Government Schools: ಅಗತ್ಯವಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಬದಲಿಗೆ ಚಪ್ಪಲಿ ವಿತರಣೆ
ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್ ವಿತರಣೆಗೆಂದು ಒಟ್ಟು 06 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಸರ್ಕಾರ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಅಗತ್ಯವಿರುವ ಕಡೆಗಳಲ್ಲಿ ಶೂಗಳಿಗೆ ಬದಲಾಗಿ ಚಪ್ಪಲಿ ನೀಡಲು ಮುಂದಾಗಿದೆ. 2026-27ನೇ ಸಾಲಿನ ವಿತರಣೆಗೆ ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸಿದ್ದು ಖರೀದಿ, ಎಷ್ಟು ಮಕ್ಕಳಿದ್ದಾರೆ, ಶಾಲೆಗಳ ದಾಖಲಾತಿ ಪಡೆಯುತ್ತಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇಂತಿಷ್ಟು ಹಣ ನಿಗದಿ ಮಾಡಲಾಗಿದೆ. ಈ ವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಆಯಾ ಭಾಗದ ಹವಾಮಾನ, ವಾತಾವರಣಕ್ಕೆ ಅನುಗುಣವಾಗಿ ಶೂಗಳಿಗೆ ಬದಲು ಚಪ್ಪಲಿ ನೀಡಲು ತಿರ್ಮಾನಿಸಿದೆ. ಈ ಸಂಬಂಧ ಮಾಹಿತಿ ಸಂಗ್ರಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು 'ವಿಕ' ವರದಿ ಮಾಡಿದೆ.

ಶೂ ಧರಿಸಲು ಸಾಧ್ಯವಾಗದ ಕಡೆ ಚಪ್ಪಲಿ ವಿತರಣೆ
ರಾಜ್ಯದಲ್ಲಿ ವಾತಾವರಣ ಎಲ್ಲ ಕಡೆಗಳಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಕೆಲವು ಜಿಲ್ಲೆಗಳಲ್ಲಿ ನಿರಂತರ ಮಳೆ ಆಗುತ್ತದೆ. ಅಲ್ಲಿ ಮಕ್ಕಳು ಶೂ, ಸಾಕ್ಸ್ ಹಾಕಿಕೊಂಡು ಬರಲು ಸಮಸ್ಯೆ ಆಗುತ್ತದೆ. ಬೇಸಿಗೆ ವೇಳೆ, ಮಳೆಗಾದಲ್ಲಿ ಮಕ್ಕಳು ಶೂ ಧರಿಸಲು ಆಗದಿರಬಹುದು. ಆಯಾ ಭಾಗದ ಸ್ಥಳೀಯ ಹವಾಮಾನ ಆಧಾರದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಶೂ ಬದಲಿ ಚಪ್ಪಲಿ ನೀಡಲಿದೆ. ಅದಕ್ಕಾಗಿ 2026ನೇ ಸಾಲಿನಲ್ಲಿ ಎಸ್‌ಎಟಿಎಸ್ ತಂತ್ರಾಂಶದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪರಿಶೀಲಿಸಲಾಗುತ್ತದೆ. ಅದರ ಆಧಾರದಲ್ಲಿ ವಿತರಣೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ.
ಶೂಗಳಿಗೆ ದರ ನಿಗದಿ
ಒಬ್ಬ ವಿದ್ಯಾರ್ಥಿಗೆ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡಲು ಶಿಕ್ಷಣ ಇಲಾಖೆಗೆ ಸರ್ಕಾರ ಅನುದಾನ ಈಗಾಗಲೇ ಒದಗಿಸಿದೆ. 1-5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತಲಾ 265 ರೂಪಾಯಿ, 6-8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂಪಾಯಿ ಹಾಗೂ 9, 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 325 ರೂಪಾಯಿ ನಿಗದಿಪಡಿಸಲಾಗಿದೆ. ಮಳೆ, ಬೇಸಿಗೆ ವೇಳೆ ಮಕ್ಕಳು ಕಿರಿಕಿರಿ ಇಲ್ಲದೇ ಶಾಲೆಗೆ ಬರುವಂತಾಗಬೇಕು.ಮಳೆಗಾಲ ಅಥವಾ ಬೇರೆ ರೀತಿಯ ಹವಾಮಾನವಿದ್ದಾಗ ಮಕ್ಕಳು ಇಡೀ ದಿನ ಶೂ ಧರಿಸಿದರೆ ಸೋಂಕು ತಗುಲಬಹುದು. ಅದರ ನಿವಾರಣಗೆ ಚಪ್ಪಲಿ ವಿತರಣೆ ಸೂಕ್ತ ಎಂದು ಇಲಾಖೆ ಭಾವಿಸಿದೆ.
ಬಕ್ಕಾಲ್ ಚಪ್ಪಲಿ ನೀಡಿದರೆ ಉತ್ತಮ
ಶೂಗಳ ಬದಲಾಗಿ ಚಪ್ಪಲಿಗೆ ಯಾವ ಪ್ರದೇಶದಲ್ಲಿ ಎಷ್ಟು ಶಾಲೆಗಳಿಗೆ ಬೇಡಿಕೆ ಇದೆ ಎಂದು ನೋಡಿಕೊಂಡು ಆ ಬಗ್ಗೆ ಮಾಹಿತಿ ಕೆಲ ಹಾಕುತ್ತೇವೆ. ಮಕ್ಕಳಿಗೆ ಸಾಮಾನ್ಯ ಚಪ್ಪಲಿ ಬದಲಾಗಿ ಬಕ್ಕಾಲ್ ಇರುವ ಚಪ್ಪಲಿ ನೀಡುವುದು ಉತ್ತಮ ಅನ್ನಿಸುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಗಲಿ ಅವರು ತಿಳಿಸಿದ್ದಾರೆ. ಇನ್ನೂ ರಾಜ್ಯ ಶಿಕ್ಷಣ ಇಲಾಖೆ ಶೂ, ಸಾಕ್ಸ್, ಚಪ್ಪಲಿ ವಿತರಣೆ ಬಗ್ಗೆ ಹೆಚ್ಚಿನ ಮಾಹಿತಿ ಶೀಘ್ರವೇ ನೀಡಲಿದೆ.












Click it and Unblock the Notifications