Invest Karnataka 2025: ಮೊದಲ ದಿನವೇ ₹5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದ: MB Patil
ಬೆಂಗಳೂರು, ಫೆಬ್ರವರಿ 13: ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ 2025 ಶುರುವಾಗಿದ್ದು, ಮೊದಲ ದಿನ ಭರ್ಜರಿ ಯಶಸ್ಸು ಪಡೆದಿದೆ. ವಿದೇಶ ಕಂಪನಿಗಳಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಮೊದಲ ದಿನವೇ ಲಕ್ಷಾಂತರ ಕೋಟಿ ರೂಪಾಯಿ ಹೂಡಿಕೆ ಹರಿದು ಬಂದಿದೆ. ಕರ್ನಾಟಕ ಸರ್ಕಾರ ಸಹಿ ಮಾಡುವ ಮೂಲಕ ಒಪ್ಪಂದ ಅಧಿಕೃತವಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.
ಕರ್ನಾಟಕವು ರಾಜ್ಯ ಸರ್ಕಾರ ಹೂಡಿಕೆಗೆ ಅತ್ಯುತ್ತಮ ತಾಣ ಏಕೆ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ ಎಂದು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ಬುಧವಾರ ಮಾಹಿತಿ ನೀಡಿದ್ದಾರೆ. Invest Karnataka-2025 ಮೊದಲ ದಿನವು ಭಾರಿ ಯಶಸ್ಸನ್ನು ಕಂಡಿದೆ. ಸುಮಾರು ₹5 ಲಕ್ಷ ಕೋಟಿ ಮೌಲ್ಯದ ಹೂಡಿಕೆ ಒಪ್ಪಂದಗಳಿಗೆ ಈಗಾಗಲೇ ಸಹಿ ಹಾಕಲಾಗಿದೆ. ಇದು ರಾಜ್ಯದಲ್ಲಿ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯ ಹೊಸ ಯುಗಕ್ಕೆ ವೇದಿಕೆ ಕಲ್ಪಿಸಿದಂತಾಗಿದೆ ಎಂದು ಎಂಬಿ ಪಾಟೀಲ್ ತಿಳಿಸಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸುಮಾರು 19 ವಿದೇಶಿ ಕಂಪನಿಗಳು, ಹತ್ತಾರು ಮಂದಿ ಉದ್ಯಮಿಗಳು ಪಾಲ್ಗೊಂಡಿದ್ದಾರೆ. ಫೆಬ್ರವರಿ 11ರಿಂದ 14ರವರೆಗೆ ನಡೆಯಲಿದೆ. ಆರಂಭದಲ್ಲಿ ಸಮಾವೇಶದಿಂದ ಒಟ್ಟು 10 ಲಕ್ಷ ಕೋಟಿ ರೂಪಾಯಿ ಹೂಡಿಕೆ ನಿರೀಕ್ಷಿಸಲಾಗಿದೆ. ಈ ಪೈಕಿ ಮೊದಲ ದಿನವೇ ಅರ್ಧ ನಿರೀಕ್ಷೆ ಈಡೇರಿಸಿದೆ. ಇನ್ನರ್ಧ ಮುಂದಿನ ಎರಡು ದಿನಗಳಲ್ಲಿ ಈಡೇರುವ ಭರವಸೆ ಸರ್ಕಾರಕ್ಕೆ ಇದೆ.
GIM2025 ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಬೆಳವಣಿಗೆಯ ಕಥೆಯೊಂದಿಗೆ ಕೈಜೋಡಿಸಿದ ಗಣ್ಯರು, ದೇಶದ ಪಾಲುದಾರರು, ವ್ಯಾಪಾರ ಮುಖಂಡರು ಮತ್ತು ಉದ್ಯಮಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಿಮ್ಮ ಭಾಗವಹಿಸುವಿಕೆಯು ಅಭಿವೃದ್ಧಿ ಹೊಂದುತ್ತಿರುವ ಕೈಗಾರಿಕಾ ಭವಿಷ್ಯದ ನಮ್ಮ ದೃಷ್ಟಿಕೋನವನ್ನು ಬಲಪಡಿಸುತ್ತದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
ಶೃಂಗಸಭೆಯು ತೆರೆದುಕೊಳ್ಳುತ್ತಿದ್ದಂತೆ, ಕರ್ನಾಟಕದ ಪ್ರಗತಿಪರ ಕೈಗಾರಿಕಾ ನೀತಿಗಳು ಮತ್ತು ಪ್ರಮುಖ ವಲಯಗಳಿಗೆ ನಮ್ಮ ದೃಷ್ಟಿಕೋನದ ಕುರಿತು ಪ್ರಭಾವಶಾಲಿ ಚರ್ಚೆಗಳ ಮೂಲಕ ನಾವು ಜಾಗತಿಕ ಹೂಡಿಕೆದಾರರೊಂದಿಗೆ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ. ಆ ವೇಗ ಇಲ್ಲಿಂದ ಮಾತ್ರ ನಿರ್ಮಾಣವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸುವಲ್ಲಿ ಅವರ ಅವಿರತ ಪ್ರಯತ್ನಗಳಿಗಾಗಿ ನನ್ನ ಸಮರ್ಪಿತ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಇಲ್ಲಿನ ಶಕ್ತಿ, ಉತ್ಸಾಹ ಮತ್ತು ಹೂಡಿಕೆದಾರರ ವಿಶ್ವಾಸವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ ಎಂದರು.
ಸೆಮಿಕಂಡಕ್ಟರ್ ವಲಯ: ಪ್ರತಿಭೆ-ಸಾಮರ್ಥ್ಯ ಸೃಷ್ಟಿಸಬೇಕು
ನಾವು ಸೆಮಿಕಂಡಕ್ಟರ್ ಕ್ಷೇತ್ರದ ಸಹಿತ ಎಲ್ಲಾ ಕೈಗಾರಿಕಾ ವಲಯಗಳಿಗೆ ಸಂಬಂಧಿಸಿದಂತೆ ಬರೀ ಬಂಡವಾಳ ಆಕರ್ಷಿಸುವ ಬಗ್ಗೆ ಮಾತನಾಡುತ್ತಿರುತ್ತೇವೆ. ಆದರೆ, ವಾಸ್ತವವಾಗಿ ನಾವು ಪ್ರತಿಭೆ ಮತ್ತು ಸಾಮರ್ಥ್ಯ ಎರಡನ್ನೂ ಸೃಷ್ಟಿಸುವ ಜರೂರಿದೆ. ಇದು ಸಾಧ್ಯವಾದರೆ, ಬಂಡವಾಳದ ಹರಿವು ತನ್ನಿಂತಾನೇ ಆಗುತ್ತದೆ ಎಂದು ಉದ್ಯಮ ಪರಿಣತರಾದ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಿಇಒ ಸಂತೋಷಕುಮಾರ್ ಹೇಳಿದರು.
ಅವರು ಎರಡನೇ ದಿನದ ಕಾರ್ಯಕ್ರಮದಲ್ಲಿ ಬುಧವಾರ ಬೆಳಗ್ಗೆ 'ಸೆಮಿಕಂಡಕ್ಟರ್ ಕ್ರಾಂತಿಯಲ್ಲಿ ಭಾರತದ ನಾಯಕತ್ವದ ಸರದಿ' ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದರು. 'ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂದಿನ ಹತ್ತು ವರ್ಷಗಳು ಭಾರತದ್ದಾಗಿವೆ. ಈ ಅವಧಿಯಲ್ಲಿ ಈ ಕ್ಷೇತ್ರದ ಈಗಿನ 40 ಬಿಲಿಯನ್ ಡಾಲರ್ ವಹಿವಾಟು 400 ಬಿಲಿಯನ್ ಡಾಲರ್ ಮೀರಲಿದೆ. ಆದರೆ, ನಮ್ಮ ಶಿಕ್ಷಣ ರಂಗದಲ್ಲಿ ಗುಣಮಟ್ಟದ ಬೋಧಕರು, ಸಂಶೋಧನೆ ಮತ್ತು ಪ್ರಾಯೋಗಿಕ ಕಲಿಕೆ ಮೂರರ ಕಡೆಗೂ ಆದ್ಯ ಗಮನ ಕೊಡಬೇಕು.
ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಗಳು ರಾಷ್ಟ್ರೀಯ ಸಮಸ್ಯೆಗಳನ್ನು ಮುಂದಿಟ್ಟು, ಅವುಗಳಿಗೆ ದಕ್ಷ ಪರಿಹಾರ ಕಂಡು ಹಿಡಿಯುವಂತಹ ಸಂಶೋಧನಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಬೇಕಾದ ಜರೂರಿದೆ ಎಂದು ಅವರು ವಾಸ್ತವ ಅಂಶಗಳ ಮೇಲೆ ಬೆಳಕು ಚೆಲ್ಲಿದರು.












Click it and Unblock the Notifications