್ದು, ಗುಡುಗು ಮತ್ತು ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.
ಹಿಂಗಾರು ಮಳೆಯು ದಕ್ಷಿಣ ಭಾರತದ ಕೃಷಿಗೆ, ವಿಶೇಷವಾಗಿ ರಾಜ್ಯದ ಒಳನಾಡಿನ ಹಿಂಗಾರು ಬೆಳೆಗಳಿಗೆ ಬಹಳ ಮುಖ್ಯವಾಗಿದೆ. ಕೆರೆ-ಕಟ್ಟೆಗಳು ತುಂಬಲು ಮತ್ತು ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಈ ಮಳೆ ಆಶಾದಾಯಕವಾಗಿದೆ.


Click it and Unblock the Notifications
