Karnataka Weather: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏ.25ರವರೆಗೆ ಮಳೆ, ತಾಪಮಾನ ಮುನ್ಸೂಚನೆ ಹೀಗಿದೆ
ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದರ ಮಧ್ಯೆ ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಗಂಟೆಗೆ 30-40 ಕಿಲೋ ಮೀಟರ್ ವೇಗದ ಗಾಳಿ ಮತ್ತು ಗುಡುಗು ಸಹಿತ ಜೋರು ಮಳೆ ಆಗಿದೆ. ಗಾಳಿಯ ಅಬ್ಬರಕ್ಕೆ ರಸ್ತೆ ಬದಿ ವ್ಯಾಪಾರಸ್ಥರು ಪರದಾಡಿದ್ದಾರೆ. ಇದೀಗ ಮುಂದಿನ ಒಂದು ವಾರವು ವಿವಿಧ ಜಿಲ್ಲೆಗಳಲ್ಲಿ ಮಳೆ, ಬಿಸಿಲಿನ ಶಾಖ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ. ಯಾವೆಲ್ಲ ಜಿಲ್ಲೆಗಳಿಗೆ ಮಳೆ, ತಾಪಮಾನ ಏರಿಕೆ ಎಂಬ ಮಾಹಿತಿ ಇಲ್ಲಿದೆ.
ರಾಜ್ಯದ ಎಲ್ಲ ಭಾಗಗಳಲ್ಲಿ ಗರಿಷ್ಠ ತಾಪಮಾನ ಪ್ರಮಾಣವು ಹೆಚ್ಚುತ್ತಿದೆ. ಮತ್ತೊಂದೆಡೆ ಸೆಖೆಯ ಮಧ್ಯೆ ಅಲ್ಲಲ್ಲಿ ದಿಢೀರ್ ಮಬ್ಬು ಕವಿದು ಆಗಾಗ ಮಳೆ ಆಗುತ್ತಿದೆ. ಕಳೆದ ಎರಡು ಮೂರು ದಿನಗಳಲ್ಲಿ ಹಾವೇರಿ, ಗದಗ, ಮಂಡ್ಯ, ಮೈಸೂರು, ಶಿವಮೊಗ್ಗ ಸೇರಿ ಕೆಲವೆಡೆ ಜೋರು ಮಳೆ ಆಗಿದೆ. ಕರಾವಳಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಬೆಂಗಳೂರು ಸೇರಿದಂತೆ ಅನೇಕ ಕಡೆಗಳಲ್ಲಿ ಉಷ್ಣ ಅಲೆ ಕಂಡು ಬರುತ್ತಿದೆ. ಬೆಳಗ್ಗೆ 9 ಗಂಟೆಯಿಂದಲೇ ತೀವ್ರ ಶಾಖದ ಅನುಭವವಾಗುತ್ತಿದೆ.

ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಎಚ್ಚರಿಕೆ
ಏಪ್ರಿಲ್ 21ರಿಂದ 25ರವರೆಗೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಈ ಅವಧಿಯಲ್ಲಿ ಕರಾವಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗುಡುಗು ಸಹಿತ ಹಗುರ ಮಳೆಯಾಗಲಿದೆ. ಉಳಿದಂತೆ ಬಿರು ಬಿಸಿಲು ಕಂಡು ಬರಲಿದ್ದು, ಉಷ್ಣ ಅಲೆ ಎಚ್ಚರಿಕೆ ನೀಡಲಾಗಿದೆ ಎಂದು ಐಎಂಡಿ ತಿಳಿಸಿದೆ.
ಮುಂದಿನ ಐದು ದಿನ ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ಗಂಟೆಗೆ 40 ಕಿಲೋ ಮೀಟರ್‌ವರೆಗೂ ಗಾಳಿ ಮತ್ತು ಗುಡುಗು ಸಹಿತ ವ್ಯಾಪಕ ಮಳೆ ಆಗಲಿದೆ. ಉಳಿದಂತೆ ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬೀದರ್ ಇನ್ನಿತರ ಜಿಲ್ಲೆಗಳಲ್ಲಿ ಒಂದೆರಡು ದಿನ ಹಗುರ ಮಳೆ ಸಂಭವವಿದೆ.
ರಾಜ್ಯದ ಗರಿಷ್ಠ ತಾಪಮಾನ 42 ° C ದಾಖಲಾಗಿದ್ದೆಲ್ಲಿ?
ರಾಜ್ಯಾದ್ಯಂತ ಮಳೆ ನಡುವೆ ಒಣಹವೆಯ ವಾತಾವರಣವೇ ಮೇಲುಗೈ ಸಾಧಿಸಲಿದೆ. ಕೊಪ್ಪಳದಲ್ಲಿ ಗರಿಷ್ಠ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉಳಿದಂತೆ ರಾಯಚೂರುಲ್ಲಿ 40 ಡಿಗ್ರಿ ಸೆಲ್ಸಿಯಸ್, ಬಳ್ಳಾರಿ 39 ಡಿಗ್ರಿ ಸೆಲ್ಸಿಯಸ್, ಕಲಬುರಗಿ 39 ಡಿಗ್ರಿ ಸೆಲ್ಸಿಯಸ್, ಬೀದರ್ 39 ಡಿಗ್ರಿ ಸೆಲ್ಸಿಯಸ್, ವಿಜಯಪುರ 39 ಡಿಗ್ರಿ ಸೆಲ್ಸಿಯಸ್, ಗದಗ 39 ಡಿಗ್ರಿ ಸೆಲ್ಸಿಯಸ್, ಗಂಗಾವತಿ 38 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇನ್ನು ಬೆಳಗಾವಿ ಏರ್‍ಪೋರ್ಟ್ 36 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಏರ್‍ಪೋರ್ಟ್ 36 ಡಿಗ್ರಿ ಸೆಲ್ಸಿಯಸ್, ಬೆಂಗಳೂರು, ಹಾಸನ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ 35 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಉಳಿದ ಇನ್ನಿತರ ಜಿಲ್ಲೆಗಳಲ್ಲಿ ಸಹ ವ್ಯಾಪಕ ಬಿಸಿಲಿನ ಕಾವು ಏರತೊಡಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಿದೆ. ಇನ್ನು ಕೆಲವು ದಿನಗಳ ಕಾಲ ರಾಜ್ಯದಲ್ಲಿ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು ನಗರದ ಮುನ್ಸೂಚನೆ
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳುಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗುವುದಿಲ್ಲ. ಶುಭ್ರ ನೀಲಿ ಆಕಾಶ ಹಾಗೂ ಇದೇ ರೀತಿ ಒಣಹವೆ ಮುಂದುವರಿಯಲಿದೆ. ನಗರ ಹಾಗೂ ನೆರೆ ಹೊರೆಯ ಪ್ರದೇಶಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 36 ಡಿಗ್ರಿ ಸೆಲ್ಸಿಯಸ್ ಮತ್ತು 24 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ.












Click it and Unblock the Notifications