Karnataka Weather: ಗರಿಷ್ಠ ತಾಪಮಾನದಲ್ಲಿ ಏರಿಕೆ, ರಾಜ್ಯಾದ್ಯಂತ ಒಣಹವೆ ಮುನ್ಸೂಚನೆ
ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ ದಾಖಲಾಗಿದ್ದ ಚಳಿ ನಿಧಾನವಾಗಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ರಾಜಧಾನಿ ಬೆಂಗಳೂರು ಸೇರಿ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತೆ ಚಳಿ ಹೆಚ್ಚಾಗಿದೆ. ಮುಂದಿನ ಮೂರು ದಿನ ಇದ ರೀತಿ ವಾತಾವರಣ ಕಂಡ ಬರಲಿದೆ. ಕೆಲವು ಜಿಲ್ಲೆಗಳಲ್ಲಿ ಮಂಜು ಕವಿಯಲಿದೆ. ಉಳಿದಂತೆ ರಾಜ್ಯಾದ್ಯಂತ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (ಐಎಂಡಿ) ನೀಡಿದೆ.
ಸಮುದ್ರ ಮೇಲ್ಮೈನಲ್ಲಿರುವ ಮೇಲ್ಮೈ ಚಂಡಮಾರುತ ಪ್ರಸರಣದ ತೀವ್ರತೆಯಿಂದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಮಗಳೂರು, ಹಾವೇರಿ, ದಾವಣಗೆರೆ, ಧಾರವಾಡ ಸೇರಿದಂತೆ ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ನೆನ್ನೆ ದಿಢೀರ್ ಚಳಿ ಹೆಚ್ಚಾಯಿತು. ತೇವಾಂಶ ಗಾಳಿ ಬೀಸುತ್ತಿದ್ದಂತೆ ಶನಿವಾರ ರಾತ್ರಿ ಚಳಿ ಅನುಭವವಾಯಿತು. ಒಂದೆರಡು ದಿನ ಇದೇ ರೀತಿಯ ತಂಪು ವಾತಾವರಣ ಸೃಷ್ಟಿಯಾಗಿ ನಂತರ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ.

ಹವಾಮಾನ ಇಲಾಖೆ ಪ್ರಕಾರ, ಕರಾವಳಿ ಭಾಗದಲ್ಲಿ ಈಗಾಗಲೇ ಒಣಹವೆ ಆರಂಭವಾಗಿದ್ದು, ಒಳನಾಡು ಭಾಗ ಬಹುತೇಖ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ವಾರದಿಂದ ಒಣಹವೆ (ಶುಷ್ಕ ವಾತಾವರಣ) ನಿರ್ಮಾಣವಾಗಲಿದೆ. ಈ ಮೂಲಕ ಕೇರಳ, ಪುದಚೇರಿ, ಯಾನಂ, ರಾಯಲಸೀಮಾ ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹಿಂಗಾರು ಮಳೆಗಾಲ ಸಂಪೂರ್ಣವಾಗಿ ಕೊನೆಗೊಂಡಿದೆ ಎಂದು ಐಎಂಡಿ ಅಧಿಕೃತವಾಗಿ ತಿಳಿಸಿದೆ.
ಇನ್ನೂ ಲಕ್ಷದ್ವೀಪ ಹಾಗೂ ಕೇರಳ ಕರಾವಳಿಗೆ ಹೊಂದಿಕೊಂಡಿರು ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ವಾಯು ಚಂಡಮಾರುತ ಪರಿಚಲನೆ ಉಂಟಾಗಿತ್ತು. ಅದು ಶನಿವಾರ ಕೊಮೋರಿಯನ್ ಪ್ರದೇಶದ ಮೇಲೆ ಸರಾಸರಿ ಸಮುದ್ರಮಟ್ಟದಿಂದ 0.9 ಕಿಲೋ ಮೀಟರ್ ಹಾಗೂ 1.5 ಕಿಮೀ ಮಧ್ಯ ಇದೆ. ಇದು ಕೊಂಚ ತೀವ್ರಕೊಂಡ ಹಿನ್ನೆಲೆಯಲ್ಲಿ ಚಳಿ ದಕ್ಷಿಣ ಒಳನಾಡಿನಲ್ಲಿ ಏರಿಕೆ ಆಗಿದೆ. ಮುಂದಿನ 48 ಗಂಟೆ ಬಳಿಕ ಚಳಿ ಕಡಿಮೆ ಆಗಲಿದ್ದು, ಗರಿಷ್ಠ ತಾಪಮಾನ ಏರಿಕೆ ಆಗಬಹುದು ಎಂದು ಹವಾಮಾನ ತಜ್ಞರು ಊಹಿಸಿದ್ದಾರೆ.
ಶುರುವಾಯ್ತು ರಾಜ್ಯದಲ್ಲಿ ಒಣ ಹವೆ
ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಚಳಿ ಮಾಯವಾಗಿ ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗುತ್ತಿದೆ. ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಪ್ರವೃತ್ತಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇನ್ನೂ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಹಾವೇರಿ, ವಿಜಯನಗರ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು, ಚಿತ್ರದುರ್ಗ, ರಾಮನಗರ ಸೇರಿದಂತೆ ರಾಜ್ಯಾದ್ಯಂತ ಗರಿಷ್ಠ ತಾಪಮಾನ ನಿಧಾನಗತಿಯಲ್ಲಿ ಏರಿಕೆ ಆಗುತ್ತಿದೆ. ಮುಂದಿನ ವಾರದಿಂದ ಒಣಹವೆ ವಾತಾವರಣ ಆರಂಭವಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಬೆಂಗಳೂರಲ್ಲಿ ಚಳಿ ಏರಿಕೆ
ಬೆಂಗಳೂರಿನಲ್ಲಿ ನೆನ್ನೆ ಶನಿವಾರ (ಜನವರಿ 17) ಅತ್ಯಧಿಕ ಚಳಿ ಕಂಡು ಬಂತು. ಕನಿಷ್ಠ ತಾಪಮಾನದಲ್ಲಿ ಮತ್ತೆ ಸ್ವಲ್ಪ ಇಳಿಕೆ ಆಯಿತು. ಹೀಗಾಗಿ ಚಳಿಯ ಅನುಭವವಾಗಿದೆ. ಬೆಂಗಳೂರು ನಗರದಲ್ಲಿ 15.6 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ (ಕೆಐಎಎಲ್) 14.6 ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ಎಚ್‌ಎಎಲ್ ನಲ್ಲಿ 15 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ಗರಿಷ್ಠ ತಾಪಮಾನ-ಒಣಹವೆಯ ಜಿಲ್ಲೆಗಳು
ಕಾರವಾರದಲ್ಲಿ ಗರಿಷ್ಠ ತಾಪಮಾನ 35.6 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 34.6, ಡಿಗ್ರಿ ಸೆಲ್ಸಿಯಸ್, ಮಂಗಳೂರು ವಿಮಾನ ನಿಲ್ದಾಣ 33.3 ಡಿಗ್ರಿ ಸೆಲ್ಸಿಯಸ್, ಕಲಬುರಗಿ 34.4 ಡಿಗ್ರಿ ಸೆಲ್ಸಿಯಸ್, ವಿಜಯಪುರ 30 ಡಿಗ್ರಿ ಸೆಲ್ಸಿಯಸ್, ರಾಯಚೂರು, ಹಾವೇರಿ, ಗದಗ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ತಲಾ 30 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 31 ಡಿಗ್ರಿ ಸೆಲ್ಸಿಯಸ್, ಬೀದರ್ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಈ ಮೂಲಕ ಒಣಹವೆ ಪ್ರಮಾಣ ಏರಿಕೆ ಆಗುತ್ತಿರುವುದು ಖಚಿತವಾಗಿದೆ.












Click it and Unblock the Notifications