ಪಠ್ಯಪುಸ್ತಕ ವಿವಾದ: ಕುವೆಂಪು ಪ್ರತಿಷ್ಠಾನಕ್ಕೆ ಹಂಪನಾ ರಾಜೀನಾಮೆ
ಬೆಂಗಳೂರು, ಮೇ30: ಕರ್ನಾಟಕ ರಾಜ್ಯ ಪಠ್ಯಪುಸ್ತಕ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಪಠ್ಯಪುಸ್ತ ಮರು ಪರಿಷ್ಕರಣೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಸಾಹಿತಿ ವರ್ಗದಲ್ಲಿ ಸಾಕಷ್ಟು ಅಸಮಧಾನ ಭುಗಿಲೆದ್ದಿದೆ. ಪಠ್ಯಪುಸ್ತಕ ವಿವಾದದಿಂದ ಬೇಸತ್ತಿರುವ ಹಂಪ ನಾಗರಾಜಯ್ಯ ಕುವೆಂಪು ಪ್ರತಿಷ್ಠಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರವನ್ನು ಬರೆದಿದ್ದಾರೆ.
ಮೇ 24ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಹಂಪನಾ ಅವರು, ಪಠ್ಯಪುಸ್ತಕ ಸಮಿತಿ ಸಿದ್ದಪಡಿಸಿರುವ ಹೊಸ ಪುಸ್ತಕವನ್ನು ತಡೆಹಿಡಿದು ಹಿಂದಿನ ಪಠ್ಯವನ್ನೇ ಮುಂದುವರೆಸುವಂತೆ ಸುತ್ತೋಲೆಯನ್ನು ಸರ್ಕಾರ ತಕ್ಷಣ ಹೊರಡಿಸಬೇಕು ಎಂದು ಆಗ್ರಹಿಸಿದರು. ಆದರೆ, ಸರ್ಕಾರ ಇದಕ್ಕೆ ಸ್ಪಂದಿಸದಿರುವುದರಿಂದ ಅವರು ಕುವೆಂಪು ಪ್ರತಿಷ್ಠಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಂಪನಾ ಬರೆದ ರಾಜೀನಾಮೆ ಪತ್ರದಲ್ಲೇನಿದೆ..?
ತಮ್ಮ ಅಮೂಲ್ಯ ಕೃತಿಗಳಿಂದ ಹೊಸಗನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನೂ ಸಂಪ್ರಾಣಿಸಿ, ಭಾರತೀಯ ಸಾಹಿತ್ಯದಲ್ಲಿ ಕನ್ನಡಕ್ಕೂ ಕರ್ನಾಟಕಕ್ಕೂ ಮಹಾಕವಿ ಕುವೆಂಪುರವರು ಗೌರವ ತಂದರು. ಅವರು ಕನ್ನಡಕ್ಕಾಗಿ ಜ್ಞಾನಪೀಠ ಪ್ರಶಸ್ತಿತಂದ ಮೊದಲಿಗರು. ಇದನ್ನರಿತ ಸರ್ಕಾರ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸ್ಥಾಪಿಸಿತಲ್ಲದೇ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನಿತ್ತು ಗೌರವಿಸಿತು.

ಆದರೆ ಇಂದು ಕುವೆಂಪುರವರನ್ನು ಅವರು ಹುಟ್ಟಿದ ಗೌರವಾನ್ವಿತ ದೊಡ್ಡ ಜನಾಂಗವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ , ನಮ್ಮ ರಾಷ್ಟ್ರಗೀತೆಯಾದ ನಾಡಗೀತೆಯನ್ನು ಲೇವಡಿ ಮಾಡಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳುವ ಬದಲು ಸರ್ಕಾರ ಜವಾಬ್ದಾರಿಯ ಸ್ಥಾನವನ್ನು ನೀಡಿದೆ. ಇದು ಅಪಾಯಕಾರಿಯಾದ ಬೆಳವಣಿಗೆ, ಇದರಿಂದ ಪುಣ್ಯಶ್ಲೋಕರ ಮೇಲೆ ಕೆಟ್ಟ ಮಾತುಗಳ ಮಳೆ ಸುರಿಸಿದರೆ ಅಂತವರಿಗೆ ಸರ್ಕಾರದ ಸಮಿತಿಗಳಲ್ಲಿ ಸದಸ್ಯರಾಗುವ ಸದವಾಕಾಶಗಳಿವೆ ಎಂಬ ತಪ್ಪು ಸಂದೇಶ ರವಾನೆ ಮಾಡಿದಂತಾಗಿದೆ. ವ್ಯಕ್ತಿಗಳ ತೇಜೋವಧೆ ಮಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂಬ ನಂಬಿಕೆ ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಕವಿ ಕುವೆಂಪುರವರನ್ನು ನಮ್ಮ ಪವೀತ್ರ ನಾಡಗೀತೆಯನ್ನೂ ಅಪಮಾನಿಸುತ್ತಿದ್ದರೂ ನೋಡಿಕೊಂಡು ತೆಪ್ಪಗಿರುವುದು ನನಗೆ ಕಷ್ಟವಾಗಿದೆ. ಸರ್ಕಾರ ಸ್ಥಾಪಿಸಿರುವ ಕುವೆಂಪು ಪ್ರತಿಸ್ಟಾನದ ಅಧ್ಯಕ್ಷ ಸ್ಥಾನಕ್ಕೂ ಸದಸ್ಯತ್ವಕ್ಕೂ ನನ್ನ ರಾಜೀನಾಮೆಯನ್ನು ಮಾನ್ ಮುಖ್ಯಮಂತ್ರಿಗಳು ಅಂಗೀಕರಿಸಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ಕೋರಿದ್ದಾರೆ.












Click it and Unblock the Notifications