Karnataka Rains: ರಾಜ್ಯದಲ್ಲಿ ಇನ್ನೂ ಐದು ದಿನ ಮಳೆ ಅಬ್ಬರ: ಮೀನುಗಾರರಿಗೆ ಎಚ್ಚರಿಕೆ!
ಬಿಪರ್ ಜಾಯ್ ಚಂಡಮಾರುತ ಪರಿಣಾಮ ರಾಜ್ಯಕ್ಕೂ ತಟ್ಟಿದ್ದು ಇನ್ನೂ 5 ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೋಮವಾರ ಸಂಜೆ ಬೆಂಗಳೂರು ಸೇರಿಂದತೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗಿದೆ.
ಇನ್ನೂ ಐದು ದಿನಗಳ ಕಾಲ ರಾಜ್ಯದ ಹಲವೆಡೆ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಪರ್ ಜಾಯ್ ಚಂಡಮಾರುತ ಪರಿಣಾಮ ರಾಜ್ಯದ ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ಎಚ್ಚರಿಕೆ ನೀಡಲಾಗಿದೆ. ಕರಾವಳಿ ತೀರದ ಹಲವು ಕಡೆ ಭಾರಿ ಅಲೆಗಳ ಕಾರಣದಿಂದ ಕಡಲ್ಕೊರೆತ ಉಂಟಾಗಿದೆ.

ಕಡಲ ಕೊರೆತ ತಡೆಯಲು ಹಾಕಿದ್ದ ತಡೆಗೋಡೆ ಸಹ ಹಾಳಾಗಿದ್ದು, ಕರಾವಳಿ ಭಾಗದ ಜನರು ಆತಂಕಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಕಡಲ್ಕೊರೆತ ತಡೆಯಲು ಕಲ್ಲುಗಳನ್ನು ಹಾಕುವ ಕೆಲಸ ಆರಂಭಿಸಿದೆ.
ರಾಜ್ಯಾದ್ಯಂತ ಉತ್ತಮ ಮಳೆ
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಲವು ಪ್ರದೇಶದಗಳಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಮಿಂಚು, ಬಿರುಗಾಳಿ ಸಹಿತ ಮಳೆಯಾಗಲಿದ್ದು, ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದ ದಡದಲ್ಲಿ ವಾಸಿಸುವ ಕುಟುಂಬಗಳಿಗೆ ಕೂಡ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಉತ್ತರ ಒಳನಾಡಿ ಜಿಲ್ಲೆಗಳಲ್ಲಿ ಕೂಡ ಅಲ್ಲಲ್ಲಿ ಗುಡುಗು ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಮಲೆನಾಡು ಭಾಗದಲ್ಲಿ ಕೂಡ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಆಲಂಬಡಿ ಜೊತೇನಹಳ್ಳಿಯಲ್ಲಿ 118.5 ಮಿಮೀ ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂ ಮಾಹಿತಿ ನೀಡಿದೆ, ಇನ್ನು ಬೆಂಗಳೂರು ಭಾಗದಲ್ಲಿ ಮಹದೇವಪುರದ ವರ್ತೂರುನಲ್ಲಿ 94 ಮಿಮೀ ಮಳೆಯಾಗಿದೆ.












Click it and Unblock the Notifications