Karnataka : ಈ ವರ್ಷ SSLC, PUC ಪರೀಕ್ಷೆ ಬರೆಯಲಿದ್ದಾರೆ 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು
ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ನಡೆಯಲಿರುವ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ವಾರ್ಷಿಕ ಪರೀಕ್ಷೆಗಳಿಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) ಪರೀಕ್ಷಾ ಸಿದ್ಧತೆಗಳನ್ನು ಚುರುಕುಗೊಳಿಸಿದ್ದು, ಈ ವರ್ಷ ರಾಜ್ಯಾದ್ಯಂತ ಒಟ್ಟು 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಎದುರಿಸಲಿದ್ದಾರೆ. ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, 9.03 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದರೆ, 7.10 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಂಪೂರ್ಣ ವಿವರ
ಹತ್ತನೇ ತರಗತಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೊದಲ ದೊಡ್ಡ ಮೈಲಿಗಲ್ಲಾಗಿದೆ. ಈ ವರ್ಷ ಒಟ್ಟು 9,02,889 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಅತಿ ಹೆಚ್ಚು ಅಂದರೆ 8.12 ಲಕ್ಷ ವಿದ್ಯಾರ್ಥಿಗಳು ಮೊದಲ ಬಾರಿಗೆ (Freshers) ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಉಳಿದಂತೆ, ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾಗದ 62,845 ಪುನರಾವರ್ತಿತ (Repeaters) ವಿದ್ಯಾರ್ಥಿಗಳು ಹಾಗೂ 27,189 ಖಾಸಗಿ (Private candidates) ಅಭ್ಯರ್ಥಿಗಳು ಕೂಡ ಪರೀಕ್ಷಾ ಬರೆಯಲ್ಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಲು ಮಂಡಳಿಯು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಿ-ಅಂಶಗಳು
ಉನ್ನತ ವ್ಯಾಸಂಗ ಮತ್ತು ಪದವಿ ಶಿಕ್ಷಣಕ್ಕೆ ಮುನ್ನುಡಿಯಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಈ ವರ್ಷ 7,10,363 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲಿ 6,46,801 ಹೊಸ ವಿದ್ಯಾರ್ಥಿಗಳಾಗಿದ್ದರೆ, 50,540 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 13,022 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ವಿಭಾಗವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ವಿಜ್ಞಾನ ವಿಭಾಗದತ್ತ ವಿದ್ಯಾರ್ಥಿಗಳ ಒಲವು ಅತಿ ಹೆಚ್ಚಾಗಿರುವುದು ಸ್ಪಷ್ಟವಾಗಿದೆ. ವಿಜ್ಞಾನ (Science) ವಿಭಾಗದಲ್ಲಿ ಗರಿಷ್ಠ 2.92 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ವಾಣಿಜ್ಯ (Commerce) ವಿಭಾಗದಲ್ಲಿ 2.11 ಲಕ್ಷ ವಿದ್ಯಾರ್ಥಿಗಳು ಮತ್ತು ಕಲಾ (Arts) ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಲಿದ್ದಾರೆ.
ಪರೀಕ್ಷಾ ನಿಯಮಗಳು ಮತ್ತು ಇಲಾಖೆಯ ಕ್ರಮಗಳು
ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದರಿಂದ, ಸುಗಮ ಪರೀಕ್ಷಾ ನಿರ್ವಹಣೆಗಾಗಿ ಜಿಲ್ಲಾ ಮಟ್ಟದಲ್ಲಿ ವಿಶೇಷ ಜಾಗೃತ ದಳಗಳನ್ನು ರಚಿಸಲಾಗಿದೆ. ಇತ್ತೀಚಿನ ನಿಯಮಾವಳಿಗಳ ಪ್ರಕಾರ, ವಿದ್ಯಾರ್ಥಿಗಳು ಉತ್ತೀರ್ಣರಾಗಲು ನಿಗದಿತ ಕನಿಷ್ಠ ಅಂಕಗಳನ್ನು (ಶೇಕಡಾ 35) ಪಡೆಯುವುದು ಕಡ್ಡಾಯವಾಗಿದೆ. ಪ್ರತಿ ವಿಷಯದಲ್ಲೂ ಕನಿಷ್ಠ ಅಂಕಗಳನ್ನು ಗಳಿಸಿದರಷ್ಟೇ ಮುಂದಿನ ತರಗತಿಗೆ ಪ್ರವೇಶ ಪಡೆಯಲು ಸಾಧ್ಯ. ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಪ್ರವೇಶ ಪತ್ರ (Hall Ticket) ಹಾಗೂ ಶಾಲಾ-ಕಾಲೇಜಿನ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಮೊಬೈಲ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಲು ಈಗಾಗಲೇ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಶಿಕ್ಷಣ ಇಲಾಖೆ ಕಿವಿಮಾತು ಹೇಳಿದೆ. ಪೋಷಕರು ಕೂಡ ತಮ್ಮ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರದೆ, ಅವರ ಓದಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುವುದು ಈ ಸಮಯದಲ್ಲಿ ಅತ್ಯಗತ್ಯವಾಗಿದೆ.












Click it and Unblock the Notifications