Karnataka: ಹಬ್ಬದ ನೆಪದಲ್ಲಿ ಸುಲಿಗೆ ಮಾಡುವಂತಿಲ್ಲ; ಖಾಸಗಿ ಬಸ್‌ಗಳ ದುಬಾರಿ ಟಿಕೆಟ್ ದರಕ್ಕೆ ಸಾರಿಗೆ ಇಲಾಖೆ ಬ್ರೇಕ್
ಬೆಂಗಳೂರು: ವಿಕೆಂಡ್, ಸಾಲು ಸಾಲು ರಜೆಗಳು ಅಥವಾ ಹಬ್ಬದ ದಿನಗಳು ಬಂದ್ರೆ ಸಾಕು, ಊರಿಗೆ ಹೋಗುವ ಜನಸಾಮಾನ್ಯರೊಂದಿಗೆ ಖಾಸಗಿ ಬಸ್‌ಗಳ ಮಾಲೀಕರ ಆಟ ಶುರುವಾಗುತ್ತದೆ ನೋಡಿ. ಇತ್ತೀಚೆಗೆ ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳ ಸುಲಿಗೆ ಎಲ್ಲರಿಗೂ ಸಾಮಾನ್ಯ ಎನ್ನುವಂತಾಗಿದೆ. ಆದರೆ, ಈ ಬಾರಿ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡುವ ಟ್ರಾವೆಲ್ಸ್ ಏಜೆನ್ಸಿಗಳಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದೆ.
ಹೌದು, ಹಬ್ಬದ ನೆಪದಲ್ಲಿ ನಡೆಯುವ ಹಗಲು ದರೋಡೆಗೆ ಬ್ರೇಕ್ ಹಾಕಲು ಇಂದಿನಿಂದ (ಸೆಪ್ಟೆಂಬರ್ 11) ಸೆಪ್ಟೆಂಬರ್ 15ರವರೆಗೆ ರಾಜ್ಯಾದ್ಯಂತ ಸಾರಿಗೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ಹಾಗೂ ಕಟ್ಟುನಿಟ್ಟಿನ ತಪಾಸಣೆ ನಡೆಸಲಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ನೆಲೆಸಿರುವ ಲಕ್ಷಾಂತರ ಜನರು ಗೌರಿ ಗಣೇಶ ಹಬ್ಬದ ರಜೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳತ್ತ ಮುಖ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಖಾಸಗಿ ಬಸ್ ಟ್ರಾವೆಲ್ಸ್ ಸಂಸ್ಥೆಗಳು, ಸಾಮಾನ್ಯ ದಿನಗಳಿಗಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚಿನ ದರವನ್ನು ನಿಗದಿ ಮಾಡಲು ಈಗಾಲೇ ಶುರು ಮಾಡಿವೆ.
ಇದು ಪ್ರತಿ ಬಾರಿಯೂ ನಡೆಯುವ ಪ್ರಕ್ರಿಯೆಯಾಗಿದ್ದರೂ ಕೂಡ, ಸಾರಿಗೆ ಇಲಾಖೆ ಕೇವಲ ನಾಮಕಾವಸ್ಥೆಗೆ ಎಂಬಂತೆ ಕೆಲವು ಬಸ್‌ಗಳನ್ನ ತಪಾಸಣೆ ಮಾಡಿ ಸುಮ್ಮನಾಗುತ್ತದೆ ಎಂಬ ಸಾರ್ವಜನಿಕರ ಆಕ್ರೋಶ ಹಿಂದಿನಿಂದಲೂ ಇದೆ. ಆದ್ರೆ ಈ ಬಾರಿ ಸಾರ್ವಜನಿಕರ ಈ ದೂರನ್ನ ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ಖಾಸಗಿ ಬಸ್‌ಗಳ ದುಬಾರಿ ಟಿಕೆಟ್ ದರ ವಸೂಲಾತಿಗೆ ಶಾಶ್ವತ ಕಡಿವಾಣ ಹಾಕಲು ಐದು ದಿನಗಳ ವಿಶೇಷ ಕಾರ್ಯಾಚರಣೆಗೆ ಇಳಿದಿದೆ.
ಏಕೆಂದರೆ, ಸಾಮಾನ್ಯ ದಿನಗಳಲ್ಲಿ ಕೇವಲ 600 ರೂಪಾಯಿ ಕೊಟ್ಟು ಊರಿಗೆ ಹೋಗುತ್ತಿದ್ದವರು ಈ ಬಾರಿ ಗಣೇಶ ಹಬ್ಬಕ್ಕೆ ಹೋಗಲು ಬರೋಬ್ಬರಿ 1,800 ರೂಪಾಯಿ ಕೊಟ್ಟು ಖಾಸಗಿ ಬಸ್ಸಿನಲ್ಲಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಲ್ಲದೆ ಮತ್ತೇನು? ಹಾಗಾಗಿ ಈ ಬಾರಿ ಸಾರಿಗೆ ಇಲಾಖೆ ಈ ಖಾಸಗಿ ಟ್ರಾವೆಲ್ ಏಜೆನ್ಸಿಗಳ ಹಗಲು ದರೋಡೆ ತಪ್ಪಿಲು ವಿಶೇಷ ಕಾರ್ಯಚರಣೆ ಸಜ್ಜಾಗಿದೆ.
ಸಾರಿಗೆ ಇಲಾಖೆ ತಪಾಸಣೆ: ಹೆದ್ದಾರಿ, ಟೋಲ್‌ಗಳಲ್ಲಿ ಹದ್ದಿನ ಕಣ್ಣು
ಈ ಖಾಸಗಿ ಬಸ್ಸ್‌ನವರ ಸುಲಿಗೆಯನ್ನ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಂಟಿ ಸಾರಿಗೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಖುದ್ದು ಸಾರಿಗೆ ಆಯುಕ್ತರೇ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಸೆಪ್ಟೆಂಬರ್ 11 ರಿಂದ 15 ರವರೆಗೆ ನಿರಂತರವಾಗಿ ಹಗಲು-ರಾತ್ರಿ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದಾರೆ.
ಪ್ರಮುಖ ಹೆದ್ದಾರಿಗಳು, ಟೋಲ್ ಗೇಟ್‌ಗಳು ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸಾರಿಗೆ ಇಲಾಖೆ ತಪಾಸಣೆ ಚುರುಕುಗೊಳ್ಳಲಿದೆ. ಪ್ರಯಾಣಿಕರನ್ನು ನೇರವಾಗಿ ಸಂಪರ್ಕಿಸಿ ಅವರಿಂದ ಟಿಕೆಟ್‌ಗಾಗಿ ಎಷ್ಟು ಹಣ ಪಡೆಯಲಾಗಿದೆ ಎಂಬುದನ್ನ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಲಿದ್ದಾರೆ.
ಖಾಸಗಿ ಬಸ್ ದರ ಏರಿಕೆ ವಿರುದ್ಧ ಕಠಿಣ ಕ್ರಮ
ನಿಯಮ ಮೀರಿ ಖಾಸಗಿ ಬಸ್ ದರ ಏರಿಕೆ ಮಾಡಿದರೆ ಅಂತಹ ವಾಹನಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ. ತಪಾಸಣೆ ನಡೆಸುವ ಅಧಿಕಾರಿಗಳು ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಹಿಂದಿನ ದಿನದ ಕಾರ್ಯಾಚರಣೆಯ ಸಮಗ್ರ ವರದಿಯನ್ನ ಮೇಲಧಿಕಾರಿಗಳಿಗೆ ಸಲ್ಲಿಸುವುದು ಕಡ್ಡಾಯವಾಗಿದೆ.
ಕಾರ್ಯಾಚರಣೆ ವೇಳೆ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ, ಅಂತಹ ವಾಹನಗಳಿಗೆ ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ವಾಹನಗಳನ್ನ ಜಪ್ತಿ ಮಾಡುವಂತೆಯೂ ಖಡಕ್ ಎಚ್ಚರಿಕೆ ನೀಡಲಾಗಿದೆ.
ಸೆಪ್ಟೆಂಬರ್ 16 ರಂದು ವರದಿ ಸಲ್ಲಿಕೆ
ಹಬ್ಬದ ಸೀಸನ್ ಮುಗಿದ ಬಳಿಕ, ಅಂದರೆ ಸೆಪ್ಟೆಂಬರ್ 16 ರಂದು ಈ ಐದು ದಿನಗಳ ಕಾರ್ಯಾಚರಣೆಯ ಒಟ್ಟು ವರದಿಯನ್ನ ಸಿದ್ಧಪಡಿಸಲಾಗುತ್ತದೆ. ಪ್ರಯಾಣಿಕರಿಂದ ವಿಪರೀತ ದರ ವಸೂಲಿ ಮಾಡಿದ ಟ್ರಾವೆಲ್ಸ್ ಏಜೆನ್ಸಿಗಳ ವಿರುದ್ಧ ಕೈಗೊಂಡಿರುವ ಶಿಸ್ತು ಕ್ರಮಗಳು ಹಾಗೂ ದಂಡದ ವಿವರವನ್ನ ಅಧಿಕಾರಿಗಳು ಮೇಲಧಿಕಾರಿಗಳಿಗೆ ಸಲ್ಲಿಸಲಿದ್ದಾರೆ.
ಪ್ರಯಾಣಿಕರು ಕೂಡ ಟಿಕೆಟ್ ಕಾಯ್ದಿರಿಸುವಾಗ ನಿಗದಿತ ದರಕ್ಕಿಂತ ಹೆಚ್ಚು ಹಣ ನೀಡಿದ್ದರೆ, ಆ ಬಗ್ಗೆ ನೇರವಾಗಿ ಸಾರಿಗೆ ಅಧಿಕಾರಿಗಳಿಗೆ ದಾಖಲೆ ಸಮೇತ ದೂರು ನೀಡಲು ಅವಕಾಶವಿದೆ. ಒಟ್ಟಾರೆಯಾಗಿ, ಈ ಬಾರಿಯ ಹಬ್ಬದ ಪ್ರಯಾಣಿಕರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಳ್ಳಲು ಸಾರಿಗೆ ಇಲಾಖೆ ಮುಂದಾಗಿದೆ.


Click it and Unblock the Notifications
