Karnataka Weather: ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ಮುನ್ಸೂಚನೆ
Karnataka Rains: ರಾಜ್ಯದಲ್ಲಿ ಇದೀಗ ಮುಂಗಾರು ಚುರುಕು ಪಡೆದಿದ್ದರೂ ಸಹ ಕೆಲವೆಡೆ ಈಗಲೂ ಬರೀ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದೆ ಬಿಟ್ಟರೆ, ಮಳೆಯ ಪ್ರಮಾಣ ಕಡಿಮೆಯೇ ಇದೆ. ಆದರೆ ಇನ್ನೂ ಹಲವೆಡೆ ಮಾತ್ರ ಧಾರಾಕಾರ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಮೂರು ದಿನಗಳ ರಾಜ್ಯಾದ್ಯಂತ ವರುಣ ಆರ್ಭಟಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ (ಜುಲೈ 11) ಬೆಳಗ್ಗೆ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಈಗಾಗಲೇ ಕಳೆದ ಕೆಲವು ದಿನಗಳಿಂದ ನಗರದ ಹಲವೆಡೆ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಹಾಗೆಯೇ ಮುಂದಿನ ಮೂರು ದಿನ ಬೆಂಗಳೂರು ಸೇರಿದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ಹವಾಮಾನ ಇಲಾಖೆ ರವಾನೆ ಮಾಡಿದೆ.

ಮುಂದಿನ ಮೂರು ದಿನ ಭಾರಿ ಮಳೆ ಎಚ್ಚರಿಕೆ
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ. ಅದರಲ್ಲೂ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿರಲಿದೆ ಎಂದು ಎಚ್ಚರಿಕೆ ನೀಡಿದೆ. ತಾಪಮಾನದ ವಿಚಾರಕ್ಕೆ ಬಂದರೆ ಮುಖ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಜೋರು
ಮಲೆನಾಡು, ಕರಾವಳಿ ಜಿಲ್ಲೆಗಳ ಭಾಗಗಳಲ್ಲಿ ಮಾತ್ರ ಭಾರೀ ಮಳೆಯಾಗಲಿದೆ. ಇನ್ನೂ ಬೆಂಗಳೂರು ಸೇರಿದಂತೆ ಉಳಿದ ಭಾಗಗಳಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಖುಷಿಯ ವಿಚಾರ ಏನಂದ್ರೆ ಈಗಾಗಲೇ ವರುಣನ ಆರ್ಭಟದಿಂದಾಗಿ ರಾಜ್ಯದ ಹಲವೆಡೆ ಪ್ರಮುಖ ಜಲಾಶಯಗಳ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ನೀರಿನ ಪ್ರಮಣ ಹೆಚ್ಚಾಗುತ್ತಿದೆ. ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಮೂಡಿದೆ.
ಕೆಲವು ಜಿಲ್ಲೆಗಳಲ್ಲಿ ರಣಮಳೆ ಮುಂದುವರಿದ ಪರಿಣಾಮ ಗುಡ್ಡು ಕುಸಿತದಂತಹ ಘಟನೆಗಳು ಸಂಭವಿಸಿದ್ದು, ವಾಹನ ಸವಾರರು ಪರದಾಡಿದ್ದಾರೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿತೇ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲಿವೆ. ಮಳೆ ಬಂತಂದ್ರೆ ಸಾಕು ಈ ಭಾಗಗಳ ಹಲವೆಡೆ ಪ್ರಮುಖ ಹೆದ್ದಾರಿಗಳು, ರಸ್ತೆಗಳ ಮೇಲೆ ಗುಡ್ಡಗಳ ಮಣ್ಣು ಕುಸಿದು ಬಂದ್ ಆಗುತ್ತಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ.
ಇದು ಹೊಸದೇನಲ್ಲ, ಅವೈಜ್ಞಾನಿಕ ಕಾಮಗಾರಿಯಿಂದ ಮುಂಗಾರು ಆರಂಭ ಆಗುತ್ತಿದ್ದಂತೆ ಈ ರೀತಿಯ ಸಮಸ್ಯೆಗಳು ಸೃಷ್ಟಿಯಾಗುವುದು ಸಾಮಾನ್ಯವಾಗಿಬಿಟ್ಟಿದೆ. ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಮತ್ಯಾರೋ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications