Karnataka Weather: ರಾಜ್ಯದಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ, ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಅತೀಯಾದ ತಾಪಮಾನದಿಂದಾಗಿ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಭಾರತೀಯ ಹವಮಾನ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಮಂಗಳವಾರ, ಏಪ್ರಿಲ್ 28 ರಿಂದ ಮೇ 1 ರವರೆಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ, ಜೊತೆಗೆ ಗುಡುಗು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಈ ಮಳೆಯು ತೀವ್ರವಾದ ಬಿಸಿಲಿನ ಝಳದಿಂದ, ದಿನನಿತ್ಯದ ಸೆಕೆಯಿಂದ ಕಂಗೆಟ್ಟಿದ್ದ ಜನರಿಗೆ ಕೊಂಚ ನೆಮ್ಮದಿ ನೀಡಬಹುದು.
ಬೆಂಗಳೂರಿನ ಹವಾಮಾನ ವರದಿ
ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳ ಆರಂಭದಿಂದಲೇ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಭಾನುವಾರದಂದು (ಏಪ್ರಿಲ್ 26) ನಗರದ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು, ಕನಿಷ್ಠ ತಾಪಮಾನ 23.1 ಡಿಗ್ರಿ ಸೆಲ್ಸಿಯಸ್ ಇತ್ತು. ಆದರೆ ಇಂದಿನಿಂದ ಹವಾಮಾನದಲ್ಲಿ ಕೊಂಚ ಬದಲಾವಣೆಯಾಗುವ ಲಕ್ಷಣಗಳು ಕಾಣಿಸುತ್ತಿವೆ.

ಹವಾಮಾನ ಇಲಾಖೆಯ ಪ್ರಕಾರ, ಮಧ್ಯಾಹ್ನ ಅಥವಾ ಸಂಜೆಯ ವೇಳೆಗೆ ನಗರದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಜೊತೆಗೆ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಎಚ್ಚರಿಕೆಯನ್ನೂ ನೀಡಲಾಗಿದೆ. ಮಳೆಯಾದರೂ ಹಗಲಿನ ತಾಪಮಾನದಲ್ಲಿ ದಿಢೀರ್ ಭಾರೀ ಇಳಿಕೆಯಾಗುವ ನಿರೀಕ್ಷೆಯಿಲ್ಲ. ಗರಿಷ್ಠ ತಾಪಮಾನ 35 ರಿಂದ 36 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದ್ದು, ಮೋಡ ಕವಿದ ವಾತಾವರಣದಿಂದಾಗಿ ಬಿಸಿಲಿನ ತೀಕ್ಷ್ಣತೆ ಗಣನೀಯವಾಗಿ ಕಡಿಮೆಯಾಗಲಿದೆ.
ಕರಾವಳಿ ಕರ್ನಾಟಕ ಮತ್ತು ಮಲೆನಾಡು
ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವಾರು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಆದರೂ ಕೆಲವೆಡೆ ಉಷ್ಣಾಂಶ ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣ ಮುಂದುವರೆಯಲಿದೆ. ಇನ್ನು ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.
ಉತ್ತರ ಒಳನಾಡು ಹವಾಮಾನ ಪರಿಸ್ಥಿತಿ
ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಭಾಗಗಳಲ್ಲಿ ಬೇಸಿಗೆಯ ಪ್ರಖರತೆ ಅಧಿಕವಾಗಿದೆ. ಈ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಾತ್ರ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ. ಈ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಕಡಿಮೆ ಇದ್ದು, ಬಿಸಿಲಿನ ವಾತಾವರಣವೇ ಹೆಚ್ಚಾಗಿ ಮುಂದುವರೆಯಲಿದೆ.
ಒಟ್ಟಾರೆಯಾಗಿ, ಏಪ್ರಿಲ್ ಕೊನೆಯ ವಾರದಲ್ಲಿ ಸುರಿಯಲಿರುವ ಈ ಮುಂಗಾರು ಪೂರ್ವ ಮಳೆಯು ರೈತರಿಗೂ, ಜನಸಾಮಾನ್ಯರಿಗೂ ಅತ್ಯಂತ ಅಗತ್ಯವಾಗಿತ್ತು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ, ಅಂತರ್ಜಲ ಮಟ್ಟ ಹೆಚ್ಚಲು ಹಾಗೂ ಜಲಾಶಯಗಳಿಗೆ ಸ್ವಲ್ಪಮಟ್ಟಿನ ನೀರು ಹರಿದುಬರಲು ಈ ಮಳೆಯು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.














Click it and Unblock the Notifications