Karnataka Budget 2023: ಈ ವರ್ಷದ ಬಜೆಟ್, ಅಭಿವೃದ್ಧಿ, ಹಣಕಾಸಿನ ಕೊರತೆ ಬಗ್ಗೆ ಬೊಮ್ಮಾಯಿ ಉತ್ತರ
ರಾಜ್ಯದಲ್ಲಿ ಸರ್ಕಾರ ನಿರ್ದಿಷ್ಟ ಗುರಿ ತಲುಪಲು ಇದ್ದ ಆರ್ಥಿಕ ಕೊರತೆ ಇತ್ತು, ಅದನ್ನು ಸರ್ಕಾರ ಮೀರಿ ಬೆಳೆದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕ ಬಜೆಟ್ 2023, ಅಭಿವೃದ್ಧಿ, ಹಣಕಾಸಿನ ಬಗ್ಗೆ ಉತ್ತರಿಸಿದ್ದು, ಹೀಗೆ.
ಹಾವೇರಿ: ಜನವರಿ 29: ರಾಜ್ಯದಲ್ಲಿ ಸರ್ಕಾರ ನಿರ್ದಿಷ್ಟ ಗುರಿ ತಲುಪಲು ಇದ್ದ ಆರ್ಥಿಕ ಕೊರತೆ ಮೀರಿ, ಅಧಿಕ ಹಣ ಸಂಗ್ರವಾಗಿದೆ. ಹಣಕಾಸಿನ ಕೊರತೆ ಇಲ್ಲದಾಗಿದ್ದು, ಉತ್ತಮ ಬಜೆಟ್, ಬಡ ಜನರಪರವಾದ ಬಜೆಟ್ ಮಂಡಲಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾನುವಾರ ಹಾವೇರಿ ಜಿಲ್ಲೆಯ ತವರೂರು ಶಿಗ್ಗಾವಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಆಯವ್ಯಯ 2022 (Karnataka Budget 2023) ರೈತರು, ದೀನ ದಲಿತರು, ಯುವಕರು, ಮಹಿಳೆಯರು, ದುಡಿಯುವ ವರ್ಗ, ಜನಪರವಾಗಿರುತ್ತದೆ. ದುಡಿಮೆಗೆ ಯೋಗ್ಯ ಬೆಲೆ ಸಿಗುವ ರೀತಿಯಲ್ಲಿ ನಮ್ಮ ಕಾರ್ಯಕ್ರಮಗಳು ಇರಲಿವೆ ಎಂದರು.
ಹತ್ತು ಹಲವಾರು ವರ್ಷಗಳಿಂದ ಸರ್ಕಾರಗಳು ಮಾಡಿರುವ ಸಾಲವನ್ನು ತೀರಿಸುವ ಹೊಣೆಗಾರಿಕೆ ನಮ್ಮ ಮೇಲೆ ಇದೆ. ಕೇವಲ ಶೇ.9ರಷ್ಟು ರಾಜ್ಯದ ಅಭಿವೃದ್ಧಿ ಆಗುತ್ತಿದೆ. ಅದರ ಗತಿಯನ್ನಿಟ್ಟುಕೊಂಡು ಸಾಮಾಜಿಕವಾಗಿ ಅಭಿವೃದ್ಧಿ ಮಾಡಿ ಸಮತೋಲನ ಮಾಡಿಕೊಳ್ಳುವ ಅವಶ್ಯಕತೆಯಿದೆ. ಮುಂದಿನ ಎರಡು, ಮೂರು ವರ್ಷ ಸಮತೋಲನ ಕಾಪಾಡಿಕೊಂಡರೆ ಇನ್ನಷ್ಟು ಆದಾಯ ಬರುವ ನಿರೀಕ್ಷೆಯಿದೆ.

ಆರ್ಥಿಕವಾಗಿ ರಾಜ್ಯ ವೇಗ ಪಡೆದಿದೆ
ಈ ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ನಾವು ವೇಗವನ್ನು ಕಂಡಿದ್ದೇವೆ. ನಾನು ಅಧಿಕಾರ ತೆಗೆದುಕೊಂಡಾಗ 5 ಸಾವಿರ ಕೋಟಿ ರಾಜ್ಯದ ಬೊಕ್ಕಸಕ್ಕೆ ನಮ್ಮ ನಿರ್ಧಿಷ್ಟ ಗುರಿಗೆ ಕೊರತೆಯಿತ್ತು. ಅದನ್ನು ನಾವು 5 ಸಾವಿರ ಕೋಟಿ ತುಂಬುವುದಲ್ಲದೇ, 13 ಸಾವಿರ ಕೋಟಿ ಅಧಿಕವಾಗಿ ಸಂಗ್ರಹ ಮಾಡಿದ್ದೇವೆ. 72 ಸಾವಿರ ಕೋಟಿ ಸಾಲ ತೆಗೆದುಕೊಳ್ಳುವ ಅವಕಾಶ ಇದ್ದರೂ ನಾವು ಕೇವಲ 61 ಸಾವಿರ ಕೋಟಿಗೆ ಮಿತಿಗೊಳಿಸಿದ್ದೇವೆ. ಈ ವರ್ಷವೂ ಕೂಡ ನಮ್ಮ ಹಣಕಾಸಿನ ಸಂಗ್ರಹ ಉತ್ತಮವಾಗಿದೆ. ನಾವು ಈ ವರ್ಷ 61 ಸಾವಿರಕ್ಕೆ ಮಿತಿಗೊಳಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ಜೂನ್‌ಗೆ 8101 ಶಾಲಾ ಕಟ್ಟಡ ಪೂರ್ಣ?
ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ನಂತರದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿರುವ ಸಂದರ್ಭದಲ್ಲಿ ಕೆಳಹಂತದ ಜನಸಮುದಾಯಕ್ಕೆ ಇನ್ನಷ್ಟು ಸಹಾಯವನ್ನು ಮಾಡಿ, ಅವರನ್ನು ಕೂಡ ಮುಖ್ಯ ವಾಹಿನಿಗೆ ಬರಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಈ ವರ್ಷ 8101 ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ತೆಗೆದುಕೊಂಡಿದ್ದೇವೆ. ಅವೆಲ್ಲವೂ ಮೇ, ಜೂನ್ ವೇಳೆಗೆ ನಿರ್ಮಾಣ ಆಗುತ್ತವೆ. ಅದೇ ವೇಗವನ್ನು ಮುಂದಿನ ದಿನಗಳಲ್ಲಿ ಮುಂದುವರಿಸಲಿದ್ದೇವೆ. ಆರೋಗ್ಯ ಕ್ಷೇತ್ರದಲ್ಲಿ ನಾವು ಪ್ರಗತಿಯಲ್ಲಿದ್ದು, ಆರೋಗ್ಯ, ಶಿಕ್ಷಣದ ಮತ್ತು ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಚುನಾವಣೆಯ ಪ್ರಭಾವ ಬಜೆಟ್ ಮೇಲೆ ಇರುತ್ತದೆ. ನಾವು ಕೋವಿಡ್ ನಂತರದಲ್ಲಿ ಏನು ಆರ್ಥಿಕವಾಗಿ ಮುಂದೆ ಹೋಗುತ್ತಿದ್ದೇವೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಮುಖ್ಯ. ಆರ್ಥಿಕ ಶಿಸ್ತು ತಂದು ರಾಜ್ಯದ ಹಿತದೃಷ್ಟಿಯನ್ನು ನಮ್ಮ ಗಮನದಲ್ಲಿಟ್ಟುಕೊಂಡಿದ್ದೇವೆ ಎಂದರು.

ಉತ್ತರ ಕರ್ನಾಟಕದಲ್ಲಿ ಎರಡು ಮಾದರಿ ಕ್ಷೇತ್ರ: ಸಿಎಂ
ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಶಿಗ್ಗಾಂವಿ ಮತ್ತು ಸವಣೂರು ಮಾಡಲು ನಾನು ಪಣ ತೊಟ್ಟಿದ್ದು, ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಿಕ್ಷಣ, ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಾನು ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿದ್ದೇನೆ.
ಶಿಗ್ಗಾಂವ ಸವಣೂರು ಕ್ಷೇತ್ರದ ಜನತೆ ಬಹಳ ದೊಡ್ಡ ಪ್ರಮಾಣದಲ್ಲಿ ಸೇರಿ ನನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಿ ಹಾರೈಸಿದ್ದಾರೆ. ಅವರ ಆಶೀರ್ವಾದದಿಂದ ನಾನು ಇವತ್ತು ರಾಜ್ಯದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗಿದೆ. ಕ್ಷೇತ್ರದ ಜನತೆಗೆ ಕೋಟಿ ನಮನಗಳು ಎಂದರು.

ಅಮಿತ್ ಶಾ ಭೇಟಿ, ನಮ್ಮ ಭಾಗದಲ್ಲಿ ಬಜೆಪಿ ಅಲೆ
ಕಿತ್ತೂರು ಕರ್ನಾಟಕ ಭಾಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಭೇಟಿಯಿಂದ ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಲೆ ಹೆಚ್ಚಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ಅಲೆ ಸುನಾಮಿಯಾಗಿ, ನಾವು ಕಳೆದ ಭಾರಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications