CET Exam 2026: ಏಪ್ರಿಲ್ 23, 24ಕ್ಕೆ ಸಿಇಟಿ ಪರೀಕ್ಷೆ, 3.30 ಲಕ್ಷ ವಿದ್ಯಾರ್ಥಿಗಳು ಸಜ್ಜು: KEA
ಬೆಂಗಳೂರು: ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಹಾಗೂ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (UGCET 2026) ಇದೇ ಏಪ್ರಿಲ್ 23 ಮತ್ತು 24ರಂದು ನಡೆಯಲಿವೆ. ಒಟ್ಟು 3.30 ಲಕ್ಷ ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.
ಸಿಇಟಿ 2026 ಪರೀಕ್ಷೆಗೆ ರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿವೆ. ಸುಮಾರು 3.30 ಲಕ್ಷ ಮಂದಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ್ದಾರೆ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಇದಲ್ಲದೆ, ವಸ್ತ್ರ ಸಂಹಿತೆ ಹಾಗೂ ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಕ್ರಮಗಳ ಬಗ್ಗೆ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಕೆಇಎ ವಿಕಸನ (KEAVikasana) ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿ ಒಂದಷ್ಟು ಮಾಹಿತಿ ನೀಡಿದ್ದಾರೆ. ಪೋಷಕರು ಮತ್ತು ಅಭ್ಯರ್ಥಿಗಳು ತಪ್ಪದೇ ಇದನ್ನು ಒಮ್ಮೆ ನೋಡಿ, ಆ ಪ್ರಕಾರ ನಡೆದುಕೊಳ್ಳಲು ಕೋರಲಾಗಿದೆ.
2026ರ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಎರಡನೇ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ 2ಕ್ಕೆ ಹಾಜರಾಗಬಹುದು. ಏಕೆಂದರೆ ಸಿಇಟಿ ಪರೀಕ್ಷೆ ಅಂಕಗಳನ್ನು ಪಿಯುಸಿ ಪರೀಕ್ಷೆ 2 ಆಧರಿಸಿ ಪರಿಗಣಿಸಲಾಗುತ್ತದೆ. ಆದ್ದರಿಂದ ಅನುರ್ತಿರ್ಣರಾದವರು ಈ ಬಗ್ಗೆ ಭಯಪಡಬೇಕಿಲ್ಲ ಎಂದಿದ್ದಾರೆ.
ಡ್ರೆಸ್ ಕೋಡ್ ಏನಿದೆ? ನಿಯಮ ಪಾಲನೆ ಕಡ್ಡಾಯ
ಕೈ ಕಾಲುಗಳು, ಇಡೀ ದೇಹ ಪೂರ್ಣವಾಗಿ ಮುಚ್ಚಿರುವಂತೆ ಬಟ್ಟೆ ಧರಿಸುವುದನ್ನು ನಿಷೇಧಿಸಲಾಗಿದೆ. ಸಾಮಾನ್ಯ ಉಡುಪು ಧರಿಸಿ ಪರೀಕ್ಷೆ ಬರೆಯಬಹುದು. ಶೂಗಳನ್ನು ಧರಿಸುವುದು, ಮೊಬೈಲ್, ಎಲ್‌ಇಡಿ ಇನ್ನಿತರ ವಾಚ್ ಧರಿಸುವುದು ಸೇರಿ ಕೆಲವು ನಿಯಮ ಜಾರಿಯಲ್ಲಿರುತ್ತವೆ. ಅದನ್ನು ಪಾಲಿಸುವಂತೆ ಪ್ರಾಧಿಕಾರ ಕೋರಿದೆ. ಯಾರೆಲ್ಲ ಅರ್ಜಿ ಸಲ್ಲಿಸಿದ್ಧೀರಿ ನೀವು ಮಾತ್ರವೇ ಪರೀಕ್ಷೆಗೆ ಬರೆಯಬೇಕು. ಪರೀಕ್ಷಾ ಕೇಂದ್ರದಲ್ಲಿ ನಕಲು ಆಗದಂತೆ, ಪಾರದರ್ಶಕವಾಗಿ ನಡೆಸಲು ವಿವಿಧ ಕ್ರಮ ಕೈಗೊಳ್ಳಲಾಗಿದೆ.
ಪಿಯುಸಿ ಅಧಿಕ ಅಂಕಗಳ ಪರಿಗಣನೆ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆ- 1 ಮತ್ತು ಪರೀಕ್ಷೆ-2 ರಲ್ಲಿ ಪಡೆದ ಅಂಕಗಳ ಪೈಕಿ ಯಾವುದು ಅತ್ಯಧಿಕವೊ ಆ ಅಂಕಗಳನ್ನೇ ಸಿಇಟಿ ಫಲಿತಾಂಶಕ್ಕೆ ಪರಿಗಣಿಸಲಾಗುವುದು. ಈ ವಿಷಯದಲ್ಲಿ ಗೊಂದಲ ಬೇಡ. ಕೆಲ ಅಭ್ಯರ್ಥಿಗಳು ಪರೀಕ್ಷೆ-1 ರಲ್ಲಿ ಪಡೆದ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು ಎರಡನೇ ಪರೀಕ್ಷೆ ಕೂಡ ತೆಗೆದುಕೊಳ್ಳುತ್ತಿದ್ದಾರೆ. ಅಂತಹವರಿಗೆ ಕಳೆದ ವರ್ಷದಂತೆ ಎರಡೂ ಪರೀಕ್ಷೆಗಳಲ್ಲಿ ಪಡೆದ ಅತ್ಯಧಿಕ ಅಂಕಗಳನ್ನು ಸಿಇಟಿ ಶ್ರೇಣಿಗೆ ಪರಿಗಣಿಸಲಾಗುತ್ತದೆ ಎಂದು ಈ ಹಿಂದೆ ಪ್ರಾಧಿಕಾರ ತಿಳಿಸಿತ್ತು.
ಇಷ್ಟಕ್ಕೂ ದ್ವಿತೀಯ ಪಿಯುಸಿಯ ಎರಡೂ ಪರೀಕ್ಷೆ ಗಳ ಫಲಿತಾಂಶ ಬಂದ ನಂತರವೇ ಸಿಇಟಿ ಫಲಿತಾಂಶ ಪ್ರಕಟಿಸುವುದು. ಹೀಗಾಗಿ ಎರಡನೇ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವುದಿಲ್ಲ ಎನ್ನುವುದು ಸುಳ್ಳು. ಇಂತಹ ವದಂತಿಗಳಿಗೆ ಕಿವಿ ಕೊಡಬೇಡಿ. ಕರ್ನಾಟಕ ರಾಜ್ಯ ಪಠ್ಯ ಕ್ರಮದ ಪಿಯುಸಿ ಅಭ್ಯರ್ಥಿಗಳಿಗೆ ಮಾತ್ರ ಈ ಎರಡು ಪರೀಕ್ಷೆಗಳ ನಿಯಮ ಅನ್ವಯವಾಗುತ್ತದೆ. ಉಳಿದಂತೆ ಕೇಂದ್ರ ಹಾಗೂ ಇತರ ರಾಜ್ಯಗಳ ಬೋರ್ಡ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications