ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕೆಲೆಬ್ಬಿಸಿದ ಗೋವಾ: ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ
ಬೆಂಗಳೂರು, ಏಪ್ರಿಲ್. 16: ಗೋವಾದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಕನ್ನಡಿಗರಿಗೆ ಸೇರಿದ ಕೆಲವು ಮನೆಗಳನ್ನು ಕೆಡವಿ ಹಾಕಲಾಗಿದೆ. ಈ ವಿಷಯ ರಾಜಕೀಯ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ - ಬಿಜೆಪಿ ಕೆಸರೆರಚಾಟ ನಡೆಸುತ್ತಿರುವ ಹೊತ್ತಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ಕೂಡ ಗೋವಾ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಉತ್ತರ ಗೋವಾ ಜಿಲ್ಲೆಯ ಸಂಗೋಲ್ಡಾ ಗ್ರಾಮದಲ್ಲಿ ಸ್ಥಳೀಯ ಸಮುದಾಯ ಸಂಸ್ಥೆ ಒಡೆತನದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಒಟ್ಟು 22 ಮನೆಗಳನ್ನು ಶುಕ್ರವಾರ ಮತ್ತು ಶನಿವಾರದಂದು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಈ ಮನೆಗಳನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂದು ಆರೋಪಿಸಲಾಗಿದೆ. ಇವುಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಧ್ವಂಸ ಮಾಡಲಾಗಿದೆ ಎಂದು ಗೋವಾ ಬಿಜೆಪಿ ವಕ್ತಾರ ಗಿರಿರಾಜ್ ಪೈ ವೆರ್ಣೇಕರ್ ಹೇಳಿದ್ದಾರೆ.

ಗೋವಾ ಸರ್ಕಾರವನ್ನು ವಜಾಗೊಳಿಸಿ- ಕರವೇ
ಗೋವಾ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಕರ್ನಾಟಕ ರಕ್ಷಣ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ, "ಗೋವಾ ಸರ್ಕಾರ ಮತ್ತೆ ಕನ್ನಡಿಗರ ಮನೆಗಳನ್ನು ಕೆಡವಿ ಒಕ್ಕೆಲೆಬ್ಬಿಸುತ್ತಿದ್ದು, ಇಡೀ ಗೋವಾದಲ್ಲಿ ಕನ್ನಡಿಗರು ಯಾರೂ ಇರಬಾರದು ಎಂಬ ತೀರ್ಮಾನಕ್ಕೆ ಬಂದಂತಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಗೋವಾ ಸರ್ಕಾರವನ್ನು ವಜಾಗೊಳಿಸಿ, ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸುತ್ತೇನೆ" ಎಂದಿದ್ದಾರೆ.
"ಉತ್ತರ ಗೋವಾದ ಸಂಗೋಲ್ಡಾ ಪ್ರದೇಶದಲ್ಲಿ ನಿನ್ನೆ 15 ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನು ಜೆಸಿಬಿ ಬಳಿಸಿ ಧ್ವಂಸಗೊಳಿಸಲಾಗಿದೆ. ಅವರಿಗೆ ಅನ್ನ ನೀರು ಸೂರು ಇಲ್ಲದಂತೆ ಮಾಡಲಾಗಿದೆ. ಕನ್ನಡಿಗರ ಮನಸು ಭಾರವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಕಿಡಿಕಾರಿದ್ದಾರೆ.
"ನಾಲ್ಕು ದಶಕಗಳಿಂದ ಆ ಪ್ರದೇಶದಲ್ಲಿ ವಾಸವಾಗಿದ್ದ ಕನ್ನಡಿಗರನ್ನು ಏಕಾಏಕಿ ತೆರವುಗೊಳಿಸಲಾಗಿದೆ. ಹದಿನೈದು ಕನ್ನಡಿಗರ ಕುಟುಂಬಗಳು ಬೀದಿಪಾಲಾಗಿವೆ. ಸಂತ್ರಸ್ಥ ಕುಟುಂಬಗಳಿಗೆ ಯಾವುದೇ ಪುನರ್ವಸತಿ ನೀಡಲಾಗಿಲ್ಲ. ಸಿರಿಯಾ, ಲೆಬೆನಾನ್ ದೇಶಗಳಲ್ಲಿ ನಡೆಯುತ್ತಿರುವುದು ಗೋವಾದಲ್ಲಿ ನಡೆಯುತ್ತಿದೆ" ಎಂದು ಟೀಕಿಸಿದ್ದಾರೆ.
"ಗೋವಾದಲ್ಲಿ ಹೀಗೆ ಕನ್ನಡಿಗರನ್ನು ಗುರಿಯಾಗಿಟ್ಟುಕೊಂಡು ಅಲ್ಲಿನ ಸರ್ಕಾರ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆರನೇ ಬಾರಿ ಇಂಥ ದುಷ್ಕೃತ್ಯವನ್ನು ಎಸಗುತ್ತಿದೆ. ಇದು ನಿಸ್ಸಂಶಯವಾಗಿ ಜನಾಂಗೀಯ ದ್ವೇಷದ ಕುಕೃತ್ಯ. ಹೀಗಾಗಿ ಗೋವಾ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು" ಎಂದು ನಾರಾಯಣ ಗೌಡ ಆಗ್ರಹಿಸಿದ್ದಾರೆ.

"ಭಾರತದ ಸಂವಿಧಾನದ 29 ಮತ್ತು 30ನೇ ವಿಧಿಗಳು ಸ್ಪಷ್ಟವಾಗಿ ಭಾಷಾ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತವೆ. ಗೋವಾದಲ್ಲಿ ನಡೆಯುತ್ತಿರುವುದು ಸಂವಿಧಾನ ವಿರೋಧಿ ಕಾರ್ಯಾಚರಣೆ. ದೇಶದ ಯಾವುದೇ ಭಾಗದಲ್ಲಿ ಸರ್ಕಾರವೇ ಮುಂದೆ ನಿಂತು ಭಾಷಾ ಸಮುದಾಯವನ್ನು ಬೀದಿಗೆ ತಳ್ಳಿದ ಉದಾಹರಣೆ ಇಲ್ಲ" ಎಂದಿದ್ದಾರೆ.
"2005ರಲ್ಲಿ ಬೈನಾದಲ್ಲಿದ್ದ 1,162 ಕನ್ನಡಿಗ ಕುಟುಂಬಗಳನ್ನು ಬೀದಿಪಾಲು ಮಾಡಲಾಯಿತು. 2014 ರಲ್ಲಿ 70 ಕುಟುಂಬ, 2015 ರಲ್ಲಿ 157 ಕುಟುಂಬಗಳನ್ನು ಬೈನಾದಲ್ಲಿಯೇ ತೆರವುಗೊಳಿಸಲಾಯಿತು. 2017 ರಲ್ಲಿ ಮಂಗೂರ್ ಹಿಲ್ಸ್ ನಲ್ಲಿ 211 ಕುಟುಂಬಗಳನ್ನು, 2019 ರಲ್ಲಿ ಝರಿ ಪ್ರದೇಶದಲ್ಲಿದ್ದ 62 ಕುಟುಂಬಗಳನ್ನು ಗೋವಾ ಸರ್ಕಾರ ಒಕ್ಕಲೆಬ್ಬಿಸಿತ್ತು" ಎಂದು ಹೇಳಿದ್ದಾರೆ.
"ಗೋವಾ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮೇಲಿಂದ ಮೇಲೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವುದೇ ಅದರ ದೊಡ್ಡ ಅಜೆಂಡಾ ಆಗಿದೆ. ಹೀಗಾಗಿ ಈ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸುತ್ತೇನೆ" ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.
ಇನ್ನು, ಘಟನೆಯನ್ನ ಖಂಡಿಸಿದ್ದ ಸಿಎಂ ಸಿದ್ದರಾಮಯ್ಯ, "ಗೋವಾದ ಸಂಗೋಲ್ಡಾ ದಲ್ಲಿ ಕನ್ನಡಿಗರ ಮನೆಗಳನ್ನು ಧ್ವಂಸಗೊಳಿಸಿದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದೇನೆ. ಪರ್ಯಾಯ ಮಾರ್ಗಗಳನ್ನು ಒದಗಿಸುವವರೆಗೆ ಮುಂದಿನ ನೆಲಸಮವನ್ನು ತಕ್ಷಣವೇ ನಿಲ್ಲಿಸುವಂತೆ ನಾನು ಗೋವಾದ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಅವರಿಗೆ ಮನವಿ ಮಾಡುತ್ತೇನೆ" ಎಂದಿದ್ದರು. ಇದನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು.












Click it and Unblock the Notifications