Karnataka Rains: ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಜುಲೈ ಜಿಲ್ಲಾವಾರು ಮಳೆ ವಿವರ
ಬೆಂಗಳೂರು, ಆಗಸ್ಟ್ 01: ಕರ್ನಾಟಕ ರಾಜ್ಯದಲ್ಲಿ ಕಳೆದ ಸುಮಾರು ಒಂದು ತಿಂಗಳಿನಿಂದ ಮುಂಗಾರು ಮಳೆ ಅಬ್ಬರಿಸುತ್ತಿದೆ. ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ಉತ್ತಮ ಮಳೆ ಆಗಿದೆ. ಜುಲೈ 1ರಿಂದ ಜುಲೈ 30ರವರೆಗೆ ಯಾವೊಂದು ಜಿಲ್ಲೆಯಲ್ಲಿ ಸಹ ಮಳೆ ಕೊರತೆ ಆಗಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಜೂನ್ ಅಂತ್ಯಕ್ಕೆ ಆರ್ಭಟಿಸಿ ತಣ್ಣಗಾಗಿದ್ದ ಮಳೆ ಜುಲೈ ತಿಂಗಳಲ್ಲಿ ಅತ್ಯಧಿಕ ದಿನಗಳ ಕಾಲ ಸುರಿದಿದೆ. ಮಲೆನಾಡು, ಕರಾವಳಿ, ಉತ್ತರ ಒಳನಾಡಿನಲ್ಲಿ ಹೇರಳ ಪ್ರಮಾಣದಲ್ಲಿ ಮಳೆ ಸುರಿದಿದೆ. ನಿರಂತರ ಮಳೆಗೆ ಜನರು ತತ್ತರಿಸಿದ್ದಾರೆ. ರಾಜ್ಯದಲ್ಲಿ ಜುಲೈನಲ್ಲಿ ವಾಡಿಕೆಗಿಂತ ಬರೋಬ್ಬರಿ ಶೇ.50ರಷ್ಟು ಅತ್ಯಧಿಕ ಮಳೆ ದಾಖಲಾಗಿದೆ.

ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ರಾಜ್ಯಾದ್ಯಂತ ಬತ್ತಿ ಹೋಗಿದ್ದ ಜಲಾಶಯಗಳು, ನದಿಗಳಿಗೆ ಜೀವ ಕಳೆ ಬಂದಿದೆ. ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕದ ನದಿ ತೀರ ಪ್ರದೇಶಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕೆಲವೆಡೆ ಜನಜೀವನ ಅಸ್ತವೆಸ್ತವಾಗಿದೆ.
ರಾಜ್ಯದಲ್ಲಿ ಜೂನ್ ತಿಂಗಳಿನಿಂದಲೂ ಈವರೆಗೆ ವಿವಿಧ ಜಿಲ್ಲೆಗಳಲ್ಲಿ ಉಂಟಾಗಿದ್ದ ಮಳೆ ಕೊರತೆ ಸದ್ಯ ನೀಗಿದಂತಾಗಿದೆ. ಆಗಸ್ಟ್ ಮೊದಲ ವಾರಪೂರ್ತಿ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿದೆ. ಈ ಮಟ್ಟದಲ್ಲಿ ಮಳೆ ಸುರಿಯಲುಲಿ ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವೈಪರಿತ್ಯಗಳೇ ಕಾರಣ ಎಂದು ಐಎಂಡಿ ವಿಜ್ಞಾನಿಗಳು ತಿಳಿಸಿದ್ದಾರೆ.
ಜುಲೈ ತಿಂಗಳ ಮಳೆ ಎಷ್ಟು? ಅಂಕಿ-ಸಂಖ್ಯೆ
ಜುಲೈ 1ರಿಂದ ಜುಲೈ 31ರವರೆಗೆ ಕರ್ನಾಟಕದಲ್ಲಿ ಒಟ್ಟು 271 ಮಿಲಿ ಮೀಟರ್ ಮಳೆ ಆಗಬೇಕಿತ್ತು. ಸದ್ಯ ಅದಕ್ಕಿಂತಲೂ ಶೇಕಡಾ 50ರಷ್ಟು ಅಧಿಕ ಮಳೆ ಆಗಿದೆ. ಅಂದರೆ ವಾಡಿಕೆಗಿಂತ 408 ಮಿಲಿ ಮೀಟರ್ ಮಳೆ ಹೆಚ್ಚಾಗಿದೆ. ಹಾಗಾದರೆ ಯಾವ ಭಾಗಗಳಲ್ಲಿ ಎಷ್ಟೆಷ್ಟು ಮಳೆ ಆಗಿದೆ? ಎಂಬ ಮಾಹಿತಿ ಇಲ್ಲಿದೆ.

* ಮಲೆನಾಡಿನಲ್ಲಿ ಜುಲೈ ಒಂದು ತಿಂಗಳಲ್ಲಿ ಅತ್ಯಧಿಕ ಮಳೆ ಆಗಿದೆ. ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನ ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾಡಿಕೆ 591 ಮಿ.ಮೀ. ಗಿಂತಲೂ 984 ಮಿ.ಮೀ. ಅಧಿಕ (ಶೇ.66+) ಮಳೆ ದಾಖಲಾಗಿದೆ.
* ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆ 1142 ಮಿ.ಮೀ. ಮಳೆ ಆಗಬೇಕಿತ್ತು. ಈ ಪೈಕಿ 1811 ಮಿ.ಮೀ. ಅತ್ಯಧಿಕ (ಶೇ.59+) ಮಳೆ ದಾಖಲಾಗಿದೆ.
* ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ಕಳೆದ ತಿಂಗಳು ಒಟ್ಟು ವಾಡಿಕೆ 116 ಮಿ.ಮೀ. ಮಳೆ ಆಗಬೇಕಿತ್ತು. ಇಲ್ಲಿ ವಾಡಿಕೆಗಿಂತಲೂ ಶೇಕಡಾ 22ರಷ್ಟು ಅಧಿಕ ಅಂದರೆ 142 ಮಿ.ಮೀ. ಮಳೆ ದಾಖಲಾಗಿದೆ ಎಂದು ಐಎಂದಿ ವರದಿ ತಿಳಿಸಿದೆ.
* ಇನ್ನೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಹಾಸನ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಒಟ್ಟು ವಾಡಿಕೆ 79ರಷ್ಟು ವಾಡಿಕೆ ಮಳೆಗಿಂತ 100 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇದು ವಾಡಿಕೆಗಿಂತ ಶೇಕಡಾ 26ರಷ್ಟು ಅಧಿಕ ಮಳೆಯಾಗಿದೆ.
ಕರ್ನಾಟಕ ಮಳೆ ಮುನ್ಸೂಚನೆ: ರೆಡ್ ಅಲರ್ಟ್
ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆ ಆರ್ಭಟಿಸಲಿದೆ. ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 02ಕ್ಕೆ 'ರೆಡ್ ಅಲರ್ಟ್' ನೀಡಲಾಗಿದೆ. ನಂತರ ಎರಡು ದಿನ ಕರಾವಳಿ ಮೂರು ಜಿಲ್ಲೆಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಸುರಿಯುವ ಪ್ರಯುಕ್ತ ಮುಂದಿನ 48 ಗಂಟೆಗಳ ಕಾಲ 'ಹಳದಿ ಎಚ್ಚರಿಕೆ' ನೀಡಲಾಗಿದೆ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಕಂಡು ಬರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications