Karnataka Rains: ಆಗಸ್ಟ್ 2ರವರೆಗೆ ಉಡುಪಿ-ಬೀದರ್ ವರೆಗಿನ 16 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ
Karnataka Weather Forecast: ಬದಲಾದ ಹವಾಮಾನ ವೈಪರೀತ್ಯಗಳ ಪ್ರಭಾವದಿಂದಾಗಿ ಕರ್ನಾಟಕದ ಅರ್ಧ ರಾಜ್ಯಕ್ಕೆ ಭಾರೀ ಮುಂಗಾರು ಮಳೆ ಸುರಿಯಲಿದೆ. ಕೆಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದೆ. ಕರಾವಳಿ ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆ ನಿರೀಕ್ಷೆ ಇದೆ. ಉಡುಪಿಯಿಂದ ಬೀದರ್‍ವರೆಗಿನ 16 ಜಿಲ್ಲೆಗಳಿಗೆ ಇಂದು ಮತ್ತು ನಾಳೆ ಅತ್ಯಧಿಕ ಭಾರೀ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಉತ್ತಮ ಮಳೆಯಿಂದ ರಾಜ್ಯ ಜಲಾಶಯಗಳ ನೀರಿನ ಒಳಹರಿವು ಮತ್ತಷ್ಟು ಹೆಚ್ಚಾಗಲಿದೆ.
ಐಎಂಡಿ ವರದಿ ಪ್ರಕಾರ, ರಾಜ್ಯದ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯದ ಗಡಿ ಜಿಲ್ಲೆಯಾದ ಬೀದರ್‍ವರೆಗೆ ಒಟ್ಟು 16 ಜಿಲ್ಲೆಗಳಲ್ಲಿ ಭಾರೀಯಿಂದ ಅತ್ಯಧಿಕ ಭಾರೀ ಮಳೆ ಆಗಲಿದೆ. ಜುಲೈ 31ರ ಶುಕ್ರವಾರದಿಂದ ಮತ್ತು ಆಗಸ್ಟ್ 1ರವರೆಗೆ ಎರಡು ದಿನ 'ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಗದಗ, ಕೊಪ್ಪಳ, ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ರಾಯಚೂರು, ಕಲಬುರಗಿ, ಯಾದಗಿರಿ, ಬೀದರ್' ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಮುನ್ಸೂಚನಾ ವರದಿ ತಿಳಿಸಿದೆ.

ಈ ಭಾಗದಲ್ಲಿ ಹಗುರು ಮಳೆ, ಬರ ಭೀತಿ
ಇತ್ತರ ಬೆಂಗಳೂರು ನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಷ್ಟಾಗಿ ಮಳೆ ಆಗದೇ, ತುಂತುರು ಕೆಲವೆಡೆ ಸಾಧಾರಣ ಮಳೆ ಸುರಿಯುತ್ತಿದೆ. ಮೋಡ ಕವಿದ ವಾತಾವರಣ ನಿರ್ಮಾಣವಾದರೂ ನಿರೀಕ್ಷಿತ ಜೋರು ಮಳೆ ದಾಖಲಾಗಿಲ್ಲ. ಇದು ರೈತರ ನಿರಾಶೆಗೆ ಕಾರಣವಾಗಿದೆ. ಮುಂಗಾರು ಬೆಳೆಗಳು ಮುಂದಿನ ಕೆಲವೇ ವಾರಗಳಲ್ಲಿ ಕಟಾವಿಗೆ ಬರಲಿವೆ. ಉತ್ತಮ ಮಳೆ ಆಗಿದ್ದರೆ ಬರಗಾಲದ ಆತಂಕದ ನಡುವೆ ರೈತರು ತಕ್ಕಮಟ್ಟಿನ ಫಸಲು ಕಾಣುವ ಸಾಧ್ಯತೆ ಇತ್ತು. ಭಾರೀ ಮಳೆ ಮುನ್ಸೂಚನೆ ಮಧ್ಯೆ ಬರದ ಛಾಯೆ ರಾಜ್ಯವನ್ನು ಆವರಿಸಿದೆ.
ಆಗಸ್ಟ್ 2ರಿಂದ ಮಳೆ ದುರ್ಬಲ ಸಾಧ್ಯತೆ
ಮಲೆನಾಡು, ಕರಾವಳಿ ಭಾಗದಲ್ಲಿ ಕೆಲವು ವಾರಗಳಿಂದ ನಿರಂತರವಾಗಿ ಧಾರಾಕಾರ ಮಳೆ ಆಗುತ್ತಿದೆ. ಈ ಮಳೆ ಪಶ್ಚಿಮ ಘಟ್ಟಗಳ ಸಾಲಿಗೆ ಮಾತ್ರವೇ ಸಿಮೀತವಾಗಿತ್ತು, ಆಗಾಗ ಒಳನಾಡಿನ ಒಂದೆರಡು ಜಿಲ್ಲೆಗಳಿಗೂ ವಿಸ್ತರಿಸುತ್ತಿತ್ತು. ಇದೀಗ ಅರ್ಧರಾಜ್ಯಕ್ಕೆ ವಿಸ್ತರಣೆ ಆಗಿದ್ದು, ರೈತರ ಮಂದಹಾಸಕ್ಕೆ ಕಾರಣವಾಗಿದೆ. ಆದರೆ ಮುಂದಿನ ಎರಡು ದಿನ ಬಳಿಕ ಆಗಸ್ಟ್ 2ರ ನಂತರ ಕೆಲವು ದಿನಗಳ ಕಾಲ ಮುಂಗಾರು ಮತ್ತೆ ದುರ್ಬಲಗೊಳ್ಳಲಿದೆ. ಆಗ ಇಡೀ ರಾಜ್ಯಾದ್ಯಂತ ಹಗುರ ಮಳೆ ಮಾತ್ರವೇ ನಿರೀಕ್ಷಿಸಬಹುದು. ಕರಾವಳಿ ಮಳೆನಾಡಿನಲ್ಲೂ ಭಾರೀ ಮಳೆ ಮುಂದುವರಿಯುವುದು ಅನುಮಾನ ಎಂದು ಹವಾಮಾನ ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.


Click it and Unblock the Notifications
