Karnataka Rains : ಅವಧಿಗೂ ಮುನ್ನ 'ಪೂರ್ವ ಮುಂಗಾರು', ಮಾ. 16ರವರೆಗೆ ಗಾಳಿ ಸಹಿತ ಜೋರು ಮಳೆ: IMD ಮುನ್ಸೂಚನೆ
ಕರ್ನಾಟಕ ರಾಜ್ಯದಲ್ಲಿ ಸುಮಾರು 30 ವರ್ಷಗಳ ನಂತರ ಫೆಬ್ರವರಿ ತಿಂಗಳಲ್ಲಿ ಗರಿಷ್ಠ ತಾಪಮಾನ, ಬಿಸಿಲ ಧಗೆ ದಾಖಲಾಗಿದೆ. ಈ ಕಾರಣದಿಂದ 2023ರ ಪ್ರಸಕ್ತ ವರ್ಷ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಆಗಮಿಸಲಿದೆ.
ಬೆಂಗಳೂರು, ಮಾರ್ಚ್ 13: ಕರ್ನಾಟಕ ರಾಜ್ಯದಲ್ಲಿ ಸುಮಾರು 30 ವರ್ಷಗಳ ನಂತರ ಫೆಬ್ರವರಿ ತಿಂಗಳಲ್ಲಿ ಗರಿಷ್ಠ ತಾಪಮಾನ, ಬಿಸಿಲ ಧಗೆ ದಾಖಲಾಗಿದೆ. ಈ ಕಾರಣದಿಂದ 2023ರ ಪ್ರಸಕ್ತ ವರ್ಷ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಆಗಮಿಸಲಿದೆ.
ಬಿಸಿಲಿನಿಂದ ತತ್ತರಿಸುತ್ತಿರುವ ಉತ್ತರ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಈ ವರ್ಷ ಅವಧಿಗೂ ಮೊದಲೇ ಪೂರ್ವ ಮುಂಗಾರು ಮಳೆಯು ಸುರಿದ ತಂಪೆರೆಯುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಸದ್ಯ ಸೃಷ್ಟಿಯಾಗಿರುವ ಗರಿಷ್ಠ ಹವಾಮಾನದ ವಾತಾವರಣ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದೇ ತಿಂಗಳ ಮೊದಲ ವಾರವೇ ದೇಶದ ರಾಜಧಾನಿ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಮಾರ್ಚ್ 6 ರಿಂದ ಎರಡು ದಿನ ಅಕಾಲಿಕ ಮಳೆ ದಾಖಲಾಗಿದೆ. ಅದು ಬೆಳೆ ಹಾನಿಗೂ ಕಾರಣವಾಗಿದೆ. 30 ವರ್ಷಗಳ ಹಿಂದೆ ಅಂದರೆ 1901ರ ನಂತರ ಈ ವರ್ಷ ಕಳೆದ ಫೆಬ್ರುವರಿಯಲ್ಲಿ ಅತ್ಯಂತ ಬಿಸಿಲು ದಾಖಲಾಗಿದೆ. ಈ ರೀತಿ ಹವಾಮಾನ ವಾತಾವರಣದಿಂದ ಮುಂಗಾರು ಪೂರ್ವ ಮಳೆಗೆ ಅವಧಿಗೂ ಮುನ್ನವೇ ಬರುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಮಾರ್ಚ್ 16 ರವರೆಗೆ ಗಾಳಿ ಸಹಿತ ಮಳೆ ಸಾಧ್ಯತೆ
ದೇಶದ ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ಇದೇ ಮಾರ್ಚ್ 15ರವರೆಗೂ ಹಲವೆಡೆ ಹಗುರ ಮಳೆಯಾಗಲಿದೆ. ಮಾರ್ಚ್ 16ರಿಂದ 22ರ ತನಕ ದೇಶದ ದಕ್ಷಿಣ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಪ್ರತಿ ವರ್ಷ ಸಾಮಾನ್ಯವಾಗಿ ಪೂರ್ವ ಮುಂಗಾರು ಮಳೆ ಸುರಿಸುವ ಮಾರುತಗಳು ಮಾರ್ಚ್ ತಿಂಗಳಲ್ಲಿ ಮಧ್ಯದಲ್ಲಿ ರಚನೆಯಾಗುತ್ತವೆ. ಆದರೆ ಈ ವರ್ಷ ಬೇಗ ಸೃಷ್ಟಿಯಾಗಿವೆ. ಹೆಚ್ಚಿರುವ ಉಷ್ಣಾಂಶವು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ.

ಬೇಸಿಗೆ ಆರಂಭದಲ್ಲೇ ಅತ್ಯಧಿಕ ಬಿಸಿಲಿನ ಧಗೆ ಹೆಚ್ಚಾಗಿದೆ. ಇದು ವಾತಾವರಣದ ಮೇಲೆ ಪರಿಣಾಮ ಬೀರಲಿದೆ. ಪೂರ್ವ ಮುಂಗಾರು ಮಳೆ ಅವಧಿಗೂ ಮುನ್ನ ಬರುವುದರಿಂದ ಬಿಸಿಲಿನ ಪ್ರದೇಶಗಳೆಲ್ಲವು ಮುಂದೆ ತಂಪಾಗಲಿವೆ. ಆದರೆ, ಪೂರ್ವ ಮುಂಗಾರು ಬಳಿಕ ಬರಬೇಕಾದ ಮುಂಗಾರು ಮಳೆಯ ಪ್ರವೇಶ (ಜೂನ್ ಆರಂಭ) ಈ ವರ್ಷ ತುಸು ವಿಳಂಬವಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.












Click it and Unblock the Notifications