Karnataka Weather: ಕರಾವಳಿಯಲ್ಲಿ ಮುಂದುವರಿದ ವರುಣನ ಆರ್ಭಟ, ಬೆಂಗಳೂರಿನಲ್ಲಿ ತಂಪಾದ ವಾತಾವರಣ
ಕರ್ನಾಟಕದಲ್ಲಿ ನೈರುತ್ಯ ಮುಂಗಾರು ಮಳೆಯ ಅಬ್ಬರ ಮುಂದುವರಿದಿದ್ದು, ಆಗಸ್ಟ್ 1 ರಂದು ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನ ಈಗಾಗಲೇ ಭಾರತೀಯ ಹವಾಮಾನ ಇಲಾಖೆ ನೀಡಿದೆ. ಪಶ್ಚಿಮ ಕರಾವಳಿ ಭಾಗದಲ್ಲಿ ಸಕ್ರಿಯವಾಗಿರುವ ಹವಾಮಾನ ವೈಪರೀತ್ಯ ಹಾಗೂ ಅರಬ್ಬಿ ಸಮುದ್ರದ ಮೇಲಿನ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ
ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು ಅಂದರೆ ಆಗಸ್ಟ್ 1ರಂದು ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಘಟ್ಟದ ಕೆಳಗಿನ ಹಾಗೂ ನದಿ ತೀರದ ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಸೂಚಿಸಲಾಗಿದೆ.

ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಹವಾಮಾನ
ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ದಿನವಿಡೀ ಸಾಮಾನ್ಯವಾಗಿ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಸಾಧಾರಣದಿಂದ ಹಗುರ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು ಸುಮಾರು 27°C ಹಾಗೂ ಕನಿಷ್ಠ ತಾಪಮಾನವು 22°C ಆಸುಪಾಸಿನಲ್ಲಿರಲಿದ್ದು, ತಂಪಾದ ವಾತಾವರಣ ಇರಲಿದೆ.
ಇನ್ನೂ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದ ಮಲೆನಾಡು ಭಾಗಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಮಳೆ
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡದ ಗಡಿಭಾಗಗಳಲ್ಲಿ ಮೋಡಕವಿದ ವಾತಾವರಣವಿದ್ದು, ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಆದರೆ ಕೆಲವು ಭಾಗಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಕೆಲವೊಮ್ಮೆ ಇದು 70 ಕಿ.ಮೀ. ವರೆಗೂ ತಲುಪಬಹುದು ಎಂದು ಹವಾಮಾನ ಇಲಾಖೆ ಮಾಹಿತಿಯಿದೆ.
ರೈತರಿಗೆ ಕೃಷಿ ಸಲಹೆಗಳು
ಮುಂಗಾರು ಮಳೆ ಸಕ್ರಿಯವಾಗಿರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರಿಗೆ ಹವಾಮಾನ ಇಲಾಖೆ ಪ್ರಮುಖ ಸಲಹೆಗಳನ್ನು ನೀಡಿದೆ. ಮಳೆ ಹಾಗೂ ಬಲವಾದ ಗಾಳಿಯ ಸಾಧ್ಯತೆ ಇರುವುದರಿಂದ ಬಾಳೆ, ಕಬ್ಬು, ಮತ್ತು ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಬೆಂಬಲ ನೀಡುವಂತೆ ಹಾಗೂ ಹೆಚ್ಚುವರಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಮುಂಬರುವ ದಿನಗಳಲ್ಲಿಯೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಕೃಷಿ ರಾಸಾಯನಿಕ ಸಿಂಪಡಣೆ ಕಾರ್ಯಗಳನ್ನ ತಾತ್ಕಾಲಿಕವಾಗಿ ಮುಂದೂಡುವುದು ಉತ್ತಮ.
ಒಟ್ಟಿನಲ್ಲಿ, ಆಗಸ್ಟ್ ತಿಂಗಳ ಆರಂಭವು ರಾಜ್ಯದಲ್ಲಿ ಉತ್ತಮ ಮಳೆಯೊಂದಿಗೆ ಪ್ರಾರಂಭವಾಗಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರು ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಗಳನ್ನ ಗಮನಿಸಿ ಪ್ರಯಾಣ ಮಾಡುವುದು ಒಳ್ಳೇದು.


Click it and Unblock the Notifications
