ಜುಲೈ 18ರಿಂದ ಸರ್ಕಾರಿ ಬಸ್ ಸಂಚಾರವಿಲ್ಲ?
ಬೆಂಗಳೂರು, ಜುಲೈ 01 : ಕರ್ನಾಟಕ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಜುಲೈ 18ರಿಂದ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದು, ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಬುಧವಾರ ನಡೆದ ಸಚಿಚ ಸಂಪುಟ ಸಭೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ನೌಕರರಿಗೆ ಶೇ 8ರಷ್ಟು ವೇತನ ಹೆಚ್ಚಳ ಮಾಡಲು ಒಪ್ಪಿಗೆ ನೀಡಲಾಗಿತ್ತು. 2016ರ ಜನವರಿ 1ರಿಂದಲೇ ಅನ್ವಯವಾಗುವಂತೆ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. [ಸಾರಿಗೆ ಸಂಸ್ಥೆ ನೌಕರರಿಗೆ ಶೇ 8ರಷ್ಟು ವೇತನ ಹೆಚ್ಚಳ]

ಆದರೆ, ಸಾರಿಗೆ ಸಂಸ್ಥೆಗಳ ನೌಕರರು ಶೇ 45ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಮುಂದಿಟ್ಟಿದ್ದಾರೆ. ಸರ್ಕಾರ ವೇತನ ಹೆಚ್ಚಳದ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡಿದೆ. ನಾಲ್ಕು ವರ್ಷಗಳಿಂದ ವೇತನ ಹೆಚ್ಚಳವಾಗಿರಲಿಲ್ಲ. ಈಗ ಕೇವಲ ಶೇ 8ರಷ್ಟು ವೇತನ ಹೆಚ್ಚಳ ಮಾಡಿದ್ದಾರೆ ಎಂಬುದು ನೌಕರರ ಆರೋಪವಾಗಿದೆ.
'ವೇತನ ಹೆಚ್ಚಳಕ್ಕೆ ಆಗ್ರಹಿಸಿ ಜುಲೈ 18ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ' ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಐಟಿಯು ಜಂಟಿ ಕಾರ್ಯದರ್ಶಿ ಆನಂದ್ ಹೇಳಿದ್ದಾರೆ. ಇದರಿಂದ ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.
ಬಿಎಂಟಿಸಿ, ಕೆಎಸ್ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿ ಸೇರಿ ರಾಜ್ಯದಲ್ಲಿ 1,15,694 ನೌಕರರಿದ್ದಾರೆ.












Click it and Unblock the Notifications