Get Updates
Get notified of breaking news, exclusive insights, and must-see stories!

ಕರ್ನಾಟಕದ ಸಂಚಾರ ಜೀವನಾಡಿ ರಸ್ತೆ ಸಾರಿಗೆ ಸಂಸ್ಥೆಗಳ ಸೇವೆ, 1948ರ ಇತಿಹಾಸದಿಂದ 'ಶಕ್ತಿ' ಯೋಜನೆಯವರೆಗೆ ಸಮಗ್ರ ನೋಟ

ಬೆಂಗಳೂರು: ಕರ್ನಾಟಕದ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ರಾಜ್ಯದ ಲಕ್ಷಾಂತರ ಜನರ ಜೀವನಾಡಿ ಆಗಿವೆ. ನಾಲ್ಕು ದಿಕ್ಕುಗಳಲ್ಲಿ ನಿತ್ಯ ಲಕ್ಷಾಂತರ ಕಿಲೋ ಮೀಟರ್ ಸಂಚರಿಸುವ ಮೂಲಕ ಜನರಿಗೆ ಆಸರೆಯಾಗಿವೆ. ಈ ಸಂಚಾರ ಸೇವೆ, ಜಾರಿಗೆ ತಂದ ಹೊಸ ಹೊಸ ಉಪಕ್ರಮಗಳಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರುನಾಡಿನ ಸಾರಿಗೆ ಸಂಸ್ಥೆಗಳು ಹೆಸರು ಮಾಡಿವೆ. ಆ ಪೈಕಿ ಹೆಚ್ಚಿನ ಕೀರ್ತಿ 17 ಜಿಲ್ಲೆಗಳಿಗೆ ವ್ಯಾಪ್ತಿ ಹೊಂದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (KSRTC) ಸೇರುತ್ತದೆ. ಈ ಸಾರಿಗೆ ಸಂಸ್ಥೆಗಳು ಬೆಳೆದು ಬಂದ ರೀತಿ, ಒಟ್ಟು ಬಸ್‌ಗಳು ಮತ್ತದರ ಮಾರ್ಗಗಳು, ಹೊಸ ಬಸ್‌ಗಳ ಖರೀದಿ, ಸಾರಿಗೆ ಯೋಜನೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಹಿನ್ನೆಲೆ, ಇತಿಹಾಸ

ಕನ್ನಡಿಗರಿಗೆ ಸಮರ್ಪಕ ಸಾರಿಗೆ ಸೇವೆ ಒದಗಿಸುವ ಉದ್ದೇಶದಿಂದ ಆರಂಭದಲ್ಲಿ ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ (ಎಂಜಿಆರ್‌ಟಿಡಿ) ಅಡಿಯಲ್ಲಿ 1948 ರಂದು 120 ವಾಹನಗಳ ಮುಖೇನ ಸೇವೆ ಆರಂಭವಾಯಿತು. ಮೈಸೂರು ಸರ್ಕಾರದ ಒಂದು ಸಾರಿಗೆ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ನಂತರ ಸ್ವಂತಂತ್ರ ಸಂಸ್ಥೆಯಾಗಿ ಪರಿವರ್ತಿಸಲಾಯಿತು. ಅಂದು ಕೂಡ ಪ್ರಮುಖ ಸಾರಿಗೆ ಕೇಂದ್ರ ಬೆಂಗಳೂರೇ ಆಗಿತ್ತು. ಉಳಿದೆಡೆ ಘಟಕಗಳಾಗಿ ಕಾರ್ಯ ನಿರ್ವಹಣೆ, ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಕಾಲಾನಂತರದಲ್ಲಿ ರಾಜ್ಯದಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳು ಉದಯಿಸಿದವು.

Karnataka State Road Transport

ಹೊಸ ರೂಪದಲ್ಲಿ 4 ನಿಗಮಗಳು ಅಸ್ತಿತ್ವಕ್ಕೆ..

ಸಾರಿಗೆ ಸಂಸ್ಥೆಗಳ ಇತಿಹಾಸ ನೋಡುವುದಾದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 1961ರಿಂದ ಉದಯಿಸಿತು. ಈ ಘಟವು 'ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡು ರಚಿತವಾಯಿತು. ಈ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದಾದ್ಯಂತ ಹಾಗೂ ಬೇರೆ ರಾಜ್ಯಗಳಿಗೂ ದಕ್ಷ ಸೇವೆ ಇಂದಿಗೂ ಮುಂದುವರಿಸಿದೆ.

ಆರಂಭದಲ್ಲಿ ಬೆಂಗಳೂರಿನಲ್ಲಿ ಬಸ್ ಸೇವೆ ಒದಗಿಸುತ್ತಿದ್ದ ಬಿಟಿಎಸ್ ಸಂಸ್ಥೆಯು ನಂತರ ಹೊಸ ರೂಪ ಪಡೆದುಕೊಂಡಿತು. 1997ರ ಆಗಸ್ಟ್‌ನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸ್ವತಂತ್ರ ಕಾರ್ಯಾಚರಣೆ ಆರಂಭಿಸಿತು. ಇದೇ ವರ್ಷ 1997ರ ನವೆಂಬರ್‌ನಲ್ಲಿ ಉತ್ತರ ಕರ್ನಾಟಕದ ಆರು ಜಿಲ್ಲೆಗಳಾದ 'ಹಾವೇರಿ, ಗದಗ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಮತ್ತು ಬಾಗಲಕೋಟೆ' ಒಳಗೊಂಡು ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಘಟಕ ಮರುರೂಪದೊಂದಿಗೆ ಸೇವೆ ಪ್ರಾರಂಭಿಸಿತು.

ಮುಂದೆ 2000ರ ಅಕ್ಟೋಬರ್ ತಿಂಗಳಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) ಸ್ವತಂತ್ರ ಕಾರ್ಯಾಚರಣೆ ಆರಂಭಿಸಿತು. ಇದರ ವ್ಯಾಪ್ತಿಯಲ್ಲಿ 'ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಮತ್ತು ವಿಜಯಪುರ' ಬರುತ್ತಿವೆ. ಈ ಬಸ್‌ಗಳು ಆಯಾ ಜಿಲ್ಲೆಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸದೇ ಇಡೀ ರಾಜ್ಯ ಹಾಗೂ ಬೇರೆ ಬೇರೆ ರಾಜ್ಯಗಳ ಮಹಾನಗರಗಳಿಗೆ ಸಂಪರ್ಕ ಕೊಂಡಿಯಾಗಿ ಸೇವೆ ನೀಡುತ್ತಿವೆ.

ಕರ್ನಾಟಕ ಸಾರಿಗೆ ಸಂಸ್ಥೆಗಳ ಸಂಕ್ಷಿಪ್ತ ಮಾಹಿತಿ

ಕೆಎಸ್‌ಆರ್‌ಟಿಸಿ: 17 ವಿಭಾಗಗಳನ್ನು ಹೊಂದಿರುವ ಸಂಸ್ಥೆಯ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಸೇರಿ 16 ಕಾರ್ಯಾಚರಣೆ ವಿಭಾಗ (ಬೆಂಗಳೂರು ಸೆಂಟ್ರಲ್, ಮೈಸೂರು, ಮಂಗಳೂರು, ಹಾಸನ ಇತ್ಯಾದಿ) ಹೊಂದಿದೆ. ಇದರ ವ್ಯಾಪ್ತಿಯಲ್ಲಿ 85 ಡಿಪೋಗಳ ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ 8,790 ಬಸ್‌ಗಳ ಸೇವೆ ನೀಡುತ್ತಿವೆ.

ಎನ್‌ಡಬ್ಲುಕೆಆರ್‌ಟಿಸಿ: ಒಟ್ಟು 09 ಕಾರ್ಯಾಚರಣೆ ವಿಭಾಗ ಹೊಂದಿರುವ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿದೆ. ಒಟ್ಟು 55 ಡಿಪೋಗಳಿಂದ ನಿತ್ಯ 06 ಜಿಲ್ಲೆಗಳು ಸೇರಿದಂತೆ ರಾಜ್ಯ ಹೊರ ರಾಜ್ಯಕ್ಕೆ ಬಸ್ ಕಾರ್ಯಾಚರಣೆ ನಡೆಸುತ್ತಿವೆ.

ಕೆಕೆಆರ್‌ಟಿಸಿ: ಕಲಬುರಗಿಯಲ್ಲಿ ಎರಡು ವಿಭಾಗ ಸೇರಿ ಒಟ್ಟು 09 ವಿಭಾಗಗಳು ಮತ್ತು 52ಕ್ಕೂ ಅಧಿಕ ಡಿಪೋಗಳಿಂದ ನಿತ್ಯ ನೂರಾರು ಬಸ್‌ಗಳು ಸಂಚರಿಸುವ ಮೂಲಕ ಒಟ್ಟು 08 ಜಿಲ್ಲೆಗಳ ಸಾವಿರಾರು ಜನರಿಗೆ ಸೇವೆ ಒದಗಿಸುತ್ತಿದೆ.

ಬಿಎಂಟಿಸಿ: 10 ಟಿಟಿಎಂಸಿ ಮತ್ತು 50 ಡಿಪೋಗಳನ್ನು ಹೊಂದಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸೇವೆ ನೀಡುತ್ತದೆ. ನಿತ್ಯ 6000ಕ್ಕೂ ಅಧಿಕ ಬಸ್‌ಗಳು ಬೆಂಗಳೂರಿಗರಿಗೆ ಪ್ರಯಾಣ ಸೌಕರ್ಯ ಒದಗಿಸುತ್ತಿವೆ. 48ಕ್ಕೂ ಹೆಚ್ಚಿನ ಬಸ್‌ ನಿಲ್ದಾಣಗಳು ಇವೆ. ಅನಿವಾರ್ಯತೆ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಬಿಎಂಟಿಸಿ ಬಸ್‌ಗಳು ಕಾಣಿಸಿಕೊಳ್ಳುತ್ತವೆ.

ರಾಜ್ಯದ 25,879 ಬಸ್‌ಗಳ ಬಸ್ ರೂಟ್ಸ್

ಈ ನಾಲ್ಕು ಸಾರಿಗೆ ಸಂಸ್ಥೆಗಳಡಿ ನಿತ್ಯ 25,879 ಬಸ್‌ಗಳು ಲಕ್ಷಾಂತರ ಕಿಲೋ ಮೀಟರ್ ಕ್ರಮಿಸಿ ಅಸಂಖ್ಯಾತ ಜನರಿಗೆ ಸೇವೆ ನೀಡುತ್ತಿವೆ. ಬೆಂಗಳೂರು-ಮೈಸೂರು-ಮಂಗಳೂರು, ಬೆಂಗಳೂರು-ಬೆಳಗಾವಿ, ಬೆಳಗಾವಿ-ಬೆಂಗಳೂರು, ಬಳ್ಳಾರಿ, ಕೋಲಾರ, ಚಾಮಜರಾಜನಗರದಂತಹ ಗಡಿ ಜಿಲ್ಲೆಗಳು ಸೇರಿ ಎಲ್ಲ ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು ಸುಮಾರು 24,267 ಮಾರ್ಗಗಳಲ್ಲಿ ಸಂಚರಿಸುತ್ತವೆ. ಬೆಂಗಳೂರಿನಂತಹ ಪಟ್ಟಣಗಳಿಂದ ಹಿಡಿದು, ಹಳ್ಳಿ ಭಾಗದವರೆಗೂ ಸೇವೆ ಸಿಗುತ್ತಿದೆ. ಕೆಎಸ್‌ಆರ್‌ಟಿಸಿ ಸೇರಿ ನಾಲ್ಕು ನಿಗಮಗಳು ದಕ್ಷತೆ, ಪ್ರಾಮಾಣಿಕ ಸೇವೆಗೆ, ಹೊಸ ಹೊಸ ಉಪಕ್ರಮ, ತಂತ್ರಜ್ಞಾನ ಅಳವಡಿಕೆಗೆ ಹೆಸರುವಾಸಿಯಾಗಿವೆ.

ಹೊಸ 7800 ಬಸ್‌ಗಳ ಖರೀದಿ

ಕರ್ನಾಟಕ ಸಾರಿಗೆ ಸಚಿವರ ವ್ಯಾಪ್ತಿಯಲ್ಲಿ ಈ ನಾಲ್ಕು ನಿಗಮಗಳ ವ್ಯಾಪ್ತಿಗೆ ಅಗತ್ಯತೆ ಹಾಗೂ ನಿರ್ದಿಷ್ಟ ಕಿಲೋ ಮೀಟರ್ ಓಡಿದ ಹಳೆ ಬಸ್‌ಗಳ ಜಾಗಕ್ಕೆ ಹೊಸ ಬಸ್‌ಗಳನ್ನು ತರಲು ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಹೊಸ 7800 ಬಸ್‌ಗಳ ಖರೀದಿಗೆ ಮುಂದಾಗಿದ್ದು, ಈ ಪೈಕಿ ಎಲೆಕ್ಟ್ರಿಕ್ ಬಸ್‌, ಇಂಧನ ಚಾಲಿತ ಬಸ್ ಸೇರಿದಂತೆ ಒಟ್ಟು 5,800 ಹೊಸ ಬಸ್‌ಗಳು ಸಂಸ್ಥೆಗಳಿಗೆ ಸೇರ್ಪಡೆಯಾಗಿವೆ. ಅವುಗಳನ್ನು ಆಯಾ ಭಾಗದ ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತದೆ. ಹೆಚ್ಚಿನ ಬಸ್‌ಗಳು ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತವೆ.

ಸಾಮಾನ್ಯ-ಐಶಾರಾಮಿ ಎಸಿ ಸ್ಲೀಪರ್ ಬಸ್‌ಗಳಿಗೆ ಜನ ಮೆಚ್ಚುಗೆ

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾಮಾನ್ಯ ಸಾರಿಗೆ, ನಗರ ಸಾರಿಗೆ ಬಸ್‌ಗಳು ಓಡಾಡುತ್ತವೆ. ಪ್ರಯಾಣಿಕರು ಸಾಮಾನ್ಯ ಸಾರಿಗೆ ಬಸ್‌ಗಳು ಹಾಗೂ ನಾನ್ ಎಸಿ ಬಸ್‌ಗಳಾದ ರಾಜಹಂಸ, ಅಶ್ವಮೇಧ, ಕರ್ನಾಟಕ ಸಾರಿಗೆ, ನಗರ ಸಾರಿಗೆ, ಇವಿ ಪವರ್ ಪ್ಲಸ್ ಬಸ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದರಲ್ಲಿ ಸ್ಲೀಪರ್ ಹಾಗೂ ಎಲೆಕ್ಟ್ರಿಕ್ ವೆಹಿಕಲ್‌ಗಳು ಸೇರಿವೆ. ಅದೇ ರೀತಿ ಪ್ರೀಮಿಯಂ ಬಸ್‌ಗಳಾದ 'ಐರಾವತ, ಅಂಬಾರಿ, ಫ್ಲೈ ಬಸ್, ವಜ್ರ, ವಾಯು ವಜ್ರ,' ಗಳ ಸೇವೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಅವಲಂಬನೆಯಿಂದ ನಿತ್ಯ ಕೋಟ್ಯಂತರ ರೂಪಾಯಿ ಆದಾಯ ಸಂಸ್ಥೆಗಳಿಗೆ ಹರಿದು ಬರುತ್ತದೆ.

ಶಕ್ತಿ ಯೋಜನೆ: ಬಸ್ ಪಾಸ್ ವಿತರಣೆ, ಇತರ ಸೌಲಭ್ಯಗಳು

ಬೆಂಗಳೂರು ನಗರ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಶೈಕ್ಷಣಿಕ ಹಿತ ದೃಷ್ಟಿಯಿಂದ ಕಡಿಮೆ ದುಡ್ಡಿಗೆ ವಿದ್ಯಾರ್ಥಿಗಳಿಗೆ ವಾರ್ಷಿಕ ಮತ್ತು ಮಾಸಿಕ ಬಸ್ ಪಾಸ್‌ ವಿತರಿಸುತ್ತವೆ. ಬೆಂಗಳೂರಿನಲ್ಲಿ ದೈನಂದಿನ ಬಸ್ ಪಾಸ್ ಲಭ್ಯವಿವೆ. ಹಿರಿಯ ನಾಗರಿಕರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಒದಗಿಸಲಾಗುತ್ತದೆ. ಇನ್ನೂ 'ಶಕ್ತಿ' ಯೋಜನೆಯಡಿ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. 2025ರ ಜುಲೈವರೆಗೆ 500 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾಗಿ ಸರ್ಕಾರ ಮಾಹಿತಿ ಹಂಚಿಕೊಂಡಿದೆ.

ಮಾತ್ರವಲ್ಲದೇ ನೌಕರರಿಗೆ ಆರೋಗ್ಯ ವಿಮೆ, ಅಪಘಾತವಾದರೆ ನೀಡುವ ಪರಿಹಾರ ಹಣವನ್ನು ಕೋಟಿ ರೂಪಾಯಿಗೆ ಹೆಚ್ಚಿಸಿದೆ. ತ್ವರಿತವಾಗಿ ಪರಿಹಾರ ಧನ, ಅಪಘಾತ ಮಾಡದೇ ಉತ್ತಮ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ವಿಶೇಷ ಪ್ರಶಸ್ತಿಗಳು, ನೌಕರರ ಮಕ್ಕಳಿಗೆ ಆರ್ಥಿಕ ಪ್ರೋತ್ಸಾಹ ಸೇರಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಇವುಗಳನ್ನು ಸಾರಿಗೆ ಕಲ್ಯಾಣ ಕಾರ್ಯಕ್ರಮಗಳು ಅಂತಲೂ ಕರೆಯಲಾಗುತ್ತದೆ.

ಸಾರಿಗೆ ನೇಮಕಾತಿ, ಅಂತಾರಾಷ್ಟ್ರೀಯ ಪ್ರಶಸ್ತಿಗಳು

2016ರಿಂದ 203ರವರೆಗೆ ನೇಮಕಾತಿ ಆಗದೇ ಸಾರಿಗೆ ನಿರ್ವಹಣೆಯಲ್ಲಿ ಸಮಸ್ಯೆ ಆಗಿತ್ತು. ಇದೆಲ್ಲ ಗಮನಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಮೃತರ ಕುಟುಂಬಸ್ಥರನ್ನು ಅನುಕಂಪದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಈ ರೀತಿ 1000 ಜನರನ್ನು ಅನುಕಂಪದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. 10,000 ನೌಕರರ ನೇಮಕ ಮಾಡಿಕೊಳ್ಳಲಾಗಿದೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಸಂಸ್ಥೆಗಳು ಶಕ್ತಿ ಕಳೆದುಕೊಂಡಿವೆ ಎಂಬ ವಿಪಕ್ಷಗಳು ಆರೋಪಿಸಿವೆ. ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಗತಿ ಉತ್ತಮವಾಗಿವೆ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಪೈಕಿ ಕೆಎಸ್‌ಆರ್‌ಟಿಸಿಗೆ ಅತ್ಯಧಿಕ ಪ್ರಶಸ್ತಿಗಳು ಲಭಿಸಿವೆ. ಶಕ್ತಿ ಯೋಜನೆ ಮಾತ್ರವಲ್ಲದೇ, ಹೊಸ ಹೊಸ ಉಪಕ್ರಮ ಅಳವಡಿಕೆ, ದಕ್ಷ ಸೇವೆಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿ ಒಟ್ಟು 673 ಪ್ರಶಸ್ತಿಗಳು ಲಭಿಸಿವೆ.

ಸಾರಿಗೆ ಸಂಸ್ಥೆ ಎದುರಿಸುತ್ತಿರುವ ಸಮಸ್ಯೆಗಳು

ಶಕ್ತಿ ಯೋಜನೆಯಿಂದಾಗಿ ಸರ್ಕಾರ ಹಣ ನೀಡುವುದು ಬಾಕಿ ಇರುವ ಕಾರಣ ಸಾರಿಗೆ ಸಂಸ್ಥೆಗಳಲ್ಲಿ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಮುಖ್ಯವಾಗಿ ನೌಕರರಿಗೆ ಹಿಂಬಾಕಿ, ವೇತನ ಪರಿಷ್ಕರಣೆ, ವೇತನ ತಾರತಮ್ಯ ಇದೆ ಎಂಬ ಆರೋಪಗಳು ಕೇಳಿ ಬಂದಿವೆ. ನೌಕರರು ಆಗಾಗ ಬೇಡಿಕೆ ಈಡೇರಿಕೆಗೆ ಮುಷ್ಕರಕ್ಕೆ ಕರೆ ಕೊಡುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಕೆಲವು ಬೇಡಿಕೆ ಪೂರೈಕೆಗೆ ಸರ್ಕಾರ ಮನಸ್ಸು ಮಾಡಿ ಆದೇಶಿಸಿದೆ.

ಬಳಸಿ ಬಿಟ್ಟ ಹಳೆಯ ಬಸ್‌ಗಳನ್ನು ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಗ್ರಾಮೀಣ ಹಾಗೂ ಜಿಲ್ಲಾ ಕೇಂದ್ರಗಳ ವ್ಯಾಪ್ತಿಯಲ್ಲಿ ಸೇವೆ ನಿಯೋಜಿಸಲಾಗುತ್ತದೆ. ಈ ಬಗ್ಗೆ ಆಕ್ರೋಶದ ಮಾತುಗಳು ಕೇಳಿ ಬರುತ್ತಲೇ ಇವೆ. ಜನ ಸಂಖ್ಯೆ ಹೆಚ್ಚಾದಂತೆಲ್ಲ ಬಸ್‌ಗಳ ಅಗತ್ಯತೆ, ಸಾರಿಗೆ ಮೂಲಸೌಕರ್ಯ ಹೆಚ್ಚಿಸುವ ಅನಿವಾರ್ಯತೆ ಇದೆ. ಹಬ್ಬದ ಸಂದರ್ಭಗಳಲ್ಲಿ ವಿಶೇಷ ಬಸ್‌ಗಳು ಸಂಚಾರಕ್ಕೆ ಅವಕಾಶ ಮಾಡಿಕೊಡುವ ಸರ್ಕಾರ ವಿಶೇಷ ಟೂರ್ ಪ್ಯಾಕೇಜ್ ಸಹ ಘೋಷಿಸುತ್ತದೆ. ಹಳೆ ಬಸ್‌ಗಳನ್ನು ಪುನರ್‌ನವೀಕರಿಸಿ, ದುರಸ್ತಿ ಮಾಡಿ ರಸ್ತೆ ಇಳಿಸುತ್ತಿದೆ ಎಂಬ ಆರೋಪಗಳು ಇವೆ. ರಾಜ್ಯದ ವಿವಿಧೆಡೆ ಹೊಸ ಬಸ್ ನಿಲ್ದಾಣಗಳು, ಡಿಪೋಗಳ ಸ್ಥಾಪನೆ ಪ್ರಗತಿಯಲ್ಲಿದೆ.

ಜನರು ಕೇಳುವ ಸಾಮಾನ್ಯ ಪ್ರಶ್ನೋತ್ತರಗಳು

1. ಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್?

ಕೆಎಸ್‌ಆರ್‌ಟಿ ಟಿಕೆಟ್ ಬುಕ್ಕಿಂಗ್ ಅನ್ನು ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ https://ksrtc.in/ ಮೂಲಕ ಮಾಡಬಹುದು.

2. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣವಿದೆಯೇ?

ಹೌದು, ಕರ್ನಾಟಕದ ಮಹಿಳೆಯರು ಸಾಮಾನ್ಯ ಮತ್ತು ವೇಗದೂತ (Express) ಬಸ್‌ಗಳಲ್ಲಿ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು. ಟಿಕೆಟ್‌ಗೆ ಹಣ ನೀಡದೇ ಪ್ರಯಾಣಿಸಲು ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಜಾರಿಗೆ ತಂದಿದೆ.

3. ಟಿಕೆಟ್ ರದ್ದು ಮಾಡಿದರೆ ಹಣ ವಾಪಸ್ ಬರುತ್ತದೆಯೇ?

ಹೌದು, ನಿಯಮಾನುಸಾರ ಬುಕ್ ಮಾಡಿದ ಟಿಕೆಟ್ ಅನ್ನು ರದ್ದುಗೊಳಿಸಿದರೆ ಟಿಕೆಟ್ ಕಡಿತದ ನಂತರ ಹಣ ವಾಪಸ್ ಸಿಗುತ್ತದೆ. ಬಸ್ ಹೊರಡುವ 2 ಗಂಟೆ ಮೊದಲು ರದ್ದು ಮಾಡುವುದು ಕಡ್ಡಾಯವಾಗಿರುತ್ತದೆ.

4. ಐರಾವತ ಮತ್ತು ಅಂಬಾರಿ ಬಸ್‌ಗಳಿಗೆ ಮುಂಗಡ ಬುಕಿಂಗ್ ಅಗತ್ಯವೇ?

ಈ ಬಸ್‌ಗಳು ದೀರ್ಘಾವಧಿ ಪ್ರಯಾಣದ ಬಸ್‌ಗಳಾದ್ದರಿಂದ ಸೀಟು ಖಚಿತಪಡಿಸಿಕೊಳ್ಳಲು ಮುಂಗಡ ಬುಕಿಂಗ್ ಮಾಡುವುದು ಉತ್ತಮ. ಪ್ರೀಮಿಯಂ ಅಲ್ಲದ ಬಸ್‌ಗಳನ್ನು ಸೀಟು ಬುಕ್ ಮಾಡಿ ಪ್ರಯಾಣಿಸಿದರೆ ಆರಾಮದಾಯಕ ಪ್ರಯಾಣ ಆನಂದಿಸಬಹುದು.

5. ಕೆಎಸ್‌ಆರ್‌ಟಿಸಿ ಸಹಾಯವಾಣಿ ಸಂಖ್ಯೆ ಯಾವುದು?

ಪ್ರಯಾಣಿಕರು ಪ್ರಯಾಣದ ವೇಳೆ, ಟಿಕೆಟ್ ಬುಕ್ಕಿಂಗ್ ಹಾಗೂ ಇತರ ಸಂಬಂಧಿದ ಯಾವುದೇ ದೂರು ಅಥವಾ ಮಾಹಿತಿ ಪಡೆಯಲು 080-26252625 ಸಂಖ್ಯೆಗೆ ಕರೆ ಮಾಡಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+