ದ್ವಿತೀಯ ಪಿಯು ಫಲಿತಾಂಶ : ವಿದ್ಯಾರ್ಥಿಗಳ ಯಶಸ್ಸಿನ ಕಥೆ
ಬೆಂಗಳೂರು, ಮೇ 19 : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟಾರೆ ಶೇ.60.54ರಷ್ಟು ಫಲಿತಾಂಶ ಬಂದಿದೆ. ನಗರ ಭಾಗದ ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಂದು ಸರ್ಕಾರಿ ಕಾಲೇಜು ಸೇರಿದಂತೆ 47 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.
ಕಾಡುಗೋಡಿಯಲ್ಲಿ ಪ್ರಗತಿ ಕಾಲೇಜಿನ ಹಾಸ್ಟೆಲ್‌ನಲ್ಲಿ ಅಟೆಂಡರ್ ಮಹೇಶ್ ಗುಂಡಿಗೆ ಬಲಿಯಾದ ವಿದ್ಯಾರ್ಥಿನಿ ಗೌತಮಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾಳೆ. ಉಡುಪಿಯಲ್ಲಿ ಫೇಲಾಗುವ ಭಯದಿಂದ ವಿದ್ಯಾರ್ಥಿನಿಯೊಬ್ಬಳು ವಿಷ ಸೇವಿಸಿ ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಸೋಮವಾರ ಫಲಿತಾಂಶ ಪ್ರಕಟವಾದಾಗ ಆಕೆ ಉತ್ತೀರ್ಣಗೊಂಡಿದ್ದಾಳೆ. [ಪಿಯು ಟಾಪರ್ ಕುಡ್ಲದ ರಶ್ಮಿತಾ ಜೊತೆ ಚಿಟ್ ಚಾಟ್]
ದ್ವಿತೀಯ ಪಿಯುಸಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳು ತಮ್ಮ ಸಾಧನೆಯ ಸಂತಸವನ್ನು ಹಂಚಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡಿ ಸಾಧನೆ ಮಾಡಬೇಕೆಂದಿರುವ ಎಲ್ಲಾರಿಗೂ ಇನ್ ಇಂಡಿಯಾದ ಕಡೆಯಿಂದ ಆಲ್‌ದಿ ಬೆಸ್ಟ್. [ಫಲಿತಾಂಶ : ಯಾವ ಜಿಲ್ಲೆಗೆ ಯಾವ ಸ್ಥಾನ]

ನಾನು ಓದುವುದು ಕಡಿಮೆ : ವಾಣಿಜ್ಯ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುವ ಬೆಂಗಳೂರು ಜೈನ್ ಕಾಲೇಜಿನ ವಿದ್ಯಾರ್ಥಿನಿ ವೀಣಾ ರೆಡ್ಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. 'ನಾನು ಓದುವುದು ಕಡಿಮೆ. ಆದರೆ, ಚೆನ್ನಾಗಿ ಕೇಳಿಸಿಕೊಳ್ಳುತ್ತೇನೆ. ಆದ್ದರಿಂದ ತರಗತಿಗಳಲ್ಲಿರುವಾಗ ಶ್ರದ್ಧೆಯಿಂದ ಕೇಳುತ್ತಿದ್ದೆ. ನಂತರ ಅದನ್ನು ಒಂದು ಬಾರಿ ಓದಿದರೆ ನೆನಪಿನಲ್ಲಿ ಇರುತ್ತಿತ್ತು' ಎಂದು ಸಾಧನೆಯ ಗುಟ್ಟನ್ನು ತೆರೆದಿಟ್ಟಿದ್ದಾರೆ.
'ಸಿಎ ಓದುತ್ತಿರುವ ಅಕ್ಕ ಎಂತಹ ಕ್ಲಿಷ್ಟ ವಿಷಯಗಳಿದ್ದರೂ ಕ್ಷಣ ಮಾತ್ರದಲ್ಲಿ ಬಗೆಹರಿಸಿಕೊಡುತ್ತಿದ್ದಳು. ಅಕ್ಕನ ನೆರವಿನಿಂದ ನಾನು ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸುವಂತಾಯಿತು ಎಂದು ಹೇಳಿದ್ದಾರೆ. ವೀಣಾ ತಂದೆ ಜಗನ್ನಾಥ ರೆಡ್ಡಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದಾರೆ. ಅಕ್ಕ ಸಹ ಅದೇ ಹಾದಿಯಲ್ಲಿ ಸಾಗುತ್ತಿದ್ದಾಳೆ. ನಾನು ಸಿಎ ಓದಬೇಕು ಎಂಬ ಗುರಿ ಹೊಂದಿದ್ದೇನೆ ಎನ್ನುತ್ತಾರೆ ವೀಣಾ.
ಕೊಪ್ಪಳದ ಬಡ ಹುಡುಗನ ಸಾಧನೆ : ಮನೆಯಲ್ಲಿನ ಬಡತನದಿಂದಾಗಿ ಬಾರ್‌ನಲ್ಲಿ ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ದುಡಿದ ನಾಗರಾಜ ಎಂಬ ವಿದ್ಯಾರ್ಥಿ ಪಿಯುಸಿ ಕಲಾ ವಿಭಾಗದಲ್ಲಿ ಶೇ. 87ರಷ್ಟು ಅಂಕ ಪಡೆದಿದ್ದಾನೆ. ಗಂಗಾವತಿಯ ಸಂಕಲ್ಪ ಪಿಯು ಕಾಲೇಜಿನ ವಿದ್ಯಾರ್ಥಿ ನಾಗರಾಜನಿಗೆ 10ನೇ ತರಗತಿ ನಂತರ ಓದು ಮುಂದುವರಿಸಲು ಬಡತನ ಅಡ್ಡಿಯಾಗಿದ್ದರಿಂದ ಕೆಲಸ ಮಾಡುವುದು ಅನಿವಾರ್ಯವಾಗಿತ್ತು.
ಬಾರ್‌ನಲ್ಲಿ ಕೆಲಸಕ್ಕೆ ಸೇರಿದ ಆತ ಮಧ್ಯಾಹ್ನ 3 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ಕೆಲಸ ಮಾಡುತ್ತಿದ್ದ. ಬೆಳಗ್ಗೆ 4ರಿಂದ 7 ಗಂಟೆಯವರೆಗೂ ಓದುವುದನ್ನು ಬಾರ್‌ನಲ್ಲಿ ಕೆಲಸ ಮಾಡುತ್ತಲೇ ಪಿಯುಸಿ ಓದು ಪೂರ್ಣಗೊಳಿಸಿದ ಈತ 525 ಅಂಕ ಪಡೆದಿದ್ದಾನೆ.
ಚಿಕ್ಕಮಗಳೂರು ಹುಡುಗಿಗೆ ಡಾಕ್ಟರ್ ಆಗುವ ಕನಸು : ಚಿಕ್ಕಮಗಳೂರಿನ ಶಿಲ್ಪಾ ಸಾಯಿ ಏಂಜಲ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿ.ಬಿ.ಶಿಲ್ಪ 582 ಅಂಕಗಳನ್ನು ಪಡೆದು ಜಿಲ್ಲೆಗೆ ವಿಜ್ಞಾನ ವಿಷಯದಲ್ಲಿ ಪ್ರಥಮ ಸ್ಥಾನಗಳಿಸಿದ್ದಾಳೆ. ಬಸವನಹಳ್ಳಿ ನಿವಾಸಿ ಆಟೋ ಚಾಲಕ ಬಸವಾರಾಧ್ಯ ಮತ್ತು ಆರೋಗ್ಯ ಸಹಾಯಕಿ ಶಕುಂತಲಾ ಅವರ ಪುತ್ರಿ ಶಿಲ್ಪ ಸಿಇಟಿ ಪರೀಕ್ಷೆಯನ್ನು ಬರೆದಿದ್ದು, ಡಾಕ್ಟರ್ ಆಗುವ ಕನಸು ಕಂಡಿದ್ದಾಳೆ.
ಐಎಎಸ್ ಅಧಿಕಾರಿಯಾಗುವ ಕನಸು : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಅಂಜು ಪಿಯುಸಿ ಕಲಾ ವಿಭಾಗದಲ್ಲಿ 553 ಅಂಕಗಳನ್ನು ಗಳಿಸಿದ್ದಾಳೆ. ಖಾಸಗಿ ವಾಹನ ಓಡಿಸುವ ರಫಿಕ್ ಅಹ್ಮದ್ ಅವರ ಪುತ್ರಿ ಅಂಜು ಐಎಎಸ್ ಅಧಿಕಾರಿಯಾಗುವ ಕನಸನ್ನು ಹೊತ್ತಿದ್ದಾರೆ. ಕುಷ್ಟಗಿಯ ಆರಾಳಗೌಡರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಂಜು ಕನ್ನಡದಲ್ಲಿ 95, ಇಂಗ್ಲಿಷ್‌ನಲ್ಲಿ 80, ಇತಿಹಾಸದಲ್ಲಿ 93, ಅರ್ಥಶಾಸ್ತ್ರದಲ್ಲಿ 91, ಸಮಾಜಶಾಸ್ತ್ರದಲ್ಲಿ 98, ಶಿಕ್ಷಣ ಶಾಸ್ತ್ರದಲ್ಲಿ 96 ಅಂಕಗಳನ್ನು ಪಡೆದಿದ್ದಾಳೆ.












Click it and Unblock the Notifications