Karnataka Weather: ಇಂದು ಐದು ಜಿಲ್ಲೆಗಳಲ್ಲಿ ಭಾರೀ ಚಳಿ, ಶೀತಗಾಳಿ: ತಾಪಮಾನ ತೀವ್ರ ಕುಸಿತ
ಬೆಂಗಳೂರು: ರಾಜ್ಯದಲ್ಲಿ ಶೀತ ಅಲೆಯ ಆರ್ಭಟ ಜೋರಾಗಿದೆ. ಮೋಡ ಕವಿದ ವಾತಾವರಣ ಸಹಿತ ತೇವ ಭರಿತ ಗಾಳಿ ಬೀಸುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ತಾಪಮಾನ ಕಡಿಮೆ ಆಗಿದ್ದು, ಮೈಕೊರೆವ ಚಳಿ ಹೆಚ್ಚಾಗಿದೆ. ಮುಂದಿನ ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆ. ಇಂದು ಸೋಮವಾರ ಒಳನಾಡಿನ ಐದು ಜಿಲ್ಲೆಗಳಲ್ಲಿ ಶೀತ ಅಲೆಯ ಎಚ್ಚರಿಕೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆಯ (IMD) ಕರ್ನಾಟಕ ಕೇಂದ್ರದ ಪ್ರಕಾರ, ಉತ್ತರ ಒಳನಾಡಿನಲ್ಲಿ ಚಳಿ ಮುಂದುವರಿಯಲಿದೆ. ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದರೆ ಕೊಂಚ ಚಳಿ ತಗ್ಗಿದೆ ಎನ್ನಬಹುದು. ಆದರೂ ಸಮಾನಧಾನಕರ ಅಲ್ಲದ ಸ್ಥಿತಿ ಇಲ್ಲಿದೆ. ಇಂದು ಸೋಮವಾರ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನ ಮತ್ತಷ್ಟು ಕುಸಿಯುವ ನಿರೀಕ್ಷೆ ಇದೆ. ಈ ಭಾಗಗಳಲ್ಲಿ ಹೆಚ್ಚಿನ ಚಳಿ ಆವರಿಸುವ ಕಾರಣಕ್ಕೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿ ಶೀತ ಗಾಳಿಯ ಮುನ್ನೆಚ್ಚರಿಕೆ ಕೊಡಲಾಗಿದೆ.

ಉಳಿದಂತೆ ಹಾವೇರಿ, ಧಾರವಾಡ, ದಾವಣಗೆರೆ, ಕೊಪ್ಪಳ, ಗದಗ, ಬೆಳಗಾವಿ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗಗಳಲ್ಲೂ ಹಗಲು ಒಣಹವೆ ಕಂಡು ಬರುತ್ತಿದೆ. ಗರಿಷ್ಠ ತಾಪಮಾನದಲ್ಲಿ ನಿಧಾನವಾಗಿ ಏರಿಕೆ ಆಗುತ್ತಿದೆ. ಆದರೆ ಬೆಳಗ್ಗೆ ಮತ್ತು ರಾತ್ರಿ ಅಧಿಕ ಚಳಿ ಅನುಭವವಾಗುತ್ತಿದೆ. ಇಲ್ಲಿ ಕಡಿಮೆ ಕನಿಷ್ಠ ತಾಪಮಾನ ದಾಖಲಾತಿ ಮುಂದುವರಿದಿದೆ.
ಬೆಂಗಳೂರಲ್ಲಿ ಮುಂದುವರಿದ ಚಳಿ
ಬೆಂಗಳೂರಿನಲ್ಲಿ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿದೆ. ಮುನ್ಸೂಚನೆ ಪ್ರಕಾರ, ಡಿಸೆಂಬರ್ 27ರವರೆಗೆ ಈ ಚಳಿ ಮುಂದುವರಿಯಲಿದೆ. ಆದರೆ ಕನಿಷ್ಠ ತಾಪಮಾನ ಇಳಿಕೆ ಆಗದೇ ಏರಿಕೆ ಆಗುವ ನಿರೀಕ್ಷೆ ಇದೆ. ಡಿಸೆಂಬರ್ 27ರ ಹೊತ್ತಿಗೆ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಾಗಲಿದೆ ಎಂಬ ಮುನ್ಸೂಚನೆ ಇದೆ. ನಿತ್ಯ 13-16ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಮತ್ತು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.
ನೆನ್ನೆ ಭಾನುವಾರ ನಗರದಲ್ಲಿ ಕನಿಷ್ಠ 14.4 ಹಾಗೂ ಗರಿಷ್ಠ 26.2 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ನಲ್ಲಿ ಕನಿಷ್ಠ 13 ಮತ್ತು ಗರಿಷ್ಠ 26.5 ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಕನಿಷ್ಠ 13 ಹಾಗೂ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಕರಾವಳಿ ಸೇರಿ ಈ ಜಿಲ್ಲೆಗಳಿಗೆ ಒಣಹವೆ ಮುನ್ಸೂಚನೆ
ಚಳಿ, ಶೀತ ಗಾಳಿ ಜೊತೆಗೆ ಕರಾವಳಿ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಎಚ್ಚರಿಕೆ ನೀಡಲಾಗಿದೆ. ಈ ಭಾಗಗಳಲ್ಲಿ ಹಗಲು ಗರಿಷ್ಠ ತಾಪಮಾನ ದಾಖಲಾಗಿ ಒಣಹವೆ ವಾತಾವರಣ ನಿಮಾರ್ಣವಾಗಿದೆ. ವಾಡಿಕೆ ತಾಪಮಾನಕ್ಕಿಂತ 0.5 ಡಿಗ್ರಿ ಸೆಲ್ಸಿಯಸ್‌ಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಗರಿಷ್ಠ ತಾಪಮಾನದಲ್ಲಿ ಏರಿಕೆ ಆಗಿದೆ. ಕಾರವಾರದಲ್ಲಿ ನೆನ್ನೆ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್, ಹೊನ್ನಾವರ 32.5 ಡಿಗ್ರಿ ಸೆಲ್ಸಿಯಸ್, ಮಂಗಳೂರು ವಿಮಾನ ನಿಲ್ದಾಣ 31.2 ಡಿಗ್ರಿ ಸೆಲ್ಸಿಯಸ್, ಕಲಬುರಗಿ 30.6 ಡಿಗ್ರಿ ಸೆಲ್ಸಿಯಸ್, ಮೈಸೂರು (ಸುತ್ತೂರು) 32.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜ್ಯದ ಒಂದೆಡೆ ತೀವ್ರ ಚಳಿ, ಮತ್ತೆ ಕೆಲ ಭಾಗಗಳಲ್ಲಿ ಹೆಚ್ಚು ಬಿಸಿಲಿನ ವಾತಾವರಣ ಇದೆ.












Click it and Unblock the Notifications