ಬಿಎಸ್‌ವೈ ಪೋಕ್ಸೋ ಕೇಸ್: ʼಮಾಜಿ ಸಿಎಂ ಆದ್ರೂ ಬಿಡಲ್ಲ..ʼ ಹೀಗಂದಿದ್ಯಾರು?
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪವಿದೆ. ಈ ಸಂಬಂಧ ಪೋಕ್ಸೋ ಕೇಸ್ ಕೂಡ ಅವರ ಮೇಲೆ ದಾಖಲಾಗಿದೆ. ಸದ್ಯ ಈ ಕೇಸ್ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದ್ದು, ಬಿಎಸ್.ಯಡಿಯೂರಪ್ಪ ಅವರನ್ನು ಬಂಧಿಸದಂತೆ ತಾತ್ಕಾಲಿಕ ರಿಲೀಫ್ ಕೂಡ ಸಿಕ್ಕಿದೆ.
ಇದರ ನಡುವೆಯೇ ಈ ಕೇಸ್ ಸಂಬಂಧ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಕೇಸ್‌ಗೆ ರಾಜ್ಯ ಮಹಿಳಾ ಆಯೋಗ ಎಂಟ್ರಿ ನೀಡಿದ್ದು, ಈ ಪ್ರಕರಣದಲ್ಲಿ ತಪ್ಪು ಯಾರೇ ಮಾಡಿರಲಿ, ಅದು ಮಾಜಿ ಸಿಎಂ ಆದರೂ ಬಿಡುವ ಮಾತೇ ಇಲ್ಲ ಎಂದು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಖಡಕ್ ಆಗಿ ಹೇಳಿದ್ದಾರೆ.

ಮಹಿಳೆಯೊಬ್ಬರು ನೀಡಿದ್ದ ದೂರಿನ ಮೇರೆಗೆ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಆ ಮಹಿಳೆ ಸಾವನ್ನಪ್ಪಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಹಿಳಾ ಆಯೋಗ ಈ ಬಗ್ಗೆ ಬೆಂಗಳೂರು ಪೊಲೀಸರ ಬಳಿ ವರದಿ ಕೇಳಿದೆ. ಅಲ್ಲದೆ ಈ ಸಂಬಂಧ ವಿಶೇಷ ತನಿಖೆ ನಡೆಸುವಂತೆ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಅವರು ಗೃಹ ಇಲಾಖೆಗೆ ಪತ್ರ ಕೂಡ ಬರೆದಿದ್ದಾರೆ.
ಏನಿದು ಪ್ರಕರಣ?: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಇನ್ನು ಇದಕ್ಕೆ ಸಂಬಂಧಿಸಿದ್ದು ಎನ್ನಲಾದ ವಿಡಿಯೋ ಕೂಡ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಮಹಿಳೆ ನೀಡಿದ ದೂರಿನ ಮೇರೆಗೆ ಸದಾಶಿವನಗರ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರವು ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು.
ತನಿಖೆ ಚುರುಕುಗೊಳಿಸಿದ್ದ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಗಳನ್ನು ಸಿಐಡಿ ಅಧಿಕಾರಿಗಳ ಮುಂದೆ ನೀಡಿದ್ದರು. ಬಳಿಕ ಈ ಕೇಸ್ ರದ್ದು ಮಾಡುವಂತೆ ಹಾಗೂ ಜಾಮೀನು ಮಂಜೂರು ಮಾಡುವಂತೆ ಯಡಿಯೂರಪ್ಪ ಅವರು ಕೋರ್ಟ್ ಮೊರೆ ಹೋಗಿದ್ದರು.

ಆದರೆ ಈ ಕೇಸ್ ದಾಖಲಾದ ಕೆಲ ತಿಂಗಳಲ್ಲೇ ಸಂತ್ರಸ್ತೆ ಪರ ದೂರು ನೀಡಿದ್ದ ಮಹಿಳೆಯ ಮೃತಪಟ್ಟಿದ್ದರು. ಈ ಬಗ್ಗೆ ರಾಜ್ಯ ಮಹಿಳಾ ಆಯೋಗವು ಅನುಮಾನ ವ್ಯಕ್ತಪಡಿಸಿ, ಮಹಿಳೆಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ. ಮಹಿಳೆಯು ಮೃತಪಟ್ಟಿರುವ ಕುರಿತಾದ ತನಿಖೆಯ ಮಾಹಿತಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಅವರಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ, ಈ ಕೇಸ್‌ನಲ್ಲಿ ಮಾಜಿ ಸಿಎಂ ಆಗಿರಲಿ, ಜನ ಸಾಮಾನ್ಯರೇ ಇರಲಿ, ತಪ್ಪು ಮಾಡಿದ್ದರೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕೇಸ್‌ನಲ್ಲಿ ಸಂತ್ರಸ್ತೆಯಾಗಿರುವ ಬಾಲಕಿಯ ತಾಯಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಕುಟುಂಬದವರು ಕೂಡ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅವರನ್ನು ನಾನು ಕೂಡ ಭೇಟಿ ಮಾಡಿದೆ. ಕ್ಯಾನ್ಸರ್‌ನಿಂದ ದಿಢೀರನೆ ಸಾವು ಬರಲು ಹೇಗೆ ಸಾಧ್ಯ? ಎನ್ನುವುದೇ ನಮಗೆಲ್ಲ ಕಾಡುತ್ತಿರುವ ಪ್ರಶ್ನೆ. ಅಲ್ಲದೆ, ದೂರುದಾರ ಮಹಿಳೆಯ ಶವ ಹಸ್ತಾಂತರಿಸುವ ವೇಳೆ ಎಡವಟ್ಟುಗಳು ನಡೆದಿವೆ. ಮಹಿಳೆ ಸಾವಿನ ಬಗ್ಗೆ ಕುಟುಂಬದವರು ಹುಳಿಮಾವು ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದಾಖಲಾಗಿದ್ದ ಪೋಕ್ಸೋ ಕೇಸ್‌ನಲ್ಲಿ ಸದ್ಯ ಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ತಮ್ಮನ್ನು ಬಂಧಿಸಬಾರದು ಎಂದು ಯಡಿಯೂರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ನೀಡಲಾಗಿದ್ದ ಮಧ್ಯಂತರ ಆದೇಶವನ್ನು ಮತ್ತೆ ಮುಂದುವರಿಸಿದೆ. ಈ ಬೆಳವಣಿಗೆಯ ನಡುವೆಯೇ ರಾಜ್ಯ ಮಹಿಳಾ ಆಯೋಗದಿಂದ ಈ ಕೇಸ್ ಮತ್ತೊಂದು ತಿರುವು ಪಡೆದುಕೊಂಡಿದೆ.












Click it and Unblock the Notifications