Karnataka Rains : ಕರ್ನಾಟಕ ಮಳೆ: ದಕ್ಷಿಣ ಒಳನಾಡಿನಲ್ಲಿ 186% ಅಧಿಕ ಮಳೆ
ಬೆಂಗಳೂರು ಸೆ.02: ಕರ್ನಾಟಕದ ಎಲ್ಲ ಭಾಗಗಳಲ್ಲಿ ಆಗಸ್ಟ್ ತಿಂಗಳಲ್ಲಿ ಮುಂಗಾರು ಮಳೆ ಆರ್ಭಟ ಹೆಚ್ಚಿದ್ದು, ಮಳೆಗೆ ಕರ್ನಾಟಕ ತತ್ತರಿಸಿದೆ. ಈ ಪೈಕಿನಲ್ಲಿ ಆಗಸ್ಟ್‌ನಲ್ಲಿ ರಾಜ್ಯದ ದಕ್ಷಿಣ ಒಳನಾಡಿನ (ಎಸ್‌ಐಕೆ) ಭಾಗವು ವಾಡಿಕೆ ಮಳೆಗಿಂತಲೂ ಶೇ.186ರಷ್ಟು ಅಧಿಕ ಮಳೆ ದಾಖಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರದ (ಕೆಎಸ್ಎನ್‌ಡಿಎಂಸಿ) ವರದಿ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಕರ್ನಾಟಕದಲ್ಲಿ ವಾಡಿಕೆ 220 ಮಿಮೀ ನಷ್ಟು ಮಳೆ ಆಗಬೇಕಿತ್ತು. ಆದರೆ ವಾಡಿಕೆಗಿಂತಲೂ ಅದಿಕವಾಗಿ 294 ಮಿ.ಮೀ. ಮಳೆ ಬಿದ್ದಿದೆ. ಇದು ವಾಡಿಕೆಗಿಂತ 33 ರಷ್ಟು ಹೆಚ್ಚುವರಿ ಮಳೆ ಆಗಿದೆ. ಈ ಮೂಲಕ ಕಳೆದ ಮೂರು ತಿಂಗಳ ಮುಂಗಾರಿನಲ್ಲಿ ಕರ್ನಾಟಕದಲ್ಲಿ ನಿರಂತರವಾಗಿ ಅಧಿಕ ಮಳೆ ದಾಖಲಾಗಿದೆ.
ರಾಜ್ಯ ದಕ್ಷಿಣ ಒಳನಾಡಿನ ವ್ಯಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆ ಸೇರಿ ಒಟ್ಟು 16 ಜಿಲ್ಲೆಗಳು ಬರುತ್ತವೆ. ಇಷ್ಟು ಜಿಲ್ಲೆಗಳಲ್ಲಿ ಆಗಸ್ಟ್ ತಿಂಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆ
ಆಗಸ್ಟ್‌ನಲ್ಲಿ ದಕ್ಷಿಣ ಒಳನಾಡಿಗೆ ಆಗಬೇಕಿದ್ದ ವಾಡಿಕೆ ಮಳೆ 88ಮಿ.ಮೀ.ಗಿಂತಲೂ ಹೆಚ್ಚುವರಿಯಾಗಿ 252 ಮಿ.ಮೀ. ಮಳೆ ಆಗಿದೆ. ಇದರಿಂದ ಈ ಭಾಗದಲ್ಲಿ ರಾಜ್ಯದಲ್ಲೇ ಈ ತಿಂಗಳಲ್ಲಿ ಶೇ.186 ರಷ್ಟು ಅಧಿಕ ಮಳೆ ಬಿದ್ದಂತಾಗಿದೆ. ಅದೇ ರೀತಿ 118 ಮಿ.ಮೀ. ಮಳೆ ಪಡೆಯಬೇಕಿದ್ದ ಉತ್ತರ ಒಳನಾಡು ಸಹ ಹೆಚ್ಚುವರಿಯಾಗಿ 157 ಮಿ.ಮೀ. ಮಳೆ ಕಂಡಿದ್ದು, ಇದರಿಂದ ಈ ಭಾಗದಲ್ಲಿ ಶೇ.33ರಷ್ಟು ಭಾರಿ ಮಳೆ ಸುರಿದಿದೆ.

ಮಲೆನಾಡಿಗೂ ವಾಡಿಕೆಗಿಂತ ಹೆಚ್ಚು ಮಳೆ
ಇನ್ನು ಮಲೆನಾಡಿನ ಭಾಗ (ಚಿಕ್ಕಮಗಳೂರು, ಕೊಡಗು, ಮಡಿಕೇರಿ, ಶಿವಮೊಗ್ಗ) ಜಿಲ್ಲೆಗಳನ್ನು ಪ್ರತ್ಯೇಕವಾಗಿ ನೋಡುವುದಾದರೆ ಇಲ್ಲಿ ವಾಡಿಕೆ 423ಮಿ.ಮೀ. ಮಳೆ ಆಗಬೇಕಿದ್ದು, ಇಲ್ಲಿ ಒಟ್ಟು 516ಮಿ.ಮೀ. ಮಳೆ ಬಿದ್ದಿದ್ದು, ಈ ಭಾಗದಲ್ಲಿ ಶೇ. 22ರಷ್ಟು ಅಧಿಕ ಮಳೆ ಆದಂತಾಗಿದೆ.
ಮುಖ್ಯವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಒಳಗೊಂಡ ಕರಾವಳಿ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಕಡಿಮೆ ಆಗಿದೆ. ಇಲ್ಲಿ 823ಮಿ.ಮೀ. ವಾಡಿಕೆ ಮಳೆ ನಿರೀಕ್ಷೆಯಲ್ಲಿ ಕೇವಲ 751 ಮಿ.ಮೀ. ಮಳೆ ಆಗಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಆಗಸ್ಟ್‌ನಲ್ಲಿ ಶೇ.9ರಷ್ಟು ಕಡಿಮೆ ಮಳೆ ದಾಖಲಾಗಿದೆ.

ಮುಂಗಾರಿನಲ್ಲಿ ರಾಜ್ಯಕ್ಕೆ ಒಟ್ಟು 833 ಮಿ.ಮೀ ಮಳೆ ಬಿದ್ದಿದೆ
ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ ನೈಋತ್ಯ ಮುಂಗಾರಿನಲ್ಲಿ ಜೂನ್ 1 ರಿಂದ ಆಗಸ್ಟ್ 31 ರವರೆಗೆ 833 ಮಿ.ಮೀ ವಾಸ್ತವಿಕ ಮಳೆ ಆಗಿದೆ. ಇದು ವಾಡಿಕೆ 691 ಮಿ.ಮೀ. ಗಿಂತ ಶೇ.21 ರಷ್ಟು ಅಧಿಕ ಮಳೆ ಎಂದು ಕೆಎಸ್‌ಎನ್‌ಡಿಎಂಸಿ ವರ್ಗೀಕರಿಸಿದೆ. ಕಳೆದ ಜೂನ್‌ನಲ್ಲಿ ರಾಜ್ಯವು 156 ಮಿ.ಮೀ ವಾಸ್ತವಿಕ ಮಳೆಯನ್ನು ದಾಖಲಿಸಿತ್ತು. ಇದು 199 ಮಿ.ಮೀ ವಾಡಿಕೆ ಮಳೆಗಿಂತ ಕಡಿಮೆ ಆಗಿತ್ತು. ಅಂದರೆ ಮುಂಗಾರು ಆರಂಭದ ತಿಂಗಳಲ್ಲಿ ರಾಜ್ಯ ಶೇ. 22ರಷ್ಟು ಮಳೆಯ ಕೊರತೆ ಕಂಡಿತ್ತು ಎಂದು ವರದಿ ಮಾಹಿತಿ ನೀಡಿದೆ.

ಜುಲೈನಲ್ಲಿ ಶೇ.41ರಷ್ಟು ಹೆಚ್ಚುವರಿ ಮಳೆ
ಅದೇ ರೀತಿ ಜುಲೈ ಒಂದೇ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಮಳೆ ದಾಖಲಾಗಿತ್ತು. ಅಂದರೆ 271 ಮಿ.ಮೀ. ವಾಡಿಕೆ ಮಳೆಗೆ ವಿರುದ್ಧವಾಗಿ 383 ಮಿ.ಮೀ ವಾಸ್ತವಿಕ ಮಳೆ ದಾಖಲಾಗಿತ್ತು. ಇದು ವಾಡಿಕೆ ಮಳೆಗಿಂತಲೂ ಶೇ.41ರಷ್ಟು ಹೆಚ್ಚುವರಿ ಮಳೆ ಆಗಿದೆ. ಜೂನ್ ಒಂದು ತಿಂಗಳ ಹೊರತು ಪಡಿಸಿ ಮುಂಗಾರು ಋತುವಿನಲ್ಲಿ ರಾಜ್ಯಕ್ಕೆ ಬಹುತೇಕವಾಗಿ ಹೆಚ್ಚು ಮಳೆ ಬಿದ್ದಿದೆ.












Click it and Unblock the Notifications