SSLC ಪರೀಕ್ಷೆ ನಡೆಯುತ್ತಿರುವಾಗಲೇ ಅಂಕ 525ಕ್ಕೆ ಇಳಿಕೆ: ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಗಳು ಬಿರುಸಿನಿಂದ ನಡೆಯುತ್ತಿವೆ. ಆದರೆ, ಪರೀಕ್ಷೆಯ ಮಧ್ಯದಲ್ಲಿಯೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರವೊಂದು ಇದೀಗ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ತೃತೀಯ ಭಾಷೆಯಾದ ಹಿಂದಿ ವಿಷಯದ ಅಂಕಗಳನ್ನು ಮೌಲ್ಯಾಂಕನಕ್ಕೆ (ಒಟ್ಟು ಮೊತ್ತಕ್ಕೆ) ಪರಿಗಣಿಸದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒಟ್ಟು ಅಂಕಗಳನ್ನು 625 ರಿಂದ 525ಕ್ಕೆ ಇಳಿಕೆ ಮಾಡಿರುವ ಸರ್ಕಾರದ ಕ್ರಮವನ್ನು ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
"ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಬೆಲೆ ಇಲ್ಲವೇ? ಪರೀಕ್ಷೆ ನಡೆಸುವುದು, ಅದರಲ್ಲಿಯೂ ಅತ್ಯಂತ ನಿರ್ಣಾಯಕವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ಒಂದು ಹುಡುಗಾಟಿಕೆಯಾಗಬಾರದು" ಎಂದು ಸುರೇಶ್ ಕುಮಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಕ್ಕಳ ಪರಿಶ್ರಮಕ್ಕೆ ಬಗೆದ ದ್ರೋಹ
ವರ್ಷಪೂರ್ತಿ ಓದಿ, ಪರೀಕ್ಷೆ ಬರೆಯಲು ಸಜ್ಜಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೇವಲ ಮೂರು ದಿನಗಳಿರುವಾಗ ಆ ವಿಷಯದ ಅಂಕಗಳಿಗೆ ಮನ್ನಣೆ ಇಲ್ಲ ಎಂದು ಘೋಷಿಸುವುದು ಎಷ್ಟರಮಟ್ಟಿಗೆ ಸರಿ? ಇದೊಂದು ಮಕ್ಕಳ ಪರಿಶ್ರಮಕ್ಕೆ ಬಗೆದ ಬಹುದೊಡ್ಡ ದ್ರೋಹವಾಗಿದೆ. ಒಂದು ವೇಳೆ ಸರ್ಕಾರಕ್ಕೆ ಈ ಬದಲಾವಣೆ ತರುವ ಪ್ರಾಮಾಣಿಕ ಉದ್ದೇಶವಿದ್ದರೆ, ಅದನ್ನು ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿಯೇ ಪ್ರಕಟಿಸಬೇಕಿತ್ತು. ಅದಕ್ಕೆ ಒಂದಿಷ್ಟು ಅರ್ಥವಿರುತ್ತಿತ್ತು. ಆದರೆ, ಪರೀಕ್ಷೆಗಳು ಪ್ರಾರಂಭವಾಗಿ, ಕೆಲವು ವಿಷಯಗಳ ಪರೀಕ್ಷೆ ಮುಗಿದ ನಂತರ ದಿಢೀರನೆ ಅಂಕ ಕಡಿತದ ತೀರ್ಮಾನ ಪ್ರಕಟಿಸಿರುವುದು ಪರೀಕ್ಷೆಯ ಕುರಿತು ಸರ್ಕಾರಕ್ಕಿರುವ ಗಾಂಭೀರ್ಯತೆಯ ಕೊರತೆಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಪರೀಕ್ಷೆಗಳ ನಡುವೆಯೇ ಹಿಂದಿಯನ್ನು ಮೌಲ್ಯಾಂಕನಕ್ಕೆ ಪರಿಗಣಿಸುವುದಿಲ್ಲ ಎಂಬ ಹೇಳಿಕೆ ಅತ್ಯಂತ ಬೇಜವಾಬ್ದಾರಿಯುತ ಹಾಗೂ ವಿದ್ಯಾರ್ಥಿ ವಿರೋಧಿಯಾಗಿದೆ. ವರ್ಷಪೂರ್ತಿ ಶ್ರದ್ಧೆಯಿಂದ ಓದಿದ ವಿಷಯವನ್ನು ಪರೀಕ್ಷೆಯ ಮಧ್ಯದಲ್ಲಿಯೇ 'ಅಪ್ರಸ್ತುತ' ಎಂದು ಘೋಷಿಸುವುದು ಸರ್ಕಾರದ ಆಡಳಿತಾತ್ಮಕ ದೌರ್ಬಲ್ಯವನ್ನಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಭವಿಷ್ಯವನ್ನು ತಮಾಷೆಯ ವಸ್ತುವಾಗಿ ಪರಿಗಣಿಸಿರುವ ಅಪಾಯಕಾರಿ ಮನೋಭಾವವನ್ನು ಸೂಚಿಸುತ್ತದೆ ಎಂದು ಮಾಜಿ ಶಿಕ್ಷಣ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಶಿಕ್ಷಣ ಬಲಿ?
"ಲಕ್ಷಾಂತರ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಭವಿಷ್ಯವನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಲಿಕೊಡುತ್ತಿರುವ ಸರ್ಕಾರದ ಈ ನಡೆ ಖಂಡನೀಯ ಹಾಗೂ ನೈತಿಕವಾಗಿ ಅಸ್ವೀಕಾರಾರ್ಹ" ಎಂದು ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ತೀರ್ಮಾನದಲ್ಲಿ ಯಾವುದೇ ಶೈಕ್ಷಣಿಕ ದೃಷ್ಟಿಕೋನ ಇಲ್ಲ, ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತ ಮತ್ತು ಅಸ್ಥಿರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಶಿಕ್ಷಣ ವ್ಯವಸ್ಥೆಯನ್ನು ಈ ರೀತಿ ಅಸ್ಥಿರಗೊಳಿಸುವುದರಿಂದ ಮಕ್ಕಳಲ್ಲಿ ಅಪನಂಬಿಕೆ ಹಾಗೂ ಆತಂಕ ಹೆಚ್ಚಾಗುತ್ತದೆ. ಜೊತೆಗೆ ಇದು ರಾಜ್ಯದ ಶೈಕ್ಷಣಿಕ ಮಾನದಂಡಗಳನ್ನೇ ಹಾಳುಮಾಡುವ ದುಷ್ಕೃತ್ಯವಾಗಿದೆ. "ಪರೀಕ್ಷೆಯ ಪಾವಿತ್ರ್ಯತೆ ಎಂಬುದು ಕೇವಲ ಒಂದು ಪದಪ್ರಯೋಗವಲ್ಲ; ಅದು ವಿದ್ಯಾರ್ಥಿಗಳ ಪರಿಶ್ರಮ ಹಾಗೂ ಇಡೀ ಸಮಾಜದ ನಂಬಿಕೆಯ ಸಂಕೇತವಾಗಿದೆ. ಆ ಪಾವಿತ್ರ್ಯತೆಯನ್ನೇ ಸರ್ಕಾರ ನಿರ್ಲಕ್ಷ್ಯದಿಂದ ತುಳಿಯುತ್ತಿರುವುದು ಅತ್ಯಂತ ವಿಷಾದನೀಯ. ವಿದ್ಯಾರ್ಥಿಗಳನ್ನು ರಾಜಕೀಯ ಪ್ರಯೋಗಗಳಿಗೆ ಬಳಸಿಕೊಳ್ಳುವ ಹಕ್ಕು ಯಾವುದೇ ಸರ್ಕಾರಕ್ಕೂ ಇಲ್ಲ" ಎಂದು ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಈ ದಿಢೀರ್ ನಿರ್ಧಾರದ ವಿರುದ್ಧ ಇದೀಗ ಪೋಷಕರು ಹಾಗೂ ಶಿಕ್ಷಣ ತಜ್ಞರಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.












Click it and Unblock the Notifications