ರಾಜ್ಯದಲ್ಲಿ ಇಂದಿನಿಂದ ದ್ವಿತೀಯು ಪಿಯುಗೆ ಆನ್‌ಲೈನ್ ತರಗತಿ ಶುರು
ಬೆಂಗಳೂರು, ಜುಲೈ 15: ಪ್ರಸಕ್ತ ಶೈಕ್ಷಣಿಕ ಸಾಲಿನ(2021-22) ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜುಲೈ 15ರಿಂದ ಆನ್‌ಲೈನ್ ಮೂಲಕ ತರಗತಿಗಳನ್ನು ಆರಂಭಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಪಿಯು ಕಾಲೇಜುಗಳಿಗೆ ಆದೇಶಿಸಿದೆ.
ಪ್ರಸಕ್ತ ಸಾಲಿನ ಭೌತಿಕ ತರಗತಿಗಳ ಆರಂಭದ ಬಗ್ಗೆ ಈವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಜು.15ರಿಂದ ಆನ್‌ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಪಾಠ ಮಾಡಬೇಕು.
ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ತರಗತಿಗಳನ್ನು ನಡೆಸಬೇಕು. ಒಂದು ಗಂಟೆಗೆ ಒಂದು ತರಗತಿಯಂತೆ ನಿತ್ಯ ನಾಲ್ಕು ತರಗತಿಗಳನ್ನು ನಡೆಸಬೇಕು. ಮಧ್ಯಾಹ್ನ 12ರಿಂದ 12.30ರವರೆಗೆ ವಿರಾಮ ನೀಡಬೇಕೆಂದು ಸೂಚಿಸಿದೆ.

ಆದರೆ ಈ ಬಾರಿ ಉಪನ್ಯಾಸಕರು, ತಾವು ಸೇವೆ ನಿರ್ವಹಿಸುತ್ತಿರುವ ಕಾಲೇಜುಗಳಿಂದಲೇ, ಎಮ್ ಎಸ್ ಟೀಮ್, ಗೂಗಲ್ ಮೀಟ್, ಜೂಮ್ ಅಥವಾ ಜಿಯೋ ಮೀಟ್ಗಳನ್ನು ಉಪಯೋಗಿಸಿಕೊಂಡು ಪಾಠ ಮಾಡಲಿದ್ದಾರೆ. ಇದಕ್ಕೆ ಸಂಬಂದಿಸಿದಂತೆ ಪದವಿ ಪೂರ್ವ ಕಾಲೆಜಿನ ಪ್ರಾಂಶುಪಾಲರು ಸಾಮಾನ್ಯ ವರ್ಷಗಳಂತೆ ಎಲ್ಲಾ ತರಗತಿಗಳಿಗೆ ಅನ್ವಯವಾಗುವಂತೆ ವೇಳಾ ಪಟ್ಟಿಯನ್ನು ತಯಾರಿಸಿದ್ದಾರೆ.
ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುವುದಿಲ್ಲವಾದರೂ ಪ್ರತಿಯೊಂದು ಕಾಲೇಜಲ್ಲಿ ಕೋವಿಡ್-19 ಸಂಬಂಧಿಸಿದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಪಾಠ ಮಾಡಬೇಕೆಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಹಾಗೆಯೇ, ಸದರಿ ವ್ಯವಸ್ಥೆಯನ್ನು ಎಲ್ಲ ಕಾಲೇಜಿಗಳು ಅನೂಚಾನಾಗಿ ಪಾಲಿಸುತ್ತಿರುವ ಬಗ್ಗೆ ಉಪ ನಿರ್ದೇಶಕರುಗಳು ಕೇಂದ್ರ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಪದವಿ ಪುರ್ವ ಕಾಲೇಜುಗಳಲ್ಲಿ ತರಗತಿಗಳನ್ನು ಸೂಕ್ತ ರೀತಿಯಲ್ಲಿ ನಡೆಸುತ್ತಿರುವ ಬಗ್ಗೆ ಆಯಾ ಜಿಲ್ಲೆಗಳ ಉಪ ನಿರ್ದೇಶಕರು ಆಗಾಗ ಕಾಲೇಜುಗಳಿಗೆ ಭೇಟಿ ನೀಡಿ ಖಾತರಿ ಪಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.
ಜುಲೈ 7ರಿಂದಲೇ ಉಪನ್ಯಾಸಕರು ಕಾಲೇಜುಗಳಿಗೆ ಹಾಜರಾಗುತ್ತಿರುವುದರಿಂದ ಮತ್ತು ಪ್ರಸಕ್ತ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆ ಆರಂಭವಾಗಿರದ ಕಾರಣ ತರಗತಿಗಳನ್ನು ಆರಂಭಿಸಲೇ ಬೇಕಿರುವ ಹಿನ್ನೆಲೆಯಲ್ಲಿ ಉಪನ್ಯಾಸಕರು ತಾವಿರುವ ಕಾಲೇಜುಗಳಿಂದ ಪಾಠಗಳನ್ನು ತೆಗೆದುಕೊಳ್ಳಬೇಕು ಅಂತ ಹೇಳಲಾಗಿದೆ.












Click it and Unblock the Notifications