ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನ್ಯಾಕ್ 'ಎ' ಗ್ರೇಡ್ ಮಾನ್ಯತೆ
ಬೆಂಗಳೂರು, ಜೂನ್ 13: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ಯಿಂದ ವಿಶ್ವವಿದ್ಯಾಲಯವು ಮೊದಲ ಮೌಲ್ಯಾಂಕನ ಅವಧಿಯಲ್ಲಿಯೇ 'ಎ'ಗ್ರೇಡ್ ಮಾನ್ಯತೆ ಪಡೆದಿದೆ ಎಂದು ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಅಹಲ್ಯಾ.ಎಸ್ ಮಾಹಿತಿ ಹಂಚಿಕೊಂಡಿದ್ದಾರೆ.
ವಿಶ್ವವಿದ್ಯಾಲಯವು 2022 ರಲ್ಲಿ ಮೌಲ್ಯಮಾಪನ ಮತ್ತು ಮಾನ್ಯತೆ ನೀಡಲು ಸಿದ್ಧತೆಗಳನ್ನು ಪ್ರಾರಂಭಿಸಿತು. ನಂತರ 2023 ರಲ್ಲಿ ಎಸ್ಎಸ್ಆರ್ ವರದಿಯನ್ನು ಸಲ್ಲಿಸಿತ್ತು. ಮೌಲ್ಯಮಾಪನದಲ್ಲಿ ಗುಣಮಟ್ಟದ ನಿಯತಾಂಕಗಳನ್ನು ನಿರ್ಣಯಿಸಲು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (NAAC) ತಂಡವು ಕಳೆದ ಮೇ 22, 23 ಮತ್ತು 24 ರಂದು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿಶ್ವವಿದ್ಯಾಲಯ ಮೌಲ್ಯಾಂಕನಕ್ಕೆ ಒಳಪಡಿಸಿತ್ತು ಎಂದು ಅವರು ತಿಳಿಸಿದರು.

ಈ ಸಾಧನೆಯ ಶ್ರೇಯಸ್ಸು ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರ ಸಮರ್ಪಿತ ನಾಯಕತ್ವ, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಲ್ಲುತ್ತದೆ. ವಿಶ್ವವಿದ್ಯಾಲಯಕ್ಕೆ ಸಿಕ್ಕ ಈ ಗೌರವವು ಶಿಕ್ಷಣ ಕುರಿತಾ ನಮ್ಮ ದೃಷ್ಟಿಕೋನ, ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲು ಪ್ರೇರೇಪಿಸುತ್ತದೆ.
ಅಲ್ಲದೇ ವಿದ್ಯಾರ್ಥಿಗಳನ್ನು ಸಮರ್ಥವಾಗಿ ಸಂಸ್ಕೃತ ವಿಶ್ವವಿದ್ಯಾಲಯವನ್ನು ನಿರಂತರವಾಗಿ ಮುನ್ನಡೆಸಲು ಶ್ರಮಿಸಲು, ಇನ್ನಷ್ಟು ಜವಾಭ್ದಾರಿ ನಿರ್ವಹಿಸಲು ಪ್ರೇಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ನ್ಯಾಕ್ 'ಎ' ಶ್ರೇಣಿ ಮಾನ್ಯತೆಗೆ ಸಂತಸ ವ್ಯಕ್ತಪಡಿಸಿದ ಕುಲಪತಿಗಳು ಐಕ್ಯೂಎಸಿಯ ನಿರ್ದೇಶಕರು, ಡೀನ್‌ಗಳು, ಬೋಧಕ ಸಿಬ್ಬಂದಿ ,ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ವಿವಿ ಸಂಸ್ಥಾಪನಾ ದಿನಾಚರಣೆ: 'ಎ' ಗ್ರೇಡ್ ಮಾನ್ಯತೆ
ಇತ್ತೀಚೆಗಷ್ಟೇ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯವು ಸಂಸ್ಥಾಪನೆ ದಿನಾಚರಣೆ ಆಚರಿಸಿಕೊಂಡಿತ್ತು. ಅದರ ಬೆನ್ನಲ್ಲೆ ನ್ಯಾಕ್‌ನಿಂದ ಎ ಗ್ರೇಡ್ ಮಾನ್ಯತೆ ಸಿಕ್ಕಿರುವುದಕ್ಕೆ ವಿವಿ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದೆ.
ಸಂಸ್ಥಾಪನಾ ದಿನಾಚರಣೆ ವೇಳೆ ಪಾಲ್ಗೊಂಡಿದ್ದ ನಿವೃತ್ತ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಗೋಪಬಂಧು ಮಿಶ್ರಾ, ಗುಜರಾತ್‌ನ ಉಪನ್ಯಾಸಕ ಸೊಮನಾಥ್ ಅವರು ವಿಶೇಷ ಉಪನ್ಯಾಸ ನೀಡಿದರು. ಈ ವೇಳೆ ವಿಶ್ವವಿದ್ಯಾಲಯದಲ್ಲಿನ ಒಳಗೊಂಡಿರುವ ಆಂತರಿಕ ಮೌಲ್ಯಗಳನ್ನು ಮತ್ತು ಸಂಸ್ಕೃತ ಭಾಷೆಯ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅಗತ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ರಾಜ್ಯದಾದ್ಯಂತ ಸಂಸ್ಕೃತ ಭಾಷೆಯ ಜಾಗೃತಿಯನ್ನು ಹರಡುವ ಪ್ರಯತ್ನದ ಫಲವಾಗಿ ಸ್ಥಾಪಿತವಾಗಿದೆ. ಇದಕ್ಕೆ ಕಾರಣವಾದ ಸರ್ಕಾರವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಸ್ಕೃತ ವಿವಿ ಕುಲಪತಿಗಳಾದ ಡಾ.ಎಸ್.ಅಹಲ್ಯಾ ಶರ್ಮ ಅವರು ಸರ್ವಜನರ ಭಾಷೆಯನ್ನಾಗಿ ಮಾಡಲು ಒತ್ತು ನೀಡಬೇಕು. ವಾರಣಾಸಿಯಲ್ಲಿ ನಡೆದ ಅಖಿಲ ಭಾರತ ಮಟ್ಟದ ಶಾಸ್ತ್ರೀಯ ಸ್ಪರ್ಧೆಗಳಲ್ಲಿ ಸಮಗ್ರ ಪ್ರಶಸ್ತಿ ಪಡೆದು ವಿಜಯ ವೈಜಯಂತಿಯನ್ನು ಕರ್ನಾಟಕಕ್ಕೆ ತಂದದ್ದು ನಮ್ಮ ಸಂಸ್ಕೃತ ವಿವಿ ಎಂದು ಹೇಳಿದರು. ಈ ವೇಳೆ ವಿವಿ ಸಂಯೋಜಿತ ಕಾಲೇಜುಗಳ 25 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು.











Click it and Unblock the Notifications