Karnataka Bandh: ಕಾವೇರಿ ಕಿಚ್ಚು- ಕರ್ನಾಟಕ ಬಂದ್‌ಗೆ ಕರೆ ನೀಡಲು ಸಜ್ಜಾದ ಕರವೇ, ಇಂದು ಸಂಜೆಯೇ ನಿರ್ಧಾರ ಸಾಧ್ಯತೆ
ಬೆಂಗಳೂರು, ಸೆಪ್ಟೆಂಬರ್ 21: ಕಾವೇರಿ ಜಲವಿವಾದದಲ್ಲಿ ಕರ್ನಾಟಕ ಅಥವಾ ತಮಿಳುನಾಡು ಪರವಾಗಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ಸೂಚಿಸಿದಂತೆ ಕರ್ನಾಟಕವು ಪ್ರತಿದಿನ 5000 ಕ್ಯುಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡಬೇಕಿದೆ. ಇದನ್ನು ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದು ಕನ್ನಡ ಪರ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ನೆರೆದಿದ್ದ ಕನ್ನಡಪರ ಕಾರ್ಯಕರ್ತರು ರೋಡಿನಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡರೂ, ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲವೆಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡ ಬಣ ) ಕಾರ್ಯಕರ್ತರು ಬೆಂಗಳೂರಿನ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದರುವ ಕರವೇ ಕರ್ನಾಟಕ ಬಂದ್‌ಗೆ ಕರೆ ನೀಡಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಬಂದ್ ವಿಚಾರವನ್ನು ಚರ್ಚಿಸಲು ಇಂದು ಸಂಜೆ ಸಭೆ ಸೇರಲಾಗುವುದು. ಎಲ್ಲಾ ಕನ್ನಡ ಪರ ಸಂಘಟನೆಗಳು ಹಾಗೂ ರೈತಪರ ಸಂಘಗಳು ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ವೇಳೆ, ಬಂದ್ ದಿನಾಂಕವನ್ನು ಪ್ರಕಟಿಸಬಹುದು ಎಂದು ಹೇಳಲಾಗುತ್ತಿದೆ.
ಮಂಡ್ಯ, ಮೈಸೂರು, ಚಾಮರಾಜನಗರದಲ್ಲೂ ಪ್ರತಿಭಟನೆಗಳು ಭುಗಿಲೆದ್ದಿವೆ. ರಸ್ತೆಗಿಳಿದ ರೈತಪರ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಹಾಗೂ ತಮಿಳುನಾಡಿನ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದಲ್ಲಿ ಕಾವೇರಿ ನದಿಗಿಳಿದ ರೈತರು ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದ್ದಾರೆ.
ಸುಪ್ರೀಂ ಆದೇಶವೇ ಅಂತಿಮ ಎಂದ ತಮಿಳುನಾಡು
ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ಉತ್ತಮವಾಗಿದೆ ಹಾಗೂ ಇದು ನಿರ್ನಾಯಕವಾಗಿದೆ ಎಂದು ತಮಿಳುನಾಡು ಸರ್ಕಾರ ಪ್ರತಿಕ್ರಿಯಿಸಿದೆ.
ಈ ಕುರಿತು ಮಾತನಾಡಿರುವ ರಾಜ್ಯ ಜಲಸಂಪನ್ಮೂಲ ಸಚಿವ ದುರೈಮುರುಗನ್, ತಮಿಳುನಾಡು ತನ್ನ ಕಾವೇರಿ ನೀರಿನ ಪಾಲಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
'ಕಾವೇರಿ ವಿವಾದದ ಕುರಿತು ಮಾತುಕತೆಗೆ ಅವಕಾಶವಿಲ್ಲ. ಏಕೆಂದರೆ ಹಲವು ವರ್ಷಗಳಿಂದ ನಡೆದ ಮಾತುಕತೆಗಳು ಯಾವುದೇ ಫಲಿತಾಂಶವನ್ನು ನೀಡಿಲ್ಲ' ಎಂದು ದುರೈಮುರುಗನ್ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.
ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.












Click it and Unblock the Notifications