Organ Donors: ಅಂಗಾಂಗ ದಾನದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ: ಅಂಕಿಅಂಶ ಇಲ್ಲಿದೆ
ಬೆಂಗಳೂರು, ಆಗಸ್ಟ್ 3: ಅಂಗಾಂಗ ದಾನದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಅರಿವು ಮೂಡುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡ ಅಂಗಾಂಗದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ಇದೆಲ್ಲದರ ಪರಿಣಾಮ ಅಂಗಾಂಗ ದಾನಿಗಳ ಸಂಖ್ಯೆ ಕೂಡ ಗಮನಾರ್ಹವಾಗಿ ಹೆಚ್ಚಳವಾಗಿದೆ.
ಕರ್ನಾಟಕ ಮೃತ ಅಂಗಾಂಗ ದಾನಿಗಳ ಸಂಖ್ಯೆ ಮತ್ತು ಮೃತ ದಾನಿಗಳ ಕಸಿಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ರಾಷ್ಟ್ರೀಯ ಅಂಗ ಅಂಗಾಂಶ ಕಸಿ ಸಂಸ್ಥೆಯ ಅಂಕಿಅಂಶಗಳು ಈ ವರದಿಯನ್ನು ಬಹಿರಂಗಪಡಿಸಿವೆ.

2019ರಲ್ಲಿ ರಾಜ್ಯದಲ್ಲಿ 105 ಮೃತ ದಾನಿಗಳು ಅಂಗಾಂಗ ದಾನ ಮಾಡಿದ್ದರೆ, 2022ರಲ್ಲಿ ಶೇಕಡಾ 43ರಷ್ಟು ಹೆಚ್ಚಿದ್ದು ದಾನಿಗಳ ಸಂಖ್ಯೆ 151ಕ್ಕೆ ಹೆಚ್ಚಳವಾಗಿದೆ. 759 ಅಂಗಗಳು ಮತ್ತು ಅಂಗಾಂಶಗಳನ್ನು ಒಟ್ಟಾರೆಯಾಗಿ ದಾನಿಗಳಿಂದ ಪಡೆಯಲಾಗಿದೆ.
ರಾಜ್ಯದಲ್ಲಿ ಮರಣ ಹೊಂದಿದ ದಾನಿಗಳ ಕಸಿ ಚಟುವಟಿಕೆಗಳನ್ನು ಸಂಘಟಿಸುವ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಪ್ರಾಧಿಕಾರ (ಸೊಟ್ಟೊ) ಎಂದು ಗುರುತಿಸಲ್ಪಟ್ಟ ಸರ್ಕಾರಿ ಸಂಸ್ಥೆಯಾದ ಜೀವನಸಾರ್ಥಕಥೆಯ ಅಂಕಿಅಂಶಗಳು ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ದಾನಿಗಳನ್ನು ಹೊಂದಿದೆ ಎಂದು ಮಾಹಿತಿ ನೀಡಿದೆ.
ಆಸ್ಟರ್ ಆರ್‌ವಿ ಆಸ್ಪತ್ರೆಯ ಪ್ರಮುಖ ಸಲಹೆಗಾರ (ಕ್ರಿಟಿಕಲ್ ಕೇರ್) ಡಾ ಚಿನ್ನದುರೈ ಆರ್ ಮಾತನಾಡಿ, "ಅಂಗಾಂಗ ದಾನಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿ ಹೆಚ್ಚಳವಾದರೂ, ಇನ್ನೂ ಸುಧಾರಣೆಗೆ ಹೆಚ್ಚಿನ ಅವಕಾಶ ಇದೆ. ಸರಿಸುಮಾರು 4,000 ಮಿದುಳು ಸತ್ತ ರೋಗಿಗಳನ್ನು ಯಾರು ಸಂಭವನೀಯ ದಾನಿಗಳೆಂದು ಗುರುತಿಸಲಾಗುತ್ತಿಲ್ಲ. ವೈದ್ಯರು ದೀರ್ಘಕಾಲದ ರೋಗಿಗಳ ಸ್ಥಿತಿಯನ್ನು ಅಧ್ಯಯನ ಮಾಡಬೇಕು, ಶೀಘ್ರದಲ್ಲೇ ಬ್ರೈನ್ ಡೆಡ್ ಎಂದು ದೃಢೀಕರಿಸಲಾಗಿದೆ ಅಥವಾ ಈಗಾಗಲೇ ಮೆದುಳು ನಿಷ್ಕ್ರಿಯವಾಗಿದೆ ಮತ್ತು ಅವರ ಅಂಗಗಳನ್ನು ದಾನ ಮಾಡಲು ಸ್ವಯಂಪ್ರೇರಿತರಾಗಿ ಅವರ ಕುಟುಂಬಗಳಿಗೆ ಸಲಹೆ ನೀಡಬೇಕು." ಎಂದು ತಿಳಿಸಿರುವುದಾಗಿ ದಿ ನ್ಯೂ ಇಂಡಿಯನ್ಸ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜಾಗೃತಿ ಕಾರ್ಯಕ್ರಮಗಳು
ಹೆಚ್ಚಿದ ದಾನಿಗಳೊಂದಿಗೆ ರಾಜ್ಯವು ಪ್ರಗತಿ ಸಾಧಿಸಿದ್ದರೂ, ಅಂಗಾಂಗ ಕಸಿ ಅಗತ್ಯವಿರುವ ಯಾವುದೇ ರೋಗಿಗೆ ಕಾಯುವ ಸಮಯವು ಕನಿಷ್ಠ ಮೂರು ವರ್ಷಗಳವರೆಗೆ ಮುಂದುವರಿಯುತ್ತದೆ ಎಂದು ಹೇಳಲಾಗಿದೆ. ಮೂತ್ರಪಿಂಡ ಹೆಚ್ಚಾಗಿ ಕಸಿಗೆ ಒಳಗಾಗುತ್ತಿರುವ ಅಂಗವಾಗಿದೆ, ನಂತರದ ಸ್ಥಾನದಲ್ಲಿ ಯಕೃತ್ತು ಇದೆ ಎಂದು ಅಂಕಿ ಅಂಶ ತಿಳಿಸಿವೆ.
ಜೀವನ ಸಾರ್ಥಕಥೆಯ ಮುಖ್ಯ ಕಸಿ ಸಂಯೋಜಕರಾದ ಲೀಜಾಮೋಲ್ ಜೋಸೆಫ್, ರೋಗಿಯ ಮೆದುಳು ನಿಷ್ಟ್ಕ್ರಿಯವಾದಾಗ, ಸಾವನ್ನಪ್ಪಿದಾಗ ಅಂಗಾಂಗ ದಾನದ ಬಗ್ಗೆ ಮಾತನಾಡಬೇಕಾಗುತ್ತದೆ ಎನ್ನುವ ಸಂದಿಗ್ದತೆಯನ್ನು ವಿವರಿಸಿದರು. ಇದು ಅನಿವಾರ್ಯವಾಗಿದ್ದರೂ, ಸತ್ತವರ ಕುಟುಂಬದವರ ಜೊತೆ ಮಾತನಾಡುವುದು ಅಷ್ಟು ಸುಲಭವಲ್ಲ ಎಂದು ಹೇಳಿದರು.
ಆದರೂ ಈ ಮಾತುಕತೆಯನ್ನು ನಿಯಮಿತ ಮಧ್ಯಂತರದಲ್ಲಿ ಮಾಡಿದರೆ, ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೇರೇಪಿಸುತ್ತದೆ, ಹೆಚ್ಚಿನ ಜನ ಅದರಿಂದ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದರು. ದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಮತ್ತು ಮೆದುಳಿನ ಆರೋಗ್ಯ, ಮೃತ ಅಂಗಾಂಗ ದಾನ ಮತ್ತು ಅಂಗಾಂಗ ಕಸಿಗೆ ಸಂಬಂಧಿಸಿದ ಕಾನೂನುಬಾಹಿರ ಅಭ್ಯಾಸಗಳನ್ನು ನಿಯಂತ್ರಿಸುವ ಬಗ್ಗೆ ಜಾಗೃತಿ ಮೂಡಿಸಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಒಬ್ಬ ದಾನಿಯಿಂದ ಎಂಟು ಜನರಿಗೆ ಜೀವದಾನ
ಒಬ್ಬ ದಾನಿಯು ಎಂಟು ಜೀವಗಳನ್ನು ಉಳಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದೇ ವ್ಯಕ್ತಿ ಚರ್ಮ, ಮೂಳೆಗಳು, ಅಸ್ಥಿರಜ್ಜುಗಳು, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳ ಅಂಗಾಂಶ ದಾನದ ಮೂಲಕ 50 ಕ್ಕೂ ಹೆಚ್ಚು ಜನರ ಜೀವನವನ್ನು ಸುಧಾರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications