ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ ಬಡ್ಡಿ ದರ ಪರಿಷ್ಕರಣೆ
ಬೆಂಗಳೂರು, ಜೂನ್ 18; ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆಯ ಮೇಲಿನ ಬಡ್ಡಿ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಆದೇಶದ ಪ್ರಕಾರ 1/6/2023 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ತನಕ ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ನೇತ್ರಪ್ರಭಾ ಎಂ. ಧಾಯಪುಲೆ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು) ಆದೇಶ ಹೊಡಿಸಿದ್ದಾರೆ.

ಈ ಆದೇಶ ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆಯ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಆಡಳಿತಾಧಿಕಾರಿಗಳು, ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ, ಬೆಂಗಳೂರು ಇವರ ಪತ್ರ 9/04/2021. ಕೇಂದ್ರ ಸರ್ಕಾರದ ಆರ್ಥಿಕ ಮಂತ್ರಾಯಲದ ಅಧಿಕೃತ ಜ್ಞಾಪನ ಸಂಖ್ಯೆ ದಿನಾಂಕ 8/05/2023 ಉಲ್ಲೇಖಿಸಲಾಗಿದೆ.
ಆದೇಶದಲ್ಲಿ ಏನಿದೆ?; ಆಡಳಿತಾಧಿಕಾರಿಗಳು, ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆ, ಬೆಂಗಳೂರು, ಇವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ, 1981 ರನ್ವಯ ಉಳಿತಾಯ ನಿಧಿ ಮೊತ್ತಕ್ಕೆ ಶೇ. 8% ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
Government of India, office Memorandum New Delhi, No.7(2)/EV/2016, dated:27/11/2020ರ ಪ್ರಕಾರ ಕೇಂದ್ರ ಸರ್ಕಾರದ ಸಾಮೂಹಿಕ ವಿಮಾ ಯೋಜನೆಯ ಉಳಿತಾಯ ನಿಧಿ ಬಡ್ಡಿ ದರವೂ ಸಹ ಶೇ.7.1ಕ್ಕೆ ಇಳಿಕೆಯಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆಯ ಉಳಿತಾಯ ನಿಧಿಯ ಮೇಲಿನ ಬಡ್ಡಿ ದರವನ್ನು ಶೇ.7.1ಕ್ಕೆ ಇಳಿಸುವಂತೆ ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ ಸರ್ಕಾರಿ ಆದೇಶದಲ್ಲಿ, ಕೇಂದ್ರ ಸರ್ಕಾರವು ದಿನಾಂಕ 31/12/2004ರ ಅಧಿಕೃತ ಜ್ಞಾಪನದಲ್ಲಿ ಕೇಂದ್ರ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆಯ ಉಳಿತಾಯ ನಿಧಿಯ ಮೇಲಿನ ಬಡ್ಡಿ ದರವನ್ನು ಶೇ.8ಕ್ಕೆ ನಿಗದಿಪಡಿಸಿ ಆದೇಶಿಸಲಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆಯ ಮೊತ್ತದ ಮೇಲೆ ದಿನಾಂಕ 01/01/2007 ರಿಂದ ಜಾರಿಗೆ ಬರುವಂತೆ ಶೇ.8ರ ಬಡ್ಡಿ ದರವನ್ನು ನಿಗದಿಪಡಿಸಿ ಆದೇಶಿಸಲಾಗಿದೆ.
ಪ್ರಸ್ತುತ ಅಧಿಕೃತ ಜ್ಞಾಪನದಲ್ಲಿ ಕೇಂದ್ರ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆಯ ಉಳಿತಾಯ ನಿಧಿಯ ಮೇಲಿನ ಬಡ್ಡಿ ದರವನ್ನು ದಿನಾಂಕ 01/04/2023 ರಿಂದ 30/06/2023ರ ವರೆಗಿನ ಅವಧಿಗೆ ವಾರ್ಷಿಕ ಶೇ.7.1ರ ಬಡ್ಡಿ ದರವನ್ನು ನಿಗದಿಪಡಿಸಿ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಸಾಮೂಹಿಕ ವಿಮಾ ಯೋಜನೆಯ ಉಳಿತಾಯ ನಿಧಿಯ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ನಿಗದಿಪಡಿಸುವ ದರವನ್ನೇ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿಪಡಿಸಲು ನಿರ್ಧರಿಸಿ,ಸರ್ಕಾರವು ಈ ಕೆಳಕಂಡಂತೆ ಆದೇಶಿಸಲಾಗಿದೆ ಎಂದು ಹೇಳಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ನೌಕರರ ಸಾಮೂಹಿಕ ವಿಮಾ ಯೋಜನೆಯ ಮೊತ್ತದ ಮೇಲಿನ ಬಡ್ಡಿ ದರವನ್ನು ದಿನಾಂಕ 01/06/2023 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಾರ್ಷಿಕ ಶೇ.7.1ಕ್ಕೆ ನಿಗದಿಪಡಿಸಿ ಆದೇಶಿಸಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಮೂಹಿಕ ವಿಮಾ ಯೋಜನೆ, 1981ರ ನಿಯಮಗಳಿಗೆ ಸೂಕ್ತ ತಿದ್ದುಪಡಿಯನ್ನು ತರಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications