Karnataka Rains: ನವೆಂಬರ್ 18 ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ, ಬೆಂಗಳೂರು ಹವಾಮಾನ ಹೇಗಿದೆ ನೋಡಿ!
ಕರ್ನಾಟಕವು ವಿಚಿತ್ರ ಹವಾಮಾನಕ್ಕೆ ಸಾಕ್ಷಿಯಾಗುತ್ತಿದೆ. ಕರ್ನಾಟಕದಲ್ಲಿ ಹಿಂಗಾರು ಅವಧಿ ಮುಕ್ತಾಯವಾಗಿ ಚಳಿಗಾಲ ಪ್ರಾರಂಭವಾದರೂ, ರಾಜ್ಯದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅಚ್ಚರಿಯ ವಿಷಯವೆಂದರೆ ರಾಜ್ಯದಲ್ಲಿ ಈ ತಿಂಗಳು ಸಹ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ರೈತರಲ್ಲಿ ಆತಂಕ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕರ್ನಾಟಕದ ಹಲವು ಭಾಗದಲ್ಲಿ ರೈತರು ಬೆಳೆ ನಷ್ಟವನ್ನು ಅನುಭವಿಸಿದ್ದಾರೆ. ಇದೀಗ ಮತ್ತೆ ಮಳೆ ಮುನ್ಸೂಚನೆ ಸಿಕ್ಕಿದೆ.
ರಾಜ್ಯದಲ್ಲಿ ನವೆಂಬರ್ 18ರಂದು ವಿವಿಧ ಭಾಗದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೇ ನವೆಂಬರ್ 25ರ ವರೆಗೆ ಹಾಗೂ ಅಲ್ಲಿಂದ ಡಿಸೆಂಬರ್ 3ರ ವರೆಗೂ ಸಹ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ವರುಣಾರ್ಭಟ ಜೋರಾಗಿದೆ. ಇದೀಗ ರಾಜ್ಯದ ಉಳಿದ ಜಿಲ್ಲೆಗಳಲ್ಲೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ನವೆಂಬರ್ 18: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇಂದು (ಸೋಮವಾರ) ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಅಲ್ಲದೇ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಹೇಳಿದೆ.
ಉಳಿದಂತೆ ಉತ್ತರ ಒಳ ಕರ್ನಾಟಕ, ದಕ್ಷಿಣ ಒಳ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆ ಇದೆ.
ಬೆಂಗಳೂರಲ್ಲಿ ಹವಾಮಾನ ಹೇಗಿದೆ ?
ಬೆಂಗಳೂರಲ್ಲಿ ಮುಂದಿನ ಎರಡು ದಿನಗಳ ಅವಧಿಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಮಿಂಚು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯೂ ಇದೆ. ಕೆಲವು ಭಾಗದಲ್ಲಿ ಮುಂಜಾನೆ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ.
ಇನ್ನು ಮುಂದಿನ 48 ಗಂಟೆಯ ಅವಧಿಯಲ್ಲಿ ಗರಿಷ್ಠ ತಾಪಮಾನವು 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನವು 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಳಿದಂತೆ ಇನ್ನೆರಡು ದಿನಗಳಲ್ಲಿ ರಾಜ್ಯದ ಹವಾಮಾನದಲ್ಲಿ ಮಹತ್ವದ ಬದಲಾವಣೆಗಳು ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಹೇಳಿದೆ.
ಇನ್ನು ದಕ್ಷಿಣ ಒಳನಾಡಿನಲ್ಲಿ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಕರ್ನಾಟಕದ ದಕ್ಷಿಣ ಒಳಭಾಗದಲ್ಲಿ ಕೆಲವು ಸ್ಥಳಗಳಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ ಕೆಲವು ಭಾಗದಲ್ಲಿ ಮಳೆಯಾಗಿದೆ. ಕರಾವಳಿ ಹಾಗೂ ಉತ್ತರ ಒಳ ಕರ್ನಾಟಕದ ಒಂದೆರಡು ಕಡೆ ಮಳೆಯಾಗಿದೆ.
ಎಲ್ಲೆಲ್ಲಿ ಮಳೆ: ಕಳೆದ 24 ಗಂಟೆಯ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ 1 ಸೆಂ.ಮೀ ಮಳೆಯಾಗಿದೆ. ಶ್ರವಣಬೆಳಗೊಳ 1 ಸೆಂ.ಮೀ, ಹೊಸಕೋಟೆ, ಅರಕಲಗೂಡು, ಚಿಂತಾಮಣಿ, ನಾಗಮಂಗಲ, ಚಾಮರಾಜನಗರ ಹಾಗೂ ಕೋಲಾರ ಜಿಲ್ಲೆಗಳಲ್ಲೂ ತಲಾ 1 ಸೆಂ.ಮೀ ಮಳೆಯಾಗಿರುವುದು ವರದಿಯಾಗಿದೆ.
ರಾಜ್ಯದಲ್ಲಿ ಮತ್ತೆ ಮಳೆಯಾಗುತ್ತಿರುವುದು ಸಾಮಾನ್ಯವಾಗಿಯೇ ರೈತರಲ್ಲಿ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಈಗಾಗಲೇ ಅಕಾಲಿಕ ಮಳೆಯಿಂದ ಭಾರಿ ನಷ್ಟವಾಗಿದೆ. ಇದೀಗ ಮತ್ತೆ ಮಳೆಯಾದರೆ, ಬೆಳೆ ಲೆಕ್ಕಾಚಾರ ತಲೆಕೆಳಗಾಗಲಿದೆ ಎನ್ನುವುದು ರೈತರ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications