ಕರ್ನಾಟಕಕ್ಕೆ ಕಾದಿದೆ ಮತ್ತೊಂದು ಗಡಿ ತಂಟೆ!
ಬೆಂಗಳೂರು, ಡಿ.7- ಕರ್ನಾಟಕಕ್ಕೂ ಗಡಿ ವ್ಯಾಜ್ಯಕ್ಕೂ ಅವಿನಾಭಾವ ಸಂಬಂಧ. ಇನ್ನು ಮುಂದೆ ಈ ವ್ಯಾಜ್ಯ-ಪ್ರೀತಿಗೆ ಮತ್ತೊಂದು ಕರ್ನಾಟಕಕ್ಕೆ ಮತ್ತೊಂದು ಗಡಿ ತಗಲುಹಾಕಿಕೊಳ್ಳಲಿದೆ. ಹಾಗಾದರೆ ಮತ್ತೂ ಒಂದು ಗಡಿ ತಂಟೆ ತಗಲಿಕೊಳ್ಳುತ್ತದಾ? ಕಾಲವೇ ಹೇಳಬೇಕು!
ಹೌದು ಮುಂದಿನ ವಾರ ಆಂಧ್ರ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ವಿಧೇಯಕ ಅಂಗೀಕಾರವಾಗುವುದು ಬಹುತೇಕ ಖಚಿವಾಗಿದೆ. ಹಾಗಾದಲ್ಲಿ ಕರ್ನಾಟಕವು ತೆಲಂಗಾಣ ಜತೆಗೂ ಗಡಿ ಹಂಚಿಕೊಳ್ಳಬೇಕಾಗುತ್ತದೆ.
ಹಾಗಾದರೆ ಕರ್ನಾಟಕ ಎಷ್ಟು ರಾಜ್ಯಗಳ ಜತೆ ಗಡಿ ಹಂಚಿಕೊಳ್ಳಬೇಕಾಗುತ್ತದೆ ಅಂದರೆ ಬರೋಬ್ಬರಿ 6 ರಾಜ್ಯಗಳು ಕಾಣಿಸಿಕೊಳ್ಳುತ್ತವೆ. ಪ್ರಸ್ತುತ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳ ಜತೆ ಕರ್ನಾಟಕಕ್ಕೆ ಗಡಿ ಸಂಬಂಧವಿದೆ.

ಇದರೊಂದಿಗೆ ಕರ್ನಾಟಕ, ಮಹಾರಾಷ್ಟ್ರ (ದಾದ್ರಾ- ನಗರ ಹವೇಲಿ) ಮತ್ತು ಉತ್ತರಪ್ರದೇಶ ರಾಜ್ಯಗಳು ತಲಾ 6 ರಾಜ್ಯಗಳ ಜತೆ ಗಡಿ ಹಂಚಿಕೊಂಡಾಗುತ್ತದೆ. ಭಾರತದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಗಡಿ ಹೊಂದಿರುವ ರಾಜ್ಯವೆಂದರೆ ಅಸ್ಸಾಂ (7 ರಾಜ್ಯಗಳೊಂದಿಗೆ ಗಡಿ ಸಂಬಂಧ ಹೊಂದಿದೆ).
ಇದೀಗ ಕೇಂದ್ರವು ರಾಯಲ ತೆಲಂಗಾಣ ಕೈಬಿಟ್ಟಿರುವುದರಿಂದ ತೆಲಂಗಾಣ ಮಾತ್ರ ಹೊಸ ರಾಜ್ಯವಾಗಿ ಉದಯವಾಗಲಿದೆ. ಅಂದರೆ ಆಂಧ್ರ ಪ್ರದೇಶದ ರಾಯಲಸೀಮಾ ಜಿಲ್ಲೆಗಳಾದ ಅನಂತಪುರ, ಚಿತ್ತೂರು ಮತ್ತು ಕರ್ನೂಲು ಜತೆಗೂ ಇದೀಗ ತೆಲಂಗಾಣಕ್ಕೆ ಸೇರಲಿರುವ ಹೈದರಾಬಾದ್- ಕರ್ನಾಟಕ ಜಿಲ್ಲೆಗಳಾದ ರಂಗಾರೆಡ್ಡಿ, ಮೇಡಕ್, ಮೆಹಬೂಬನಗರ ಮತ್ತು ನಿಜಾಮಾಬಾದ್ ಜಿಲ್ಲೆಗಳ ಜತೆ ಕರ್ನಾಟಕವು ಗಡಿ ಹಂಚಿಕೊಳ್ಳಲಿದೆ.
ತೆಲಂಗಾಣ ಉದಯದಿಂದ ಮತ್ತೊಂದು ಗಡಿ ಸಂಬಂಧವೇರ್ಪಡುವುದರಿಂದ ಹೊಸ ಸಮಸ್ಯೆಗಳು ಸೃಷ್ಟಿಯಾಗುವುದು ಖಚಿತವೆನ್ನುತ್ತಾರೆ ತಜ್ಞರು. ತುಂಗಭದ್ರಾ ಮತ್ತು ಕೃಷ್ಣಾ ನದಿಗಳಿಂದಾಗಿ ಗಡಿ ತಂಟೆ ತಲೆದೋರುವ ಲಕ್ಷಣಗಳು ಹೆಚ್ಚಾಗಿವೆ. ತುಂಗಭದ್ರಾ ಕರ್ನಾಟಕದಿಂದ ಆಂಧ್ರದೊಳಕ್ಕೂ, ಕೃಷ್ಣಾ ನದಿ ನೀರು ಕರ್ನಾಟಕದಿಂದ ತೆಲಂಗಾಣದೊಳಕ್ಕೂ ಹರಿಯುತ್ತಿದೆ.
ಇದರ ಹೊರತಾಗಿ ರಸ್ತೆ ಸಂಚಾರದಲ್ಲಿ ಟೋಲ್ ವಿಷಯ ಮತ್ತು ರೈಲ್ವೆ ಸಂಚಾರದಲ್ಲಿ ಆಂಧ್ರ, ತೆಲಂಗಾಣವನ್ನು ಸುತ್ತಿಕೊಂಡು ಬರುವುದು ಕರ್ನಾಟಕಕ್ಕೆ ಖಂಡಿತ ಸಮಸ್ಯೆ ತಂದೊಡ್ಡುತ್ತವೆ. ಈ ಹಿನ್ನೆಲೆಯಲ್ಲಿ ಹೊಸ ಒಪ್ಪಂದಗಳನ್ನು ಪ್ರತ್ಯೇಕಗೊಳಿಸಿಕೊಳ್ಳಬೇಕಾಗುತ್ತದೆ ಎನ್ನುತ್ತದೆ 'ಬೆಂಗಳೂರು ಮಿರರ್' ಪತ್ರಿಕಾ ವರದಿ.












Click it and Unblock the Notifications