Karnataka Rains: ರಾಜ್ಯಾದ್ಯಂತ ಜುಲೈ 09ರವರೆಗೆ ಭರ್ಜರಿ ಮಳೆ ಆರ್ಭಟ, ಹವಾಮಾನ ಎಚ್ಚರಿಕೆ
ಬೆಂಗಳೂರು, ಜುಲೈ 01: ಬದಲಾದ ಹವಾಮಾನ ಪರಿಸ್ಥಿತಿಯಿಂದಾಗಿ ಕರ್ನಾಟಕದಲ್ಲಿ ಮತ್ತೆ ಭಾರೀ ಮಳೆ, ಶೀತದ ವಾತಾವರಣ ಕಂಡು ಬರಲಿದೆ. ಕಳೆದ ವಾರ ಅರ್ಧ ರಾಜ್ಯಕ್ಕೆ ಆವರಿಸಿದ್ದ ಮುಂಗಾರು ಮಳೆ ಇದೀಗ ಪೂರ್ತಿ ರಾಜ್ಯಕ್ಕೆ ಆವರಿಸಿ ಭರ್ಜರಿ ಮಳೆ ಸುರಿಸುವ ಲಕ್ಷಣಗಳು ಕಂಡು ಬಂದಿವೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡುವ ಮಾಹಿತಿ ಪ್ರಕಾರ, ರಾಜ್ಯದ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ವೈಪರಿತ್ಯಗಳು ಉಂಟಾಗಿವೆ. ಸಮುದ್ರ ಮೇಲ್ಮೈ ಸುಳಿಗಾಳಿ (ಸ್ಟ್ರಫ್) ಉಂಟಾಗಿರುವ ಕಾರಣದಿಂದಾಗಿ ಪಶ್ಚಿಮ ಘಟ್ಟ, ಕರಾವಳಿ ಜಿಲ್ಲೆಗಳು ಹಾಗೂ ಮಲೆನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಸುರಿಯಲಿದೆ.

ಕರಾವಳಿ, ಮಲೆನಾಡಿನ ನಂತರ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಭಾರೀಯಿಂದ ಅತ್ಯಧಿಕ ಮಳೆ ಮುನ್ಸೂಚನೆಯ ವಾತಾವರಣ ಸೃಷ್ಟಿಯಾಗಲಿದೆ. ಸದ್ಯದ ಮುನ್ಸೂಚನೆ ನೋಡಿದರೆ ಇಂದಿನಿಂದ ಜುಲೈ 09 ರವರೆಗೆ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆ ಆದರೆ, ಉಳಿದೆಡೆ ಭಾರೀ ಮತ್ತು ವಿಪರೀತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಈ ಕುರಿತು ಟ್ವೀಟ್ ಸಹ ಮಾಡಲಾಗಿದೆ.
ಮುಂಗಾರು ಕ್ರಮೇಣ ರಾಜ್ಯ ಆವರಿಸಲಿದೆ: ಭಾರೀ ಮಳೆ
ಇಲಾಖೆ ಪ್ರಕಟಿಸಿರುವ ಹವಾಮಾನ ವರದಿ ನಕ್ಷೆ ನೋಡಿದರೆ, ಜುಲೈ 2ರವರೆಗೆ ಸಾಧಾರಣದಿಂದ ಭಾರೀ ಮಳೆ ಆದರೆ, ನಂತರ ಎರಡು ದಿನ ಇಡೀ ಕರ್ನಾಟಕದಲ್ಲಿ ಮಳೆ ಆವರಿಸಲಿದೆ. ಆಗ ಕರಾವಳಿ ಮಲೆನಾಡಿಗೆ 200 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಆಗಬಹುದು. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿಗೆ 100 ಮಿಲಿ ಮೀಟರ್‌ಗಿಂತಲೂ ಅಧಿಕ ಮಳೆ ಸುರಿಯಬಹುದು.
ಜುಲೈ 5ನೇ ತಾರೀಖಿನ ವೇಳೆಗೆ ರಾಜ್ಯಾದ್ಯಂತ ಮುಂಗಾರು ಮತ್ತೆ ಆರ್ಭಟಿಸುವುದು ಖಚಿತವಾಗಲಿದೆ. ಈ ಮಳೆ ಜುಲೈ 9ರವರೆಗೆ ಮುಂದುವರಿಯಲಿದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?
ಕೊಡಗಿನ ಸೋಮವಾರಪೇಟೆಯಲ್ಲಿ 13.1 ಸೆಂಟಿ ಮಿಟರ್ ಮಳೆ ಆಗಿದೆ. ಈ ಭಾಗದಲ್ಲಿ ಅತ್ಯಧಿಕ ಮಳೆ ಆಗಿದೆ. ಇನ್ನೂಉಡುಪಿ ಜಿಲ್ಲೆಯ ಸಿದ್ದಾಪುರ, ಕಾರ್ಕಳ, ಕದ್ರಾದಲ್ಲಿ 6 ಸೆಂಟಿ ಮೀಟರ್ ಮಳೆ ಆಗಿದೆ. ಕುಂದಾಪುರದಲ್ಲಿ 5, ಉತ್ತರ ಕನ್ನಡದಲ್ಲಿ ಗೇರ್ಸೊಪ್ಪದಲ್ಲಿ 5ಸೆಂ.ಮೀ, ಕೊಡಗಿನ ಭಾಗಮಂಡಲ 5 ಸೆಂ.ಮೀ, ಉಡುಪಿಯ ಕೋಟದಲ್ಲಿ 4 ಸೆಂಟಿ ಮೀಟರ್ ಉಳಿದಂತೆ ಧರ್ಮಸ್ಥಳ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಒಂದಷ್ಟು ಮಲೆನಾಡಿ ಪ್ರದೇಶಗಳಲ್ಲಿ ಜೋರು ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ಸೋಮವಾರದ ವರದಿ ತಿಳಿಸಿದೆ.
ಸದ್ಯ ರಾಜ್ಯದಲ್ಲಿ ತಾಪಮಾನ ಎಲ್ಲ ಕಡೆಗಳಲ್ಲೂ ಇಳಿಕೆ ಆಗಿದೆ. ಅರ್ಧ ರಾಜ್ಯಕ್ಕೆ ಜೋರು ಮಳೆ ಆವರಿಸಿದರೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಇಳಿಕೆ ಆಗಿದ್ದು, ಚಳಿ ಹಾಗೂ ಮೋಡ ಕವಿದ ವಾತಾವರಣ ಕಂಡು ಬಂದಿದೆ.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ದಾಖಲಾಗುತ್ತಿದೆ. ಮುಂದಿನ ಒಂದು ವಾರ ಹಚ್ಚು ಮಳೆ ಬರುವ ಮುನ್ಸೂಚನೆ ಇದೆ. ಈ ಮಧ್ಯೆ ನಿರಂತರ ಮಳೆಯಿಂದಾಗಿ ಕೆಆರ್‌ಎಸ್, ಕಬಿನಿ, ಹಾರಂಗಿ, ಹೇಮಾವತಿ, ಭದ್ರಾ, ತುಂಗಭದ್ರಾ ಜಲಾಶಯಗಳಲ್ಲಿ ನ ನೀರಿನ ಪ್ರಮಾಣ ಏರಿಕೆ ಆಗುತ್ತಿದೆ. ಕಾವೇರಿ ನದಿ, ಕಪಿಲಾ, ಭದ್ರಾ, ಕೃಷ್ಣೆ ಸೇರಿದಂತೆ ರಾಜ್ಯದ ಅನೇಕ ನದಿಗಳು, ಕೆರೆಗಳಲ್ಲಿ ಜೀವ ಕಳೆ ಬಂದಿದೆ.












Click it and Unblock the Notifications